ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಬಜರಂಗದಳ ಶೌರ್ಯ ಯಾತ್ರೆ 29ಕ್ಕೆ

Last Updated 25 ಜನವರಿ 2023, 7:51 IST
ಅಕ್ಷರ ಗಾತ್ರ

ಮಂಗಳೂರು: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಬಜರಂಗದಳದ ವತಿಯಿಂದ ಉಳ್ಳಾಲದಲ್ಲಿ ಇದೇ 29ರಂದು ಶೌರ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ‘ಉಳ್ಳಾಲಬೈಲ್‌ನಿಂದ ಇದೇ 29ರಂದು ಮಧ್ಯಾಹ್ನ 3ಕ್ಕೆ ಆರಂಭವಾಗಲಿರುವ ಯಾತ್ರೆ ಕೃಷ್ಣನಗರ, ಒಳಪೇಟೆ– ಓವರ್‌ಬ್ರಿಜ್‌– ತೊಕ್ಕೊಟ್ಟು ಜಂಕ್ಷನ್‌– ಕಾಪಿಕಾಡ್‌– ಓವರ್‌ಬ್ರಿಜ್ ಮಾರ್ಗವಾಗಿ ಉಳ್ಳಾಲಬೈಲ್‌ ಶ್ರೀವೈದ್ಯನಾಥ ಚಾವಡಿಯ ದೊಡ್ಡ ಮನೆತನ ಗದ್ದೆಯಲ್ಲಿ ಸಮಾಪನಗೊಳ್ಳಲಿದೆ. ಬಜರಂಗದಳದ 2 ಸಾವಿರ ಕಾರ್ಯಕರ್ತರು ಸಮವಸ್ತ್ರ ಧರಿಸಿ, ದಂಡ ಹಾಗೂ ಓಂಕಾರ ಧ್ವಜ ಹಿಡಿದು ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಬಜರಂಗದಳದ ರಾಷ್ಟ್ರೀಯ ಸಂಯೋಜಕ ನೀರಜ್‌ ದೌನೇರಿಯಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಭಾಗವಹಿಸಲಿದ್ದಾರೆ’ ಎಂದರು.

‘ಗುಲಾಮಗಿರಿಯ ಸಂಕೇತವಾಗಿದ್ದ ಬಾಬರಿ ಮಸೀದಿಯನ್ನು ಕೆಡವಿದ ನೆನಪಿನಾರ್ಥ ಇನ್ನು ಪ್ರತಿವರ್ಷ ಗೀತಾ ಜಯಂತಿಯಂದು ಶೌರ್ಯ ಯಾತ್ರೆ ಹಮ್ಮಿಕೊಳ್ಳಲಿದ್ದೇವೆ. ತಾಲ್ಲೂಕು ಕೇಂದ್ರಗಳಲ್ಲಿ ಈಗಾಗಲೇ ಶೌರ್ಯ ಯಾತ್ರೆ ನಡೆದಿದೆ. ಉಳ್ಳಾಲ ಪ್ರದೇಶದ ಹಿಂದೂಗಳಲ್ಲಿ ಸುರಕ್ಷಿತ ಭಾವನೆ ಇಲ್ಲ. ಅವರಲ್ಲಿ ಧೈರ್ಯ ತುಂಬುವ ಉದ್ದೇಶದಿಂದಲೇ ಈ ಯಾತ್ರೆಯನ್ನು ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

ಇದು ಸಂಘರ್ಷಕ್ಕೆ ಪ್ರಚೋದನೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಯಾರನ್ನೂ ಪ್ರಚೋದಿಸುವುದು ನಮ್ಮ ಉದ್ದೇಶವಲ್ಲ. ಮಾರಕಾಯುಧ ಹಿಡಿದು ಮೆರವಣಿಗೆ ನಡೆಸುವುದಿಲ್ಲ. ಈ ಯಾತ್ರೆಯಲ್ಲಿ ಬಜರಂಗದಳದ ಶಿಸ್ತನ್ನು ನೋಡುತ್ತೀರಿ’ ಎಂದರು.

‘ಮಂಗಳೂರು ಕ್ಷೇತ್ರದ (ಉಳ್ಳಾಲ) ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಉಗ್ರಗಾಮಿ ಚಟುವಟಿಕೆ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಈ ಕ್ಷೇತ್ರದ ಕೆಲ ಪ್ರದೇಶಗಳು ಉಗ್ರಗಾಮಿ ಚಟುವಟಿಕೆಯ ತಾಣವಾಗಿ ಗುರುತಿಸಿಕೊಂಡರೂ ಸ್ಥಳೀಯ ಶಾಸಕರು ಸೊಲ್ಲೆತ್ತಿಲ್ಲ. ‘ಲವ್‌ ಜಿಹಾದ್‌’, ಮತಾಂತರದ ಮೂಲಕ ಹಿಂದೂಗಳ ಮೇಲೆ ನಡೆಯುವ ಶೋಷಣೆ ಬಗ್ಗೆ ಮಾತನಾಡುತ್ತಿಲ್ಲ. ಉಳ್ಳಾಲದಲ್ಲೂ ಹಿಂದೂ ಧರ್ಮದವರೇ ಶಾಸಕರಾಗಬೇಕು. ಆದರೆ, ಈ ಯಾತ್ರೆಗೂ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ. ಈ ಯಾತ್ರೆಯು ದೇಶದಾದ್ಯಂತ ನಡೆಯುತ್ತಿದೆ’ ಎಂದರು.

‘ಶರಣ್‌ ಪಂಪ್‌ವೆಲ್‌ ಮಂಗಳೂರು ಕ್ಷೇತ್ರದ ಟಿಕೆಟ್‌ ಗಿಟ್ಟಿಸಲು ಈ ಯಾತ್ರೆ ನಡೆಸುತ್ತಿದ್ದಾರೆ ಎಂಬುದು ಸರಿಯಲ್ಲ. ಈ ಬಗ್ಗೆ ಚರ್ಚೆಯೇ ಆಗಿಲ್ಲ. ನಮ್ಮ ಸಂಘಟನೆಯಲ್ಲಿದ್ದವರು ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕಾದರೆ 6 ತಿಂಗಳು ಮುನ್ನವೇ ಸಂಘಟನೆಯನ್ನು ತ್ಯಜಿಸಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ ನವೀನ್‌ ಮೂಡುಶೆಡ್ಡೆ, ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT