ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜಕ್ಕೆ ಪಾಲಿಸ್ಟರ್‌ ಬಟ್ಟೆ, ಸಾತಂತ್ರ್ಯ ಚಳವಳಿಗೆ ಮಾಡುವ ಅವಮಾನ: ಖಾದರ್

Last Updated 9 ಆಗಸ್ಟ್ 2022, 10:19 IST
ಅಕ್ಷರ ಗಾತ್ರ

ಮಂಗಳೂರು: ‘ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ತಂದು, ಧ್ವಜ ತಯಾರಿಸಲು ಖಾದಿ ಬದಲು ಪಾಲಿಸ್ಟರ್‌ ಬಟ್ಟೆಯನ್ನು ಬಳಸಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದು ಸ್ವಾತಂತ್ರ್ಯ ಚಳವಳಿಗೆ ಮಾಡಿದ ಅವಮಾನ’ ಎಂದುವಿಧಾನಸಭೆಯವಿರೋಧಪಕ್ಷದಉಪನಾಯಕಯು.ಟಿ.ಖಾದರ್‌ಆರೋಪಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರಧ್ವಜವನ್ನು ಕೇವಲ ಬಟ್ಟೆಯಲ್ಲ. ಅದಕ್ಕೆ ಅದರದ್ದೇ ಪಾವಿತ್ರ್ಯ ಇದೆ. ಜನರ ಭಾವನೆಗಳು ಅದರ ಜೊತೆ ಮಿಳಿತವಾಗಿವೆ. ದೇಶಕ್ಕಾಗಿ ರಕ್ತ ಸುರಿಸಿದ ಸ್ವಾತಂತ್ರ್ಯ ಹೋರಾಟದ ಸಂಕೇತವಿದು. ಇದರ ಪಾವಿತ್ರ್ಯವನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದು’ ಎಂದರು.

‘ದೇಶದ ಸ್ವಾತಂತ್ರ್ಯ ಚಳವಳಿಯ ತಾಯಿಬೇರು ಖಾದಿ. ವಿದೇಶದಿಂದ ಪಾಲಿಸ್ಟರ್‌ ಮತ್ತು ಇತರ ಬಟ್ಟೆ ತಂದು ದೇಶದಲ್ಲಿ ಗುಡ್ಡೆ ಹಾಕುವುದನ್ನು ಪ್ರತಿಭಟಿಸಲು ಮಹಾತ್ಮ ಗಾಂಧಿ ಅವರು ಖಾದಿಯನ್ನೇ ಮುಂದಿಟ್ಟುಕೊಂಡು ಸ್ವರಾಜ್ಯ ಮತ್ತು ಸ್ವದೇಶಿ ಚಳವಳಿ ಕಟ್ಟಿದ್ದರು. ದೇಶದಾದ್ಯಂತ ಸ್ವಾಭಿಮಾನಿ ಆಂದೋಲನವನ್ನೇ ಆರಂಭಿಸಿದ್ದರು. ಖಾದಿಯಿಂದ ಬಟ್ಟೆಯನ್ನು ನೇಯುವ ಚರಕ ಸಾಮ್ರಾಜ್ಯಶಾಹಿ ಆಡಳಿತವನ್ನೇ ಕಿತ್ತೆಸೆದ ಸಂಕೇತವದು. ಎಲ್ಲಾ ಸರ್ಕಾರಗಳೂ ಖಾದಿಗೆ ಗೌರವ ಸಲ್ಲಿಸಿದ್ದವು. ದೇಶದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವಾಗ ಖಾದಿಗೆ ಇನ್ನಷ್ಟು ಮಹತ್ವ ಸಿಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು. ಪ್ರತಿಯೊಬ್ಬರೂ ಖಾದಿ ತೊಡುವಂತೆ ದೊಡ್ಡ ಮಟ್ಟದ ಸಂದೇಶವನ್ನು ಕೇಂದ್ರ ಸರ್ಕಾರ ನೀಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ಬಾಯಲ್ಲಿ ಸ್ವದೇಶಿ ಮಂತ್ರ, ಆದರೆ, ಪಾಲಿಸುವುದು ಮಾತ್ರ ವಿದೇಶಿ ತಂತ್ರ. ರಾಷ್ಟ್ರಧ್ವಜ ತಯಾರಿಸಲು ಪಾಲಿಸ್ಟರ್‌ ಬಟ್ಟೆಯನ್ನು ಚೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಚೀನಾದವರಿಗೆ ಹಾಗೂ ದೇಶದ ದೊಡ್ಡ ಬಟ್ಟೆ ವ್ಯಾಪಾರಿಗಳಿಗೆ ಮಾತ್ರ ಪ್ರಯೋಜನ. ಚೀನಾ ನಮ್ಮ ದೇಶವನ್ನು ಆಕ್ರಮಣ ಮಾಡುತ್ತಿದೆ ಎಂಬ ಕಾರಣಕ್ಕೆ ಆ ದೇಶದ ಮೊಬೈಲ್‌ ಆ್ಯಪ್‌ಗಳ ಬಳಕೆಗೆ ಕೇಂದ್ರವು ನಿರ್ಬಂಧ ಹೇರುತ್ತದೆ. ಸರ್ಕಾರದ ನೀತಿಯಲ್ಲಿ ಸ್ಪಷ್ಟತೆ ಇಲ್ಲ’ ಎಂದು ಟೀಕಿಸಿದರು.

‘ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಬೇಕು ಎಂಬುದೇನೋ ಸರಿ. ಮನೆ ಇಲ್ಲದವರು ಈ ಸಂಭ್ರವನ್ನು ಆಚರಿಸುವುದು ಬೇಡವೇ’ ಎಂದು ಖಾದರ್‌ ಪ್ರಶ್ನಿಸಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ನೀಡುತ್ತೇವೆ, ಮನೆ ಇಲ್ಲದ ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಡುತ್ತೇವೆ ಎಂದು ಸರ್ಕಾರ ಘೋಷಿಸಬೇಕು’ ಎಂದು ಖಾದರ್‌ ಒತ್ತಾಯಿಸಿದರು.

‘ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಿರ್ಮಿಸಿರುವ ಮನೆಗಳನ್ನೇ ಸರ್ಕಾರ ಇನ್ನೂ ಹಂಚಿಕೆ ಮಾಡಿಲ್ಲ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರವನ್ನೂ ನೀಡಿಲ್ಲ. ಮಳೆಯಿಂದಾಗಿ ಪೂರ್ತಿ ಮನೆ ಹಾನಿಗೊಂಡರೆ ಹೊಸಮನೆ ನಿರ್ಮಿಸಲು ₹ 5 ಲಕ್ಷ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇನ್ನೂ ಹಣ ಬಿಡುಗಡೆ ಆಗಿಲ್ಲ’ ಎಂದರು.

‘ತೊಕ್ಕೊಟ್ಟಿನಲ್ಲಿ ನಿರ್ಮಿಸಿರುವ ಭಾರಿ ಗಾತ್ರದ ಧ್ವಜಸ್ತಂಭದಲ್ಲಿ ಆ 15ರಂದು ಧ್ವಜಾರೊಹಣ ನೆರವೇರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಮುಖಂಡರಾದ ಮಹಮ್ಮದ್‌ ಮೋನು, ಈಶ್ವರ್‌ ಉಳ್ಳಾಲ್‌, ಸಂತೋಷ್‌ ಕುಮಾರ್‌ ಇದ್ದರು.

‘ಬೇಡಿಕೆಯಷ್ಟು ಧ್ವಜ ಪೂರೈಕೆಯಾಗಿಲ್ಲ’
‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಸರ್ಕಾರ ಹೇಳಿದೆ. ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಉಳ್ಳಾಲ ಕ್ಷೇತ್ರದ ಎಲ್ಲ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ರಾಷ್ಟ್ರಧ್ವಜ ಪೂರೈಕೆ ಆಗುತ್ತಿಲ್ಲ. ಒಂದೊಂದು ಗ್ರಾಮದಲ್ಲಿ 1500ರಿಂದ 2000 ಮನೆಗಳಿದ್ದರೆ, 300ರಿಂದ 400 ಧ್ವಜಗಳನ್ನು ಮಾತ್ರ ಪೂರೈಸಿದ್ದಾರೆ. ಅಂಚೆ ಕಚೇರಿ, ಶಾಲೆಗಳಲ್ಲಿ ಧ್ವಜ ನೀಡಲಾಗುತ್ತಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಜನರಿಗೂ ಸ್ಪಷ್ಟ ಮಾಹಿತಿ ಇಲ್ಲ. ಜಿಲ್ಲೆಗೆ ಎಷ್ಟು ಧ್ವಜ ಬೇಕು, ಅದನ್ನು ಯಾವ ರೀತಿ ತಲುಪಿಸಬೇಕು ಎಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಪ ಸೂಚನೆ ನೀಡಬೇಕಿತ್ತು’ ಎಂದು ಖಾದರ್‌ ಹೇಳಿದರು.

ಪೂರೈಸಲಾದ ಕೆಲವು ರಾಷ್ಟ್ರಧ್ವಜಗಳಲ್ಲಿ ಮುದ್ರಣ ದೋಷಗಳು ಕಾಣಿಸಿಕೊಂಡಿವೆ. ಧ್ವಜ ತಯಾರಿಸಲು ಬಳಸಲಾದ ಬಟ್ಟೆ ಹಾನಿಗೊಂಡಿರುವ ಉದಾಹರಣಗಳೂ ಇವೆ. ಧ್ವಜಗಳಿಗೆ ಒಂದೊಂದು ಕಡೆ ಒಂದೊಂದು ರೀತಿ ನಿಗದಿಪಡಿಸಲಾಗಿದೆ ಎಂದು ಅವರು ದೂರಿದರು.

*
ಮನೆ ಮನೆಯಲ್ಲಿ ರಾಷ್ಟ್ರಧ್ವಜ ಕಾರ್ಯಕ್ರಮ ಕೇವಲ ಘೋಷಣೆ ಮತ್ತು ಪ್ರಚಾರಕ್ಕೆ ಸೀಮಿತವಾಗಬಾರದು. ಅದರ ಸಮರ್ಪಕವಾಗಿ ಅನುಷ್ಠಾನದ ಬಗ್ಗೆಯೂ ಗಮನ ಹರಿಸಬೇಕು.
–ಯು.ಟಿ.ಖಾದರ್‌, ವಿಧಾನಸಭೆಯ ವಿರೋಧಪಕ್ಷದ ಉಪನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT