ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಸಿಗದ ಸಿದ್ಧಾರ್ಥ ಹೆಗ್ಡೆ ಸುಳಿವು: ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ನೇತ್ರಾವತಿ ನದಿ, ಸಮುದ್ರದಲ್ಲಿ ಮುಂದುವರಿದ ಶೋಧ
Last Updated 30 ಜುಲೈ 2019, 20:10 IST
ಅಕ್ಷರ ಗಾತ್ರ

ಮಂಗಳೂರು: ಸೋಮವಾರ ಸಂಜೆಯಿಂದ ಕಣ್ಮರೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಳಿಯ ಹಾಗೂ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಕಂಪನಿಯ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ.

ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ಸಿದ್ಧಾರ್ಥ, ಮಧ್ಯದಲ್ಲೇ ಮಾರ್ಗ ಬದಲಿಸಿ ಮಂಗಳೂರಿಗೆ ಬಂದಿದ್ದರು. ಸಂಜೆ 6 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನೇತ್ರಾವತಿ ಸೇತುವೆ ಬಳಿ ಕಾರಿನಿಂದ ಇಳಿದಿದ್ದರು. ಕಾದು ನಿಲ್ಲುವಂತೆ ಚಾಲಕನಿಗೆ ಸೂಚಿಸಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋದವರುನಾಪತ್ತೆಯಾಗಿದ್ದಾರೆ.

ಎರಡು ಗಂಟೆಯಾದರೂ ವಾಪಸು ಬಾರದಿದ್ದಾಗ ಕಾರು ಚಾಲಕ ಬಸವರಾಜ್‌ ಪಾಟೀಲ್‌ ಆತಂಕಗೊಂಡು ರಾತ್ರಿ 8 ಗಂಟೆ ಸುಮಾರಿಗೆಸಿದ್ಧಾರ್ಥ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಆ ನಂತರ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ರಾತ್ರಿ 9 ಗಂಟೆಯಿಂದ ಪೊಲೀಸರು ಸತತ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಉದ್ಯಮಿ ಈವರೆಗೂ ಪತ್ತೆಯಾಗಿಲ್ಲ.

ನಿರಂತರ ಶೋಧ: ನಾಪತ್ತೆ ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರ ಪೊಲೀಸರು ಶೋಧ ಆರಂಭಿಸಿದ್ದರು. ರಾತ್ರಿಯೇ ದೋಣಿಗಳ ನೆರವಿನಲ್ಲಿ ಹೆಚ್ಚಿನ ಸಾಮರ್ಥ್ಯದ ವಿದ್ಯುತ್‌ ದೀಪ ಬಳಸಿ ನೇತ್ರಾವತಿ ನದಿಯಲ್ಲಿ ಶೋಧ ನಡೆಸಲಾಗಿತ್ತು.

ಮಂಗಳವಾರ ಬೆಳಿಗ್ಗೆಯಿಂದ ಶೋಧ ತೀವ್ರಗೊಂಡಿದೆ. 150ಕ್ಕೂ ಹೆಚ್ಚು ಪೊಲೀಸರು, ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲು ಪೊಲೀಸ್‌ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸತತ 24 ಗಂಟೆಗಳ ಶೋಧದ ಬಳಿಕವೂ ಸಿದ್ಧಾರ್ಥಅವರ ಸುಳಿವು ಪತ್ತೆಯಾಗಿಲ್ಲ.

ನೇತ್ರಾವತಿ ಸೇತುವೆ ಬಳಿ ಮುಳುಗು ತಜ್ಞರು ಕೃತಕ ಆಮ್ಲಜನಕ ಪೂರೈಕೆ ವ್ಯವಸ್ಥೆಯೊಂದಿಗೆ ನದಿಯ ಆಳಕ್ಕಿಳಿದು ಶೋಧ ನಡೆಸಿದರು. ಕೋಸ್ಟ್‌ಗಾರ್ಡ್‌ನ ಹೋವರ್‌ ಕ್ರಾಫ್ಟ್‌ ಸಮುದ್ರ ಮತ್ತು ಅಳಿವೆ ಬಾಗಿಲಿನಲ್ಲಿ ಹಲವು ಬಾರಿ ಶೋಧ ನಡೆಸಿತು. 50ಕ್ಕೂ ಹೆಚ್ಚು ದೋಣಿಗಳಲ್ಲಿ ಇತರೆ ತಂಡಗಳು ಉಳ್ಳಾಲ, ಕೋಟೆಪುರ, ತಣ್ಣೀರುಬಾವಿ, ಅಳಿವೆಬಾಗಿಲು ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸಿವೆ.

ಆತ್ಮಹತ್ಯೆ ಶಂಕೆ: ಸಂಜೆ 6 ಗಂಟೆ ಸುಮಾರಿಗೆ ಸೇತುವೆ ಮೇಲೆ ನಡೆದುಕೊಂಡು ಬಂದ ಸಿದ್ಧಾರ್ಥ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್‌ ಆಫ್‌ ಆಗುವ ಮುನ್ನ ಕಾಫಿ ಡೇ ಮುಖ್ಯ ಹಣಕಾಸು ಅಧಿಕಾರಿ ಜಾವೇದ್‌, ಬೆಂಗಳೂರಿನ ಮತ್ತೊಬ್ಬ ಸಿಬ್ಬಂದಿ ಚಿದಂಬರ್‌ ಜೊತೆ ಮಾತನಾಡಿದ್ದಾರೆ. ಶನಿವಾರವೇ ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿಟ್ಟಿದ್ದು, ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗಿದೆ.

ಮಂಗಳವಾರ ಬೆಳಿಗ್ಗೆ ಶ್ವಾನ ದಳದಿಂದಲೂ ಶೋಧ ನಡೆಸಲಾಯಿತು. ಕಾರು ನಿಂತ ಸ್ಥಳದಿಂದ ಹೊರಟ ಶ್ವಾನ ಸೇತುವೆಯ ಮಧ್ಯ ಭಾಗಕ್ಕೆ ಬಂದು ನಿಂತಿತು. ಇದು ಆತ್ಮಹತ್ಯೆಯ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಅವರು ಬೆಂಗಳೂರಿನಿಂದ ಬಂದಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ಬಸವರಾಜ್‌ ಪಾಟೀಲ್‌ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಗಿದೆ.

ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರು ನಾಪತ್ತೆಯಾಗಿರುವ ಕುರಿತು ಅವರ ಕಾರಿನ ಚಾಲಕ ಬಸವರಾಜ್‌ ಪಾಟೀಲ್‌ ಮಂಗಳೂರಿನ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಚಾಲಕ ಬಸವರಾಜ್‌ದೂರಿನಲ್ಲಿ ಏನಿದೆ?

‘ಸಕಲೇಶಪುರ ಸಮೀಪಿಸುತ್ತಿದ್ದಂತೆ ಮಂಗಳೂರಿಗೆ ಹೋಗುವಂತೆ ಮಾಲೀಕರು ಸೂಚಿಸಿದರು. ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್‌ (ಪಂಪ್‌ವೆಲ್‌) ತಲುಪಿದಾಗ ಎಡಗಡೆ ತೆಗೆದುಕೋ, ಸೈಟಿಗೆ ಹೋಗಬೇಕು ಎಂದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ದೊಡ್ಡ ಸೇತುವೆ ಬಳಿ ಕಾರು ನಿಲ್ಲಿಸಲು ಹೇಳಿದರು. ಕಾರಿನಿಂದ ಇಳಿದು ಸೇತುವೆಯ ತುದಿಗೆ ಹೋಗು, ನಾನು ನಡೆದುಕೊಂಡು ಬರುತ್ತೇನೆ ಎಂದರು.

‘ಸೇತುವೆಯ ಇನ್ನೊಂದು ತುದಿಗೆ ಬಂದ ಮಾಲೀಕರು ಕಾರಿನಲ್ಲಿಯೇ ಇರು ಬರುತ್ತೇನೆ ಎಂದು ಹೇಳಿ ಸೇತುವೆಯ ಇನ್ನೊಂದು ಬದಿಗೆ ದಾಟಿ ನಡೆದುಕೊಂಡು ಹೋದರು. ಅವರು ವಾಪಸು ಬಾರದೇ ಇದ್ದಾಗ 8 ಗಂಟೆ ಸುಮಾರಿಗೆ ಮೊಬೈಲ್‌ಗೆ ಕರೆ ಮಾಡಿದೆ. ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಮತ್ತೆ ಕರೆ ಮಾಡಿದಾಗಲೂ ಸ್ವಿಚ್‌ ಆಫ್‌ ಆಗಿತ್ತು. ರಾತ್ರಿ 9 ಗಂಟೆಗೆ ಮಾಲೀಕರ ಮಗ ಅಮರ್ತ್ಯ ಹೆಗ್ಡೆ ಅವರಿಗೆ ಕರೆಮಾಡಿ ವಿಷಯ ತಿಳಿಸಿದೆ’ ಎಂದು ಉಲ್ಲೇಖಿಸಿದ್ದಾರೆ.

ಸಿದ್ಧಾರ್ಥಅವರು ನಾಪ್ತತೆಯಾಗುವ ಸಮಯದಲ್ಲಿ ಕಪ್ಪು ಟೀ ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ಮತ್ತು ಕಪ್ಪು ಬಣ್ಣದ ಶೂ ಧರಿಸಿದ್ದರು ಎಂಬ ಮಾಹಿತಿ ದೂರಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT