ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನ್ಲಾಕ್‌ನಲ್ಲಿ ಕೋವಿಡ್‌ ಪ್ರಯೋಗಾಲಯ ಆರಂಭ

ಮೊದಲ ದಿನವೇ ಹತ್ತು ಮಾದರಿಗಳ ಪರೀಕ್ಷೆ ಯಶಸ್ವಿ
Last Updated 7 ಏಪ್ರಿಲ್ 2020, 14:01 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌– 19 ಸೋಂಕು ಪತ್ತೆ ಪ್ರಯೋಗಾಲಯ ಮಂಗಳವಾರ ಕಾರ್ಯಾರಂಭ ಮಾಡಿದೆ. ಮೊದಲ ದಿನವೇ ಹತ್ತು ಮಂದಿಯ ಗಂಟಲಿನ ದ್ರವದ ಮಾದರಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ಪತ್ತೆಗೆ ಪ್ರಯೋಗಾಲಯ ಇರಲಿಲ್ಲ. ಶಂಕಿತ ರೋಗಿಗಳ ಗಂಟಲಿನ ದ್ರವದ ಮಾದರಿಗಳನ್ನು ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರಯೋಗಾಲಯಗಳಿಗೆ ಕಳುಹಿಸಿ ವರದಿ ಪಡೆಯಲಾಗುತ್ತಿತ್ತು. ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೋವಿಡ್‌–19 ಪ್ರಯೋಗಾಲಯ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸೋಮವಾರ ಒಪ್ಪಿಗೆ ನೀಡಿತ್ತು.

ಪ್ರಯೋಗಾಲಯ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಿದ್ದ ಜಿಲ್ಲಾಡಳಿತ, ಪೂರ್ವಸಿದ್ಧತೆಯನ್ನೂ ಕೈಗೊಂಡಿತ್ತು. ಅನುಮೋದನೆ ದೊರಕುತ್ತಿದ್ದಂತೆ ಪ್ರಯೋಗಾಲಯಕ್ಕೆ ಚಾಲನೆ ನೀಡಲಾಗಿದೆ. ವೆನ್ಲಾಕ್‌ ಅಸ್ಪತ್ರೆಯ ರೋಗಶಾಸ್ತ್ರ ತಜ್ಞ ಡಾ.ಶರತ್‌ ಕುಮಾರ್‌ ನೇತೃತ್ವದಲ್ಲಿ ಈ ಪ್ರಯೋಗಾಲಯ ಕಾರ್ಯನಿರ್ವಹಿಸಲಿದೆ. ಸದ್ಯ ವೈದ್ಯರು ಸೇರಿದಂತೆ ಆರು ಸಿಬ್ಬಂದಿಯನ್ನು ಒದಗಿಸಲಾಗಿದೆ.

ಪ್ರಯೋಗಾಲಯದ ಆವರಣಕ್ಕೆ ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿಯ ಹೊರತಾಗಿ ಅನ್ಯರ ಪ್ರವೇಶವನ್ನು ನಿಷೇಧಿಸಲಾಗಿದೆ. ವೈದ್ಯರು ಮತ್ತು ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕಿಟ್‌ಗಳನ್ನು ಒದಗಿಸಲಾಗಿದೆ. ರೋಗಿಗಳಿಂದ ಮಾದರಿ ಸಂಗ್ರಹಿಸುವುದರಿಂದ ಪರೀಕ್ಷೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸುವವರೆಗಿನ ಎಲ್ಲ ಹಂತಗಳಲ್ಲಿ ಸಂಪೂರ್ಣವಾಗಿ ಪಿಪಿಇ ಕಿಟ್‌ ಧರಿಸಿಕೊಂಡೇ ಕಾರ್ಯನಿರ್ವಹಿಸುತ್ತಿದ್ದಾರೆ.

48 ಮಾದರಿ ಪರೀಕ್ಷೆ ಸಾಮರ್ಥ್ಯ:ಪ್ರಯೋಗಾಲಯ ಇನ್ನೂ ಆರಂಭಿಕ ಹಂತದಲ್ಲೇ ಇದೆ. ಈಗ ಲಭ್ಯವಿರುವ ಯಂತ್ರೋಪಕರಣ ಮತ್ತು ಸಿಬ್ಬಂದಿಯ ಆಧಾರದಲ್ಲಿ ಹೊಸ ಪ್ರಯೋಗಾಲಯದಲ್ಲಿ ದಿನವೊಂದಕ್ಕೆ 48 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹೆಚ್ಚಿನ ಸಿಬ್ಬಂದಿಯನ್ನು ಶೀಘ್ರದಲ್ಲೇ ಒದಗಿಸಲಿದ್ದು, ಹೊಸ ಯಂತ್ರೋಪಕರಣಗಳೂ ಬರಲಿವೆ. ಆ ಬಳಿಕ ದಿನವೊಂದಕ್ಕೆ 100 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಹತ್ತು ದಿನಗಳ ಬಳಿಕ ಈ ಪ್ರಯೋಗಾಲಯ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ಹೇಳಿವೆ.

ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಈವರೆಗೆ 38,652 ಜನರನ್ನು ಪರೀಕ್ಷಿಸಲಾಗಿದೆ. 4,237 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಶಂಕಿತ ರೋಗ ಲಕ್ಷಣಗಳ ಆಧಾರದಲ್ಲಿ ಪರೀಕ್ಷೆಗಾಗಿ ಮಾದರಿಗಳ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 341 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT