ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಪತ್ರದ ಬಗ್ಗೆಯೂ ತನಿಖೆ? ಪತ್ರದ ಅಸಲಿತನದ ಕುರಿತು ಸಂಶಯ

ಬಹು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು
Last Updated 31 ಜುಲೈ 2019, 20:00 IST
ಅಕ್ಷರ ಗಾತ್ರ

ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಕುರಿತು ನಗರ ಪೊಲೀಸರು ಬಹು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಾವಿಗೂ ಮುನ್ನ ಅವರು ಬರೆದಿಟ್ಟಿದ್ದಾರೆ ಎನ್ನಲಾದ ಪತ್ರದ ಬಗ್ಗೆಯೂ ತನಿಖೆ ನಡೆಸುವ ಸಾಧ್ಯತೆ ಇದೆ.

ಸಿದ್ಧಾರ್ಥ ಅವರ ಚಾಲಕ ಬಸವರಾಜ್‌ ಪಾಟೀಲ್‌ ನೀಡಿದ್ದ ದೂರನ್ನು ಆಧರಿಸಿ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬುಧವಾರ ಅವರ ಮೃತದೇಹ ಪತ್ತೆಯಾದ ಬಳಿಕ ಅದನ್ನು ಅಸಹಜ ಸಾವಿನ ಪ್ರಕರಣವನ್ನಾಗಿ ಬದಲಿಸಿ ತನಿಖೆ ಮುಂದುವರಿಸಲಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರು ತನಿಖೆಯ ನೇತೃತ್ವ ವಹಿಸಿದ್ದಾರೆ. ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌ ನಾಯ್ಕ್‌ ನೇತೃತ್ವದ ತಂಡ ಬೆಂಗಳೂರಿನಲ್ಲಿ ತನಿಖೆ ನಡೆಸುತ್ತಿದೆ. ಈ ತಂಡ ಬುಧವಾರ ಕೆಫೆ ಕಾಫಿ ಡೇ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಆಡಳಿತ ಮಂಡಳಿ ಸದಸ್ಯರ ಹೇಳಿಕೆಗಳನ್ನು ಪಡೆದಿದೆ.

ಮೃತ ಉದ್ಯಮಿಯ ಲ್ಯಾಪ್‌ಟಾಪ್‌, ಮೊಬೈಲ್‌, ಕಂಪ್ಯೂಟರ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಸಿದ್ಧಾರ್ಥ ಅವರ ಮೊಬೈಲ್‌ ಕರೆಗಳು ಮತ್ತು ಇ–ಮೇಲ್‌ ಸಂವಹನದ ಕುರಿತೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಗೊತ್ತಾಗಿದೆ.

ಪತ್ರದ ಕುರಿತು ಪರಿಶೀಲನೆ: ಸಿದ್ಧಾರ್ಥ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು.

ಅವರು ಕಾಫಿ ಡೇ ಆಡಳಿತ ಮಂಡಳಿ ಸದಸ್ಯರನ್ನು ಉದ್ದೇಶಿಸಿ ಶನಿವಾರ ಬರೆದಿದ್ದಾರೆ ಎನ್ನಲಾದ ಪತ್ರ ಮತ್ತು ಕಂಪನಿಯ ಆಸ್ತಿಗಳ ಪಟ್ಟಿಯೊಂದು ಮಂಗಳವಾರ ಬೆಳಿಗ್ಗೆಯೇ ಬಹಿರಂಗಗೊಂಡಿತ್ತು.

ಆದಾಯ ತೆರಿಗೆ ಅಧಿಕಾರಿಗಳು ತನಗೆ ಕಿರುಕುಳ ನೀಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಪತ್ರದ ಅಸಲಿತನದ ಕುರಿತು ಕಾಫಿ ಡೇ ಆಡಳಿತ ಮಂಡಳಿಯಲ್ಲೇ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಈಗ ನಡೆಯುತ್ತಿರುವ ತನಿಖೆಯಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಆಧರಿಸಿ, ಪತ್ರದಲ್ಲಿನ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕೆ, ಬೇಡವೆ ಎಂಬುದನ್ನು ತೀರ್ಮಾನಿಸಲು ತನಿಖಾ ತಂಡ ಮುಂದಾಗಿದೆ. ಪತ್ರದ ಅಸಲಿಯತ್ತಿನ ಕುರಿತು ಕಂಪನಿ ಆಡಳಿತ ಮಂಡಳಿ ದೂರು ನೀಡಿದಲ್ಲಿ ಆ ಬಗ್ಗೆಯೂ ತನಿಖೆ ನಡೆಸಲು ಯೋಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪತ್ರದಲ್ಲಿನ ಉಲ್ಲೇಖ ಆಧರಿಸಿ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂದೀಪ್‌ ಪಾಟೀಲ್‌, ‘ಪ್ರಕರಣ ಈಗ ತನಿಖೆಯ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲವನ್ನೂ ತಿಳಿಸುತ್ತೇವೆ’ ಎಂದರು.

ತನಿಖಾ ತಂಡ ಈಗ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸುತ್ತಿದೆ. ಇಬ್ಬರು ವಿಧಿ ವಿಜ್ಞಾನ ತಜ್ಞರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕೆಲವೇ ದಿನಗಳಲ್ಲಿ ವರದಿ ಹೊರಬರುವ ಸಾಧ್ಯತೆ ಇದೆ. ಅದನ್ನು ಆಧರಿಸಿ ತನಿಖೆಯ ಮುಂದಿನ ದಿಕ್ಕು ನಿರ್ಧಾರವಾಗಲಿದೆ.

ವಿಚಾರಣೆಗೆ ಅಡೆತಡೆ ಇಲ್ಲ

‘ಸಿದ್ಧಾರ್ಥ ಅವರು ಸಾಯುವ ಮೊದಲು ಬರೆದಿಟ್ಟಿದ್ದಾರೆ ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ಕಿರುಕುಳ ಆಗಿದೆ ಎಂದು ಉಲ್ಲೇಖಿಸಿದ್ದರೆ ಆರೋಪಿತ ಅಧಿಕಾರಿಗಳ ವಿಚಾರಣೆ ನಡೆಸಲು ಯಾವುದೇ ಅಡ್ಡಿ ಇಲ್ಲ. ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಅವರಿಗೆ ಕಿರುಕುಳ ನೀಡಲಾಗಿತ್ತೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ.

ಸಾವಿಗೆ ನೇರವಾಗಿ ಕಾರಣವಾಗಿದ್ದಲ್ಲಿ ಅಥವಾ ಪ್ರಚೋದನೆ ನೀಡಿದ್ದರೆ ಅಂತಹ ಯಾವುದೇ ವ್ಯಕ್ತಿಗಳನ್ನು ಬಂಧಿಸುವುದಕ್ಕೂ ಯಾವುದೇ ಅಡ್ಡಿ ಇಲ್ಲ. ಆರೋಪಿಯು ಅಧಿಕಾರಿಯಾಗಿದ್ದರೆ, ಬಂಧನದ ಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ತನಿಖೆ ನಡೆಸುವುದು ಕಷ್ಟ

‘ಸಿದ್ಧಾರ್ಥ ಅವರದ್ದು ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಇರುವ ಮಾಹಿತಿ ಅವರನ್ನು ತನಿಖೆಗೊಳಪಡಿಸಲು ಅವಕಾಶ ನೀಡುವಂತೆ ಇಲ್ಲ. ಇದರಿಂದಾಗಿ ಪೊಲೀಸರು ಕ್ರಮ ಜರುಗಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೇ, ಇಲಾಖೆಯು ಸಿದ್ಧಾರ್ಥ ಅವರಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಅವುಗಳನ್ನು ಗಮನಿಸಿದರೆ ಇಲಾಖೆ ಅವರ ವಿರುದ್ಧ ಇನ್ನೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸದೇ ಇರುವುದು ಅವರೊಂದಿಗೆ ಮೃದುವಾಗಿಯೇ ನಡೆದುಕೊಂಡಿರುವುದಕ್ಕೆ ಸಾಕ್ಷಿ’ ಎಂದು ಸುಪ್ರೀಂಕೋರ್ಟ್‌ ವಕೀಲ ಕೆ.ವಿ.ಧನಂಜಯ ಪ್ರತಿಕ್ರಿಯಿಸಿದರು.

ಕಾಫಿ ಡೇ ಕಂಪನಿಯ ಪ್ರತಿನಿಧಿಗಳು ಅಥವಾ ಮೃತರ ಕುಟುಂಬದ ಸದಸ್ಯರು ಹೆಚ್ಚಿನ ಮಾಹಿತಿಗಳೊಂದಿಗೆ ದೂರು ನೀಡಿದರೆ ಇಲಾಖಾ ಹಂತದಲ್ಲಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಬಹುದು. ಇಲ್ಲವಾದರೆ ಸಂಬಂಧಿಸಿದವರು ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಬಹುದು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT