ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 100 ಗುರಿ ಸಾಧನೆಗೆ ‘ಲಸಿಕಾ ಮಿತ್ರ’: ಆರೋಗ್ಯ ಇಲಾಖೆಯಿಂದ ಅಭಿಯಾನ

ಲಸಿಕೆ ಪಡೆಯದವರ ಮನೆ ಬಾಗಿಲಿಗೆ ತಂಡ: ಪಾಲಿಕೆ, ಆರೋಗ್ಯ ಇಲಾಖೆಯಿಂದ ಅಭಿಯಾನ
Last Updated 22 ನವೆಂಬರ್ 2021, 4:38 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಲಸಿಕೆ ಅಭಿಯಾನ ಪ್ರಗತಿ ಹಾದಿಯಲ್ಲಿದ್ದು, ಜಿಲ್ಲೆಯ 60 ಗ್ರಾಮಗಳಲ್ಲಿ ಎಲ್ಲರಿಗೂ ಮೊದಲ ಡೋಸ್‌ ಲಸಿಕೆ ನೀಡಿದ ಗುರಿ ಸಾಧನೆ ಮಾಡಲಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಶೇ 90 ರಷ್ಟು ಮಂದಿಗೆ ಮೊದಲ ಡೋಸ್‌ ಗುರಿ ಲಸಿಕೆ ನೀಡಿದ್ದು, ಬಾಕಿ ಉಳಿದ ಶೇ 10 ರಷ್ಟು ಜನರಿಗೆ ಲಸಿಕೆ ನೀಡುವ ಉದ್ದೇಶದಿಂದ ಮನೆ ಮನೆ ಭೇಟಿ ‘ಲಸಿಕಾ ಮಿತ್ರ’ ಕಾರ್ಯರೂಪಕ್ಕೆ ಬಂದಿದೆ.

ಜಿಲ್ಲೆಯ 422 ಗ್ರಾಮಗಳ ಪೈಕಿ, 60 ಗ್ರಾಮಗಳಲ್ಲಿ ಮೊದಲನೇ ಡೋಸ್‌ ಶೇ 100 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17.15 ಲಕ್ಷ ಜನರಿದ್ದು, 15.40 ಲಕ್ಷ ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ 90 ರಷ್ಟು ಸಾಧನೆ ಆಗಿದೆ. 9.36 ಲಕ್ಷ ಮಂದಿ 2 ನೇ ಡೋಸ್‌ ಲಸಿಕೆ ಪಡೆದಿದ್ದು, ಗುರಿಗಿಂತ ಹೆಚ್ಚು ಲಸಿಕೆ ಹಾಕಲಾಗಿದೆ. ಮೊದಲ ಮತ್ತು ಎರಡನೇ ಡೋಸ್‌ ಸೇರಿದಂತೆ ಒಟ್ಟು 25 ಲಕ್ಷ ಮಂದಿ ಲಸಿಕೆ ನೀಡಲಾಗಿದೆ.

ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಲಸಿಕೆ ಲಭ್ಯ ಇದೆ. ಆದರೆ, ಇನ್ನೂ ಶೇ 10 ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆಯುವುದಕ್ಕೆ ಮುಂದೆ ಬರುತ್ತಿಲ್ಲ. ಇವರನ್ನು ಗುರುತಿಸಿ ಲಸಿಕೆ ನೀಡುವುದೇ ಸವಾಲಿನ ಕೆಲಸ. ಈ ಗುರಿ ತಲುಪುವುದಕ್ಕೆ ಮನೆ ಮನೆ ಭೇಟಿಗೆ ಒತ್ತು ನೀಡಲಾಗಿದೆ. ಈ ಭೇಟಿ ವೇಳೆ ಕೆಲವರು ಲಸಿಕೆ ಪಡೆಯುವುದಕ್ಕೆ ಮನಸ್ಸು ಮಾಡುತ್ತಿಲ್ಲ ಎಂಬ ಮಾಹಿತಿ ಇದ್ದು, ಈ ಮನೋಭಾವ ನಿವಾರಿಸಲು ಕೌನ್ಸೆಲಿಂಗ್‌ ಮಾಡುವ ಚಿಂತನೆಯೂ ಇದೆ.

ಜಿಲ್ಲೆಯ ಮಂಗಳೂರು ತಾಲ್ಲೂಕು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಮೊದಲ ಡೋಸ್‌ ಗುರಿ ಸಾಧನೆ ಉತ್ತಮವಾಗಿದ್ದು, ಅದಾಗ್ಯೂ ಬಾಕಿ ಉಳಿದವರಿಗೆ ಲಸಿಕೆ ನೀಡಬೇಕು ಎಂಬ ಉದ್ದೇಶದಿಂದ ‘ಲಸಿಕಾ ಮಿತ್ರ’ ಯೋಜನೆ ರೂಪಿಸಲಾಗಿದೆ. ಇದನ್ನು ಯಶಸ್ವಿಗೊಳಿಸುವುದಕ್ಕೆ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ಸ್ವಯಂಸೇವಕರ ಸಹಾಯ ಹಾಗೂ ಪಾಲಿಕೆ ವ್ಯಾಪ್ತಿಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿ ಒಟ್ಟು 1,15,730 ಕೋವಿಡ್‌ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 1,13,937 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಒಟ್ಟು 1,694 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲನೇ ಅಲೆಯಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಕೊಂಚ ಕಡಿಮೆ ಇತ್ತು. ಆದರೆ, ಎರಡನೇ ಅಲೆಯಲ್ಲಿ ಕೋವಿಡ್‌ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿತು.

ಎರಡನೇ ಅಲೆಯಲ್ಲಿ ಕೋವಿಡ್‌ ಪ್ರಕರಣ ಮತ್ತು ಸಾವುಗಳು ಜನರನ್ನು ಕಂಗೆಡಿಸಿದ್ದವು.ಜಿಲ್ಲೆಯಲ್ಲಿ ಒಂದೊಂದು ಬಾರಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು ದಾಖಲಾಗಿರುವುದು ಇದೆ. ಪ್ರಸ್ತುತ ಹಲವು ಬಿಗಿ ಕ್ರಮಗಳಿಂದಾಗಿ ಕೋವಿಡ್‌ ಸಕ್ರಿಯ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ.

ಕೋವಿಡ್‌ ಸೋಂಕು ಬಹುತೇಕ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಎರಡನೇ ಡೋಸ್‌ ಪಡೆಯಲು ಜನರು ನಿರುತ್ಸಾಹ ತೋರುತ್ತಿದ್ದಾರೆ. ಮೊದಲ ಡೋಸ್‌ ಪಡೆದವರು 84 ದಿನ ಕಳೆದರೂ ಎರಡನೇ ಡೋಸ್‌ ಪಡೆಯಲು ಲಸಿಕಾ ಕೇಂದ್ರಗಳತ್ತ ಬರುತ್ತಿಲ್ಲ.

‘ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿಗೆ ಮುಂದಾಗಿದ್ದು, ಶೇ 100 ರಷ್ಟು ಸಾಧನೆಯ ಗುರಿ ಹಾಕಿಕೊಳ್ಳಲಾಗಿದೆ. ಮೊದಲ ಡೋಸ್‌ ಪಡೆದವರು, ಎರಡನೇ ಡೋಸ್‌ ಪಡೆಯಲು ಮುಂದೆ ಬಾರದೆ ಇರುವುದು ಅಪಾಯಕಾರಿ. ಪಾಲಿಕೆ ವ್ಯಾಪ್ತಿಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಫ್ಲಾಟ್‌ ಹಾಗೂ ರೆಸಿಡೆನ್ಸಿ ಅಸೋಸಿಯೇಷನ್‌ಗಳ ಕಡೆಯಿಂದ ಲಸಿಕೆ ಪಡೆದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಶಾಲೆಗಳನ್ನು ಆರಂಭ ಮಾಡಿರುವುದರಿಂದ ಪೋಷಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಬಾಕಿ ಉಳಿದವರು ಏಕಕಾಲದಲ್ಲಿ ಬಂದರೂ ಅವರಿಗೆ ಲಸಿಕೆ ನೀಡುವಷ್ಟು ಲಸಿಕೆ ಸಂಗ್ರಹ ಇದೆ ಎಂದು ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ಹೇಳಿದರು.

‘ಮನೆ ಮನೆ ಭೇಟಿಯೇ ದಾರಿ’

‘ಮಂಗಳೂರು ತಾಲ್ಲೂಕಿನಲ್ಲಿ ಶೇ 90 ಗುರಿ ತಲುಪಿದ್ದೇವೆ. ಎರಡನೇ ಡೋಸ್‌ ಶೇ 50 ಗುರಿ ಸಾಧನೆ ಆಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಶೇ 10 ಮಂದಿ ಲಸಿಕೆ ಪಡೆಯಬೇಕಿದೆ. ಇದರಲ್ಲಿ ಶೇ 5 ರಷ್ಟು ಮಂದಿ ಕೆಲ ಸಬೂಬು ಹೇಳುತ್ತಿದ್ದಾರೆ. ಅಂಥವರನ್ನು ಗುರುತಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಎಲ್ಲರಿಗೂ ಕರೆ ಮಾಡಿ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹ ಪಡೆಯಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಹೇಳಿದ್ದಾರೆ.

‘ಕೆಲವರು ಈಗಾಗಲೇ ಲಸಿಕೆ ಪಡೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ಅಂತವರಿಂದ ದಾಖಲೆ ಕೇಳುತ್ತಿದ್ದೇವೆ. ಇನ್ನೂ ಕೆಲವರ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗುತ್ತಿಲ್ಲ, ಕೆಲ ಸಂಖ್ಯೆಗಳು ಬಳಕೆಯಲ್ಲಿ ಇಲ್ಲ. ಈ ಸಮಸ್ಯೆ ನಿವಾರಣೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಎನ್‌ಎಸ್‌ಎಸ್‌ ಸ್ವಯಂಸೇವಕರ ತಂಡ ಮಾಡಿ, ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯದವರು ಇದ್ದಾರೆ. ಬಂದರ್‌, ಬಿಜೈ ಸೇರಿದಂತೆ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮನೆ ಭೇಟಿ ಪ್ರಗತಿ ಉತ್ತಮವಾಗಿದೆ‘ ಎಂದು ತಿಳಿಸಿದ್ದಾರೆ.

‘ಇನ್ನೂ ಬಾಕಿ ಇದ್ದಾರೆ’

‘ಜಿಲ್ಲೆಯಲ್ಲಿ 1.75 ಲಕ್ಷ ಮಂದಿ ಇನ್ನೂ ಕೂಡ ಮೊದಲ ಡೋಸ್‌ ಪಡೆಯದೆ ಬಾಕಿ ಉಳಿದಿದ್ದಾರೆ. ಸಾಕಷ್ಟು ಪ್ರಮಾಣದ ಲಸಿಕೆ ಲಭ್ಯ ಇದೆ. ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆ ಇದೆ. ಜಿಲ್ಲೆಯ 60 ಗ್ರಾಮಗಳಲ್ಲಿ ಶೇ 100 ಮೊದಲ ಡೋಸ್‌ ಲಸಿಕಾಕರಣ ಆಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಲಸಿಕಾಕರಣ ಮತ್ತಷ್ಟು ಪ್ರಗತಿ ಕಾಣಬಹುದು. ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಅಭಿಯಾನ ಶುರುವಾಗಿದೆ. ಈಗ ಲಸಿಕಾಕರಣ ವೇಗ ಪಡೆದಿದೆ. ಕೆಲ ಕಾರಣಗಳಿಂದ ಲಸಿಕೆ ಪಡೆಯದೆ ಇದ್ದವರಿಗೆ ಮನೆಗೆ ಹೋಗಿ ಲಸಿಕೆ ಹಾಕಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್‌ ಕುಮಾರ್‌ ಹೇಳಿದರು.

‘20 ಕಾಲೇಜು ತಂಡ’

‘ಮನೆ ಭೇಟಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಲಸಿಕಾ ಕರಣದಲ್ಲಿ ಈಗ ಸ್ವಲ್ಪ ಮಟ್ಟಿನ ಪ್ರಗತಿ ಕಾಣುತ್ತಿದೆ. ಮೊದಲ ಡೋಸ್‌ ಪಡೆದವರು ಎರಡನೇ ಡೋಸ್‌ ಪಡೆಯುವುದಕ್ಕೆ ಮುಂದೆ ಬರಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಉಳಿದವರಿಗೆ ನೀಡುವಷ್ಟು ಲಸಿಕೆ ಸಂಗ್ರಹ ಇದೆ. ‘ಲಸಿಕಾ ಮಿತ್ರ’ದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 20 ಕಾಲೇಜುಗಳ ಎನ್‌ಎಸ್‌ಎಸ್‌ ತಂಡಗಳನ್ನಾಗಿ ಮಾಡಿ ಗುರಿ ಸಾಧನೆಗೆ ಒತ್ತು ನೀಡಲಾಗುತ್ತಿದೆ‘ ಎಂದು ಮಹಾನಗರ ಪಾಲಿಕೆ ಮಲೇರಿಯಾ ಮತ್ತು ಕೋವಿಡ್ ನೋಡಲ್ ಅಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT