ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಹಿಂದು ವಿರೋಧಿಗಳಿಂದಲೇ ಕುಲ–ಗೋತ್ರ ಪಠಣ: ವಿಷ್ಣು ಸದಾಶಿವ ಲೇವಡಿ

ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಅಧ್ಯಕ್ಷ ನ್ಯಾ.ವಿಷ್ಣು ಸದಾಶಿವ
Last Updated 27 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದ್ದವರೇ ಈಗ, ಕುಲ–ಗೋತ್ರ ಹೇಳಿಕೊಂಡು ಮಠ–ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ' ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಅಧ್ಯಕ್ಷ ನ್ಯಾ.ವಿಷ್ಣು ಸದಾಶಿವ ಲೇವಡಿ ಮಾಡಿದರು.

ನಗರದ ಸಂಘನಿಕೇತನದಲ್ಲಿ ಶುಕ್ರವಾರ ಆರಂಭಗೊಂಡ ವಿಹಿಂಪದ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘2014ರ ಬಳಿಕ ಭಾರತದ ಸಮಾಜ ಮಾತ್ರವಲ್ಲ, ಶಾಸನ ಸಭೆಯಲ್ಲೂ ಬದಲಾವಣೆಯಾಗುತ್ತಿದ್ದು, ‘ಹಿಂದೂ’ ಎಂದು ಗರ್ವದಿಂದ ಹೇಳುವ ಕಾಲ ಶುರುವಾಗಿದೆ’ ಎಂದರು.

‘ದೇಶದಲ್ಲಿ ಮತಾಂತರ, ಬೌದ್ಧಿಕ ಆಕ್ರಮಣಗಳು ನಡೆದಿವೆ. ಆದರೆ, ಈಗ ಬದಲಾವಣೆ ಬರುತ್ತಿದೆ. ಬೈಠಕ್‌ನಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಯಲಿವೆ’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ಸಮಸ್ಯೆ ಬಗೆಹರಿದಿರುವುದು ಸಂತಸದ ವಿಚಾರವಾಗಿದ್ದು, ಆದಷ್ಟು ಬೇಗ ಮಂದಿರ ನಿರ್ಮಾಣವಾಗಲಿ. ಜತೆಗೆ ಅದು ಶ್ರದ್ಧೆ ಹಾಗೂ ಭಕ್ತಿಯ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿ’ ಎಂದು ಹಾರೈಸಿದರು.

‘ಈ ಹಿಂದೆ ಬಡತನದ ಕಾರಣ ಮತಾಂತರ ನಡೆಯುತ್ತಿತ್ತು. ಆದರೆ, ಗ್ರಾಮೀಣಾಭಿವೃದ್ಧಿ ಹಾಗೂ ಸೇವಾ ಚಟುವಟಿಕೆಗಳ ಕಾರಣ ಕರ್ನಾಟಕದಲ್ಲಿ ಆಮಿಷದ ಮತಾಂತರ ನಡೆಯುತ್ತಿಲ್ಲ’ ಎಂದರು.

‘ಸುಮಾರು 50 ವರ್ಷಗಳ ಹಿಂದೆ ‘ಕಾನ್ವೆಂಟ್’ ಎಂದರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿತ್ತು. ಈಗ ಹಿಂದೂ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಆದರೆ, ಸೇವೆಯೇ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಪ್ರಮುಖ ಗುರಿಯಾಗಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ವಿಕಾಸ ಯೋಜನೆಯಡಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರವು ಅತ್ಯಂತ ಸ್ವಚ್ಛ ದೇವಾಲಯ ಎಂದು ಇಂಡಿಯಾ ಟುಡೇ ಪ್ರಶಸ್ತಿ ನೀಡಿತ್ತು. ಈ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶ್ಲಾಘಿಸಿದ್ದು, ಉತ್ತರ ಭಾರತದಲ್ಲೂ ಈ ರೀತಿಯ ಕೆಲಸಗಳನ್ನು ಮಾಡುವ ಬಗ್ಗೆ ವಿವರಗಳನ್ನು ಕೇಳಿದ್ದರು. ಮಾಹಿತಿ ಕಳುಹಿಸಿಕೊಟ್ಟಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ಆಗಸ್ಟ್ 15 ಹಾಗೂ ಜನವರಿ 14ರಂದು ದೇವಸ್ಥಾನಗಳ ಸ್ವಚ್ಛತೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು’ ಎಂದರು.

ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಮಾತನಾಡಿ, ‘ವಿಹಿಂಪ ಆರಂಭಗೊಂಡ ವರ್ಷವೇ ನನ್ನ ಜನನವಾಗಿದ್ದು, ನನ್ನ ಜೀವನವನ್ನು ವಿಹಿಂಪದ ಜತೆ ಕಾರ್ಯನಿರ್ವಹಿಸಲು ಮುಡಿಪಾಗಿಟ್ಟಿದ್ದೇನೆ’ ಎಂದರು.

‘ವಿಶ್ವದ ಕಲ್ಯಾಣವಾಗಲಿ ಎಂಬುದೇ ಹಿಂದೂ ಸಂಸ್ಕೃತಿ. ಆದರೆ ವಿದೇಶಿಯರ ಆಕ್ರಮಣದಿಂದಾಗಿ ನಮ್ಮ ಸಂಸ್ಕೃತಿ ಮರೆಯಾಗಿತ್ತು. ಈಗ ಹೂವು ಅರಳಲು ಆರಂಭಗೊಂಡಿದೆ. ಶೀಘ್ರವೇ ಫಲವೂ ದೊರೆಯಲಿ’ ಎಂದು ಹಾರೈಸಿದರು.

ವಿಹಿಂಪ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಹಿಂಪ ಅಂತರ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಚೌಧುರಿ, ಉಪಾಧ್ಯಕ್ಷರಾದ ಜೀವೇಶ್ವರ ಮಿಶ್ರಾ, ಬೀನಾ ಭಟ್, ಓಂ ಪ್ರಕಾಶ್ ಶಿಂಧೆ, ಜಗನ್ನಾಥ ಶಾಹಿ, ಚಂಪತ್ ರಾಯ್, ಮುಖ್ಯ ಟ್ರಸ್ಟಿ ರಮೇಶ್ ಮೋದಿ, ಕೋಶಾಧಿಕಾರಿ ಗೋಪಾಲ್ ಜುಂಜನ್‍ವಾಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ, ಸಂಘಟನಾ ಕಾರ್ಯದರ್ಶಿ ವಿನಾಯಕ ರಾವ್ ದೇಶಪಾಂಡೆ, ದಕ್ಷಿಣ ಕರ್ನಾಟಕ ಅಧ್ಯಕ್ಷರಾದ ವಿಜಯಲಕ್ಷಿ ಇದ್ದರು.

ವಿಹಿಂಪ ದಕ್ಷಿಣ ಕರ್ನಾಟಕ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಶರಣ್ ಪಂಪ್‍ವೆಲ್ ವಂದಿಸಿದರು.

‘ರಾಮನ ಜನ್ಮ ಕುಂಡಲಿ ಸಮಸ್ಯೆ’

ರಾಮ ಮಂದಿರ ನಿರ್ಮಾಣ ಏಕೆ ವಿಳಂಬವಾಯಿತು ಎಂದು ‌ನನ್ನನ್ನು ಕಾಡುತ್ತಿದ್ದು, ರಾಮನ ಜನ್ಮ ಕುಂಡಲಿಯೇ ಸಮಸ್ಯೆಯಾಗಿರಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟರು.

‘ದಶರಥರ ತಪಸ್ಸಿನ ಬಳಿಕ ರಾಮನ ಜನ್ಮವಾಗಿತ್ತು. ಆದರೆ, ಬಳಿಕ ರಾಮ ಶಿಕ್ಷಣಕ್ಕಾಗಿ ಕಾಡಿಗೆ ಹೋಗಬೇಕಾಯಿತು. ಸಿಂಹಾಸನ ಏರಲು ಸಿದ್ಧತೆ ನಡೆದಾಗ ವನವಾಸವಾಯಿತು. ಎರಡು ಮಕ್ಕಳಾದರೂ, ಸೀತೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ. ಹೀಗೆ ಎಲ್ಲವೂ ವಿಳಂಬವಾಗಿತ್ತು. ಹಾಗಿದ್ದರೂ ರಾಮ ಪ್ರತಿ ಕ್ಷಣವನ್ನೂ ಲೋಕ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ. ಅದರಿಂದಲೇ ಲೋಕದ ಸಮಸ್ಯೆಗೆ ಪರಿಹಾರ ಸಿಕ್ಕಿತು. ಇದೇ ರೀತಿ ರಾಮ ಮಂದಿರ ನಿರ್ಮಾಣಕ್ಕೂ ಸಮಯ ತಗುಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT