ಮಕ್ಕಳಿಗೆ ಕೃಷಿ ಮಹತ್ವ ತಿಳಿಸಿ: ಶಾಸಕ

7
ಮೂಡುಬಿದಿರೆ: ಕೃಷಿ ಖುಷಿ, ವನಮಹೋತ್ಸವ

ಮಕ್ಕಳಿಗೆ ಕೃಷಿ ಮಹತ್ವ ತಿಳಿಸಿ: ಶಾಸಕ

Published:
Updated:

ಮೂಡುಬಿದಿರೆ: "ಆಷಾಢ ತಿಂಗಳು ಬಂತೆಂದರೆ ಅಲ್ಲಲ್ಲಿ 'ಆಟಿದ ಗಮ್ಮತ್', 'ಕೆಸರ್ಡೊಂಜಿ ದಿನ' ಆಚರಿಸಲಾಗುತ್ತದೆ.  ಇವುಗಳು ಕೇವಲ ಗೌಜಿ, ಗಮ್ಮತ್ತಿಗೆ ಸೀಮಿತವಾಗದೆ, ನಮ್ಮ ಕೃಷಿ ಪರಂಪರೆಯಲ್ಲಿ ಆಷಾಢ ತಿಂಗಳ ಆಚರಣೆ ಮತ್ತು  ಮಹತ್ವವನ್ನು  ಮಕ್ಕಳಿಗೆ ತಿಳಿಯಪಡಿಸುವ ಕೆಲಸ ಆಗಬೇಕು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಎಂಸಿಎಸ್ ಬ್ಯಾಂಕ್ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್‌ ಆವರಣದಲ್ಲಿ ಶನಿವಾರ ನಡೆದ ಕೃಷಿ ಖುಷಿ ಮತ್ತು ವಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿಂದಿನ ಕೃಷಿಕರು ಶ್ರಮಜೀವಿಗಳು ಮತ್ತು ಸಂಸ್ಕಾರದ ಬದುಕು ನಡೆಸಿಕೊಂಡು ಬಂದವರು. ಇದನ್ನು ಇಂದಿನ ಮಕ್ಕಳು ಮುಂಡುವರಿಸಿಕೊಂಡು ಹೋಗಬೇಕು ಎಂದು ಸಲಹೆಯಿತ್ತರು.

ಇದಕ್ಕು ಮೊದಲು ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಕೃಷಿಕರಿಗೆ ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿಯಲ್ಲಿ ಸಾಲದಂತಹ ದಿಟ್ಟ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿರುವುದರಿಂದ ರೈತರು ಸಾಲದ ಶೂಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಮೇಯಗಳು ಕಡಿಮೆಯಾಗಿವೆ. ರೈತರು ಮಿಶ್ರ ಬೆಳೆಯನ್ನು ಬೆಳೆಯುವ ಮೂಲಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು’ ಎಂದರು.

ಉಪ ವಲಯ ಅರಣ್ಯಾಧಿಕಾರಿ ಅಶ್ವತ್ಥ ಶೆಟ್ಟಿ, ಎಂಸಿಎಸ್ ಬ್ಯಾಂಕ್ ಉಪಾಧ್ಯಕ್ಷ ಜಾರ್ಜ್‌ ಮೋನಿಸ್, ನಿರ್ದೇಶಕ ಬಾಹುಬಲಿ ಪ್ರಸಾದ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಉಪಸ್ಥಿತರಿದ್ದರು. ಮಂಗಳೂರು ಅಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ.ಸದಾನಂದ ಪೆರ್ಲ ಸ್ವಚ್ಛ ಭಾರತ್ ಮತ್ತು ಜೈನ್ ಹೈಸ್ಕೂಲ್‌ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಕೃಷಿ ಬದುಕಿನ ಬಗ್ಗೆ ಮಾತನಾಡಿದರು.

ಎಂಸಿಎಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಪ್ರಾಸ್ತಾವಿಕ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ವಂದಿಸಿದರು. ಯತಿರಾಜ್ ಜೈನ್ ನಿರೂಪಿಸಿದರು.

ವಲಯದ ಶಾಲಾ ಮಕ್ಕಳಿಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು.  ಕುದ್ರೋಳಿ ಗಣೇಶ್ ಅವರು ಸ್ವಚ್ಛತೆಯ ಸಂದೇಶ ಸಾರುವ ಜಾದೂ ನಡೆಸಿಕೊಟ್ಟರು. ಕುದ್ರೊಳಿ ಗಣೇಶ್ ಅವರನ್ನು ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !