ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಕಾಲೇಜು: 425 ವಿದ್ಯಾರ್ಥಿಗಳಿಗೆ ಲಸಿಕೆ

ಜಿಲ್ಲೆಯಲ್ಲಿ ಒಂದೇ ದಿನ 627 ಬೋಧಕರು, 11,696 ವಿದ್ಯಾರ್ಥಿಗಳಿಗೆ ಲಸಿಕೆ
Last Updated 29 ಜೂನ್ 2021, 5:56 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ತಡೆ ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಎನ್‌ಎಸ್‌ಎಸ್‌ ಸಹಯೋಗದಲ್ಲಿ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹಂತದ ಶಿಬಿರದಲ್ಲಿ 425 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.

ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಕೂಪನ್‌ ಪಡೆದು, ಕೋವಿನ್‌ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆದರು. ಈ ಮುನ್ನ ಆರ್‌ಸಿಎಚ್‌ ಅಧಿಕಾರಿ ಡಾ.ಬಿ.ವಿ. ರಾಜೇಶ್‌, ವಿದ್ಯಾರ್ಥಿಗಳಿಗೆ ಕೋವಿಡ್‌ ವಿರುದ್ಧದ ಲಸಿಕೆಯ ಉದ್ದೇಶ, ಲಾಭಗಳು ಮತ್ತು ವಹಿಸಬೇಕಾದ ಮುನ್ನೇಚ್ಚರಿಕೆಯ ಕುರಿತು ವಿವರಿಸಿದರು. ಯಾವುದೇ ವದಂತಿಗಳಿಗೆ ಕಿವಿಗೊಡದೆ ಕೊವಿಡ್‌ ಲಸಿಕೆ ಪಡೆದುಕೊಳ್ಳಿ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ಥಳಕ್ಕೆ ಭೇಟಿ ನೀಡಿದರು. ಪ್ರಾಂಶುಪಾಲೆ ಡಾ.ಅನಸೂಯ ರೈ, ಮಂಗಳೂರು ವಿಶ್ವವಿದ್ಯಾಲಯ ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಡಾ.ಕೆ.ಎ. ನಾಗರತ್ನಾ, ಕಾಲೇಜಿನ ಎನ್‌.ಎಸ್‌.ಎಸ್‌ ಅಧಿಕಾರಿಗಳಾದ ಡಾ. ಗಾಯತ್ರಿ ಮತ್ತು ಡಾ. ಸುರೇಶ್‌, ಮಂಗಳೂರು ವಿಶ್ವವಿದ್ಯಾಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ.ಗಣಪತಿ ಗೌಡ, ಕಾಲೇಜಿನ ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಭಾರತಿ ಪ್ರಕಾಶ್‌ ಇದ್ದರು.

ಎಲ್ಲರಿಗೂ ಲಸಿಕೆ: ಜಿಲ್ಲಾಡಳಿತದ ವತಿಯಿಂದ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಎಡಿಸಿ ಡಾ.ಪ್ರಜ್ಞಾ ಅಮ್ಮೆಂಬಳ ಅವರೊಂದಿಗೆ ನಗರದ ಸೇಂಟಲ್‌ ಅಲೋಶಿಯಸ್ ಹಾಗೂ ರಾಮಕೃಷ್ಣ ಕಾಲೇಜಿನ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸೇಂಟ್‌ ಅಲೋಶಿಯಸ್ ಕಾಲೇಜಿಗೆ 1 ಸಾವಿರ ಲಸಿಕೆ ನೀಡಲಾಗಿದೆ. ರಾಮಕೃಷ್ಣ ಕಾಲೇಜಿಗೆ 200 ಲಸಿಕೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೇಜುಗಳಲ್ಲೇ ಲಸಿಕೆ ವಿತರಣೆಗೆ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಬದ್ಧವಾಗಿದೆ. ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಲಸಿಕೆ ವಿತರಣೆಯ ಕುರಿತು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದೆ. ಜನರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ ಇದ್ದರು.

ಕಾಲೇಜುಗಳಲ್ಲಿ ಲಸಿಕೆ ಲಭ್ಯ

ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಲಸಿಕಾ ಶಿಬಿರವನ್ನು ಮಂಗಳವಾರ ಆಯೋಜಿಸಲಾಗಿದೆ.

ಪದವಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿಗೆ ವಿವಿಧ ತಾಲ್ಲೂಕುಗಳಲ್ಲಿರುವ ಲಸಿಕೆ ನೀಡಲಾಗುವುದು. ಕಾಲೇಜು ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಹಾಜರಿದ್ದು ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್‌ಕುಮಾರ್‌ ತಿಳಿಸಿದ್ದಾರೆ.

ಮಂಗಳೂರು ತಾಲ್ಲೂಕು: ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಅಡ್ಯಾರ್, ಮಂಗಳೂರು ವಿಶ್ವವಿದ್ಯಾಲಯ ಲೆಕ್ಚರ್ ಕಾಂಪ್ಲೆಕ್ಸ್ ಮಂಗಳ ಗಂಗೋತ್ರಿ ಕೊಣಾಜೆ, ಸೇಂಟ್ ಆಗ್ನೆಸ್‌ ಕಾಲೇಜು, ಸೇಂಟ್ ಅಲೋಷಿಯಸ್ ಕಾಲೇಜು, ಎಸ್‍ಡಿಪಿಟಿ ಪ್ರಥಮ ದರ್ಜೆ ಕಾಲೇಜು ಕಟೀಲು, ಧವಳ ಕಾಲೇಜು ಮೂಡುಬಿದಿರೆ.

ಬಂಟ್ವಾಳ ತಾಲ್ಲೂಕು: ಪಿ.ಎ.ಕಾಲೇಜು ಮುಡಿಪು, ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳ.

ಪುತ್ತೂರು ತಾಲ್ಲೂಕು: ಸೇಂಟ್ ಫಿಲೋಮಿನಾ ಕಾಲೇಜು, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು.

ಸುಳ್ಯ ತಾಲ್ಲೂಕು: ಶಾರದಾ ಮಹಿಳಾ ಕಾಲೇಜು ಸುಳ್ಯ.

ಬೆಳ್ತಂಗಡಿ ತಾಲ್ಲೂಕು: ಶ್ರೀಗುರುದೇವ ಪ್ರಥಮ ದರ್ಜೆ ಕಾಲೇಜು, ಕಲ್ಪತರು ನರ್ಸಿಂಗ್ ಕಾಲೇಜು, ಸರ್ಕಾರಿ ಐ.ಟಿ.ಐ ಕಾಲೇಜು ಮಳಲಿ, ಮನ್ಸರ್ ಪ್ಯಾರಾಮೆಡಿಕಲ್ ಕಾಲೇಜು ಗೇರುಕಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT