ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ವೀರ್‌ ಸೇಠ್ ಮೇಲಿನ ದಾಳಿಗೆ ಖಂಡನೆ

ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಯು.ಟಿ.ಖಾದರ್‌ ಆಗ್ರಹ
Last Updated 20 ನವೆಂಬರ್ 2019, 16:33 IST
ಅಕ್ಷರ ಗಾತ್ರ

ಮಂಗಳೂರು: ‘ಮೈಸೂರಿನಲ್ಲಿ ಶಾಸಕ ತನ್ವೀರ್‌ ಸೇಠ್‌ ಅವರ ಮೇಲೆ ದಾಳಿ ನಡೆಸಿ, ಕೊಲ್ಲಲು ಯತ್ನಿಸಿರುವುದು ಖಂಡನೀಯ. ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಪೊಲೀಸರು ಪತ್ತೆಮಾಡಿ, ಕಠಿಣ ಕ್ರಮ ಜರುಗಿಸಬೇಕು’ ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇಠ್‌ ಮೇಲಿನ ದಾಳಿಯ ಹಿಂದೆ ಸಮಾಜವಿರೋಧಿ ಶಕ್ತಿಗಳ ಕೈವಾಡವಿದೆ. ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಮೃದು ಧೋರಣೆ ತಳೆಯಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಸ್ತೃತವಾದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಶಾಸಕರೊಬ್ಬರ ಮೇಲೆ ಹಲ್ಲೆ ನಡೆದಿದೆ. ಹೀಗಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರ ಸಂಘಟನೆಯೊಂದರ ವಿರುದ್ಧದ ಪ್ರಕರಣ ಹಿಂಪಡೆದಿದ್ದೇ ಇಂತಹ ಘಟನೆಗೆ ಕಾರಣ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜಕೀಯಪ್ರೇರಿತ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಸಂಘಟನೆಯ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆದಿಲ್ಲ. ಅಮಾಯಕರ ವಿರುದ್ಧ ದಾಖಲಾದ ಪ್ರಕರಣಗಳನ್ನಷ್ಟೇ ಹಿಂದಕ್ಕೆ ಪಡೆಯಲಾಗಿತ್ತು. ಇಂತಹ ವಿಚಾರಗಳಲ್ಲೂ ಮುಖ್ಯಮಂತ್ರಿಯವರು ರಾಜಕೀಯ ಮಾಡಬಾರದು ಎಂದರು.

ಗೋಧಿ ಪೂರೈಕೆಗೆ ವಿರೋಧ: ‘ಶಾಲಾ ಮಕ್ಕಳ ಬಿಸಿಯೂಟಕ್ಕೆ ಅಕ್ಕಿಯ ಬದಲಿಗೆ ಗೋಧಿ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ. ಗೋಧಿ ಪೂರೈಕೆ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆದು, ಹಿಂದಿನಂತೆ ಅಕ್ಕಿಯನ್ನೇ ಪೂರೈಸಬೇಕು’ ಎಂದು ಖಾದರ್‌ ಆಗ್ರಹಿಸಿದರು.

ಕರಾವಳಿ ಭಾಗದಲ್ಲಿ ಗೋಧಿ ಬಳಕೆ ಕಡಿಮೆ. ಅಕ್ಕಿಯನ್ನೇ ಪ್ರಧಾನವಾಗಿ ಬಳಸಲಾಗುತ್ತದೆ. ಗೋಧಿ ಹುಡಿ ನೀಡಿದ್ದರೆ ಯಾವುದಾದರೂ ಪದಾರ್ಥ ತಯಾರಿಗೆ ಬಳಸಬಹುದಿತ್ತು. ಈಗ ಗೋಧಿ ಪೂರೈಸಲು ಆದೇಶ ಹೊರಡಿಸಲಾಗಿದೆ. ಗೋಧಿ ದಾಸ್ತಾನು ಇಡುವುದು ಕಷ್ಟ. ಮಕ್ಕಳ ಆರೋಗ್ಯದ ಮೇಲೂ ಇದರ ಪರಿಣಾಮ ಆಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT