ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕಾಲುಬಾಯಿ ರೋಗ ಲಸಿಕೆ ಅಭಿಯಾನಕ್ಕೆ ‘ಕೆಎಂಎಫ್‌’ ಹೆಗಲು

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ಸಿಬ್ಬಂದಿ ಕೊರತೆಯಿಂದ ನಲುಗಿರುವ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಜಿಲ್ಲೆಯಲ್ಲಿ ಕೆಎಂಎಫ್ ಸಹಕಾರ ಹಾಗೂ ಹೊರಗುತ್ತಿಗೆ ಸಿಬ್ಬಂದಿ ನೆರವು ಪಡೆದು, ಜಾನುವಾರಿಗೆ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಲಸಿಕೆ ಅಭಿಯಾನದ ಜತೆಗೆ ದೈನಂದಿನ ಕಾರ್ಯವನ್ನು ನಿರ್ವಹಿಸಬೇಕಾದ ಒತ್ತಡದಲ್ಲಿ ಸಿಬ್ಬಂದಿ ಸಿಲುಕಿದ್ದಾರೆ.

ಕಳೆದ ವರ್ಷ ಡಿಸೆಂಬರ್ ವೇಳೆ ಜಾನುವಾರಿಗೆ ಲಸಿಕೆ ನೀಡಲಾಗಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ನೀಡುವ ಲಸಿಕೆಯನ್ನು ಜೂನ್‌ ವೇಳೆಗೆ ನೀಡಬೇಕಾಗಿತ್ತು. ಕೋವಿಡ್ ಕಾರಣಕ್ಕೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ನೀಡುವ ಲಸಿಕೆ ಅಭಿಯಾನ ಮುಂದೂಡಿಕೆಯಾಗಿ, ಈಗ ಡಿ.17ರಿಂದ ಆರಂಭವಾಗಿದೆ. ಜಿಲ್ಲೆಯಲ್ಲಿ 2.5 ಲಕ್ಷ ಜಾನುವಾರು ಇವೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಇಲಾಖೆಗೆ ಇಷ್ಟು ಜಾನುವಾರಿಗೆ ಲಸಿಕೆ ನೀಡಲು 3–4 ತಿಂಗಳುಗಳು ಬೇಕಾಗಬಹುದು. ಈ ಕಾರಣಕ್ಕೆ ಇಲಾಖೆಯು ಕೆಎಂಎಫ್‌ ಸಹಕಾರ ಪಡೆದು, ಅದೇ ಸಂಸ್ಥೆಯ ಸಿಬ್ಬಂದಿ ಜತೆ ಸೇರಿ 38 ತಂಡಗಳಲ್ಲಿ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಒಂದು ತಿಂಗಳಿನಲ್ಲಿ ಅಭಿಯಾನ ಪೂರ್ಣಗೊಳಿಸುವ ಗುರಿಹೊಂದಿದೆ.

ಜಿಲ್ಲಾ ಕೇಂದ್ರದಲ್ಲಿ ಒಂದು ಪಾಲಿ ಕ್ಲಿನಿಕ್, ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು 59, ಗ್ರಾಮೀಣ ಪಶು ಚಿಕಿತ್ಸಾಲಯಗಳು 47, ತಾಲ್ಲೂಕು ಮೊಬೈಲ್ ಕ್ಲಿನಿಕ್‌ಗಳು ಐದು ಸೇರಿದಂತೆ ಒಟ್ಟು 112 ಪಶು ವೈದ್ಯಕೀಯ ಕೇಂದ್ರಗಳು ಇವೆ. ಈ ಕೇಂದ್ರಗಳಿಂದ ಒಟ್ಟು 449 ಹುದ್ದೆಗಳು ಮಂಜೂರು ಇದ್ದು, ಅವುಗಳಲ್ಲಿ 106 ಹುದ್ದೆಗಳು ಮಾತ್ರ ಭರ್ತಿ ಇವೆ. 343 ಹುದ್ದೆಗಳು ಖಾಲಿ ಇವೆ. ಮುಖ್ಯ ಪಶುವೈದ್ಯಾಧಿಕಾರಿಯ ಒಟ್ಟು 32 ಹುದ್ದೆಗಳಲ್ಲಿ 21 ಹುದ್ದೆಗಳು, ಪಶುವೈದ್ಯಾಧಿಕಾರಿ 22 ಹುದ್ದೆಗಳಲ್ಲಿ 16 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿರುವ ಐದು ಮೊಬೈಲ್ ಕ್ಲಿನಿಕ್‌ಗಳ ಎಲ್ಲ ಐದು ವೈದ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ. ತಾಲ್ಲೂಕು ಕೇಂದ್ರಗಳಲ್ಲಿ ಇರುವ ವೈದ್ಯರೇ ಇದರ ನಿರ್ವಹಣೆ ಮಾಡುತ್ತಿದ್ದಾರೆ.

ಬಹುತೇಕ ಕಡೆಗಳಲ್ಲಿ ಒಬ್ಬರಿಗೇ 2–3 ಕೇಂದ್ರಗಳ ಹೆಚ್ಚುವರಿ ಹೊಣೆ ನೀಡಲಾಗಿದೆ. ಇದರಿಂದಾಗಿ ವೈದ್ಯರು ಕ್ಷೇತ್ರ ಭೇಟಿಗೆ ಹೋದಾಗ, ಆಸ್ಪತ್ರೆಗೆ ಬರುವ ಹೈನುಗಾರರಿಗೆ ವೈದ್ಯರು ಲಭ್ಯರಾಗದ ಸಂದರ್ಭಗಳು ಎದುರಾಗುತ್ತವೆ. ರೈತ ಮನೆಗಳಿಂದ ತುರ್ತು ಕರೆ ಬಂದರೆ, 30–40 ಕಿ.ಮೀ ದೂರ ಕ್ರಮಿಸಿ, ಅವರ ಮನೆಗೆ ತಲುಪಿ, ಜಾನುವಾರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ ಪಶುವೈದ್ಯರು.

ಹೆಚ್ಚುವರಿ ಕಾರ್ಯದಿಂದ ಪಶು ವೈದ್ಯರು ಒತ್ತಡದಿಂದ ಬಳಲುತ್ತಿದ್ದಾರೆ. ಹಲವೆಡೆ ಹಿರಿಯ ಪಶುವೈದ್ಯಕೀಯ ಪರೀಕ್ಷಕರ, ಕಿರಿಯ ಪಶುವೈದ್ಯಕೀಯ ಪರೀಕ್ಷಕರು, ಗ್ರೂಪ್ ‘ಡಿ’ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಇದೆ. ಇದರಿಂದ ಎಲ್ಲ ಕೆಲಸವನ್ನೂ ಇದ್ದ ಸಿಬ್ಬಂದಿಯೇ ನಿಭಾಯಿಸಬೇಕಾಗಿದೆ ಎಂದು ಪಶುವೈದ್ಯರೊಬ್ಬರು ಅಳಲು ತೊಡಿಕೊಂಡರು.

‘ಲಸಿಕೆ ನೀಡಲು ವಿಳಂಬವಾದ ಕಾರಣಕ್ಕೆ ಕೆಲವು ಕಡೆಗಳಲ್ಲಿ ಜಾನುವಾರಿಗೆ ಕಾಲುಬಾಯಿ ರೋಗ ಕಂಡಬಂತು. ಇದು ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ತಕ್ಷಣ ಸುತ್ತಲಿನ ಎಲ್ಲ ಜಾನುವಾರಿಗೆ ಲಸಿಕೆ ಹಾಕುವ ಮೂಲಕ ನಿಯಂತ್ರಿಸಲು ಶ್ರಮವಹಿಸಿದೆವು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಡಾ. ಪ್ರಸನ್ನಕುಮಾರ್ ಟಿ.ಜಿ. ಪ್ರತಿಕ್ರಿಯಿಸಿದರು.

ಶೇ 90ರಷ್ಟು ಸಾಧನೆ: ಜಾನುವಾರಿಗೆ ಯುಐಡಿ ಟ್ಯಾಗ್‌ ಹಾಕುವ ಕಾರ್ಯ ಜಿಲ್ಲೆಯಲ್ಲಿ ಶೇ 90ರಷ್ಟು ಪೂರ್ಣಗೊಂಡಿದೆ. ಪ್ರಸ್ತುತ ಲಸಿಕೆ ಅಭಿಯಾನದ ವೇಳೆ ಟ್ಯಾಗ್ ಹಾಕಲು ಬಿಟ್ಟುಹೋಗಿರುವ ಜಾನುವಾರಿಗೆ, ಲಸಿಕೆ ಜತೆ ಟ್ಯಾಗ್ ಕೂಡ ಹಾಕಲಾಗುತ್ತಿದೆ. ಅಭಿಯಾನದ ಮೊದಲ ದಿನ ಸುಮಾರು 7,000 ಜಾನುವಾರಿಗೆ ಲಸಿಕೆ ಹಾಕಲಾಗಿದ್ದು, 428ರಷ್ಟು ಜಾನುವಾರು ಕಿವಿಗೆ ಟ್ಯಾಗ್ ಅಳವಡಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದನಗಳಿಗೆ ಆರೋಗ್ಯ ತೊಂದರೆಯಾದರೆ, ಪಶುವೈದ್ಯ ಕೇಂದ್ರಕ್ಕೆ ಕರೆ ಮಾಡಿದರೆ, ಅಲ್ಲಿ ಕರೆ ಸ್ವೀಕರಿಸುವವರು ಇರುವುದಿಲ್ಲ. ಅವರು ಇನ್ಯಾವುದೋ ರೈತರ ಮನೆಗೆ ಹೋಗಿರುತ್ತಾರೆ. ವಿಚಾರಿಸಿದರೆ, ಸಿಬ್ಬಂದಿ ಕೊರತೆ ಎನ್ನುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಇದ್ದಾಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಾರೆ’ ಎಂದು ಹೈನುಗಾರ ಮಹಿಳೆ ಲಿಲ್ಲಿ ಪಿಂಟೊ ಅಭಿಪ್ರಾಯ ವ್ಯಕ್ತಪಡಿಸಿದರು.

‘ಲಸಿಕೆಯೊಂದೇ ಪರಿಹಾರ’

ಕಾಲುಬಾಯಿ ರೋಗಕ್ಕೆ ತುತ್ತಾಗುವ ಜಾನುವಾರು ಅತಿಯಾದ ಜ್ವರ, ಹುಣ್ಣು, ಜೊಲ್ಲು ಸುರಿಸುವ, ಕಾಲು ಕುಂಟುವ, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರುತ್ತವೆ. ರೋಗ್ರಗ್ರಸ್ಥ ಪ್ರಾಣಿಗಳ ನೇರ ಸಂಪರ್ಕದಿಂದ ಹಾಗೂ ಗಾಳಿ ಮುಖಾಂತರ ರೋಗ ಹರಡುತ್ತದೆ. ರೋಗ ಬಂದ ದನಗಳ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಈ ರೋಗ ನಿಯಂತ್ರಣಕ್ಕೆ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆಯೊಂದೇ ಮಾರ್ಗವಾಗಿದೆ ಎಂದು ಆಡಳಿತ ವಿಭಾಗದಚೀಫ್ ವೆಟರ್ನರಿ ಆಫೀಸರ್ ಡಾ. ವಸಂತಕುಮಾರ್ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT