ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯೊಂದು ಮೂರು ಬಾಗಿಲು’ ಆದ ಬಿಜೆಪಿ

ಭುಗಿಲೆದ್ದ ಆಂತರಿಕ ಭಿನ್ನಮತ; ಮುಖಂಡರ ನಡೆಗೆ ಕಾರ್ಯಕರ್ತರ ಅಸಮಾಧಾನ
Last Updated 25 ಏಪ್ರಿಲ್ 2018, 8:36 IST
ಅಕ್ಷರ ಗಾತ್ರ

ಚಿಂತಾಮಣಿ: ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದು ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಬಿಜೆಪಿ ಪರಿಸ್ಥಿತಿ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದೆ.

ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಲ್ಲೂ ವ್ಯಕ್ತಿ ಪ್ರತಿಷ್ಠೆ ಪ್ರಧಾನವಾಗಿದೆ ಎಂಬುದು ಸ್ಪಷ್ಟ. ಪಕ್ಷದ ಹೈಕಮಾಂಡ್‌ ಆಗಿದ್ದ ಸತ್ಯನಾರಾಯಣ ಮಹೇಶ್‌ 2013ರ ಚುನಾವಣೆಯಲ್ಲಿ ಸೋಲನುಭವಿಸಿದರು. ಅದಾದ ನಂತರ ಗುಂಪುಗಳು ಸೃಷ್ಟಿಯಾಗಿ ಪಕ್ಷ ಛಿದ್ರಗೊಂಡಿತು. ಈ ಅನಿರೀಕ್ಷಿತ ಬೆಳವಣಿಗೆಗಳು ಪಕ್ಷದಲ್ಲಿ ಗೊಂದಲ ಮೂಡಿಸಿವೆ ಎಂಬುದು ನಿಷ್ಠಾವಂತ ಕಾರ್ಯಕರ್ತರ ಅನಿಸಿಕೆ.

ಚುನಾವಣೆ ಸಮೀಪಿಸಿದ ಕಾರಣ ಸ್ವಲ್ಪ ಮಟ್ಟಿಗೆ ತೇಪೆ ಹಾಕಿ ಭಿನ್ನಮತ ಶಮನಗೊಳಿಸಲಾಗಿತ್ತು. ಈ ನಡುವೆ ಜೆಡಿಎಸ್‌ ಮುಖಂಡ ಮಾಡಿಕೆರೆ ಅರುಣ್‌ಬಾಬು ಬಿಜೆಪಿಗೆ ಸೇರಿದ್ದರು. ಪಕ್ಷದ ಹೈಕಮಾಂಡ್‌ ಆದೇಶದಿಂದ ಮೇಲ್ನೋಟಕ್ಕಾದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಟಿ.ಸಿ. ವೆಂಕಟೇಶರೆಡ್ಡಿ ಸಹ ಬಿಜೆಪಿಗೆ ಸೇರ್ಪಡೆಯಾದರು.

ಆರಂಭದಲ್ಲಿ ಸತ್ಯನಾರಾಯಣ ಮಹೇಶ್‌, ನಾ.ಶಂಕರ್‌ ಮತ್ತು ಅರುಣ್‌ಬಾಬು ಹೆಸರು ಕೇಳಿ ಬರುತ್ತಿತ್ತು. ಸತ್ಯನಾರಾಯಣ ಮಹೇಶ್‌ ಸ್ಪರ್ಧಿಸಲು ಆಸಕ್ತಿ ತೋರಲಿಲ್ಲ. ಶಂಕರ್‌, ಅರುಣಬಾಬು, ವೆಂಕಟೇಶರೆಡ್ಡಿ ಟಿಕೆಟ್‌ ಆಕಾಂಕ್ಷಿಗಳಾಗಿ ಪೈಪೋಟಿಯಲ್ಲಿ ಇದ್ದರು. ಶಂಕರ್‌ ಮೂಲ ಬಿಜೆಪಿ ಯವರು, ಅರುಣ ಬಾಬು ಮತ್ತು ವೆಂಕಟೇಶ ರೆಡ್ಡಿ ವಲಸಿಗರು. ಅಂತಿಮವಾಗಿ ಶಂಕರ್‌ಗೆ ಟಿಕೆಟ್‌ ಘೋಷಣೆಯಾ ಯಿತು. ಇದರಿಂದ ಹೊಗೆಯಾಡು ತ್ತಿದ್ದ ಭಿನ್ನಮತ ಬಹಿರಂಗವಾಗಿದೆ.

ಅರುಣಬಾಬು ಮತ್ತು ವೆಂಕಟೇಶ ರೆಡ್ಡಿ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿದೆ. ಸ್ಥಳೀಯವಾಗಿ ಪಕ್ಷಕ್ಕೆ ದಿಕ್ಕುದೆಸೆ ಇಲ್ಲದಂತಾಗಿದೆ ಎಂಬುದು ಹಿರಿಯ ಕಾರ್ಯಕರ್ತ ಮಂಜುನಾಥ್‌ ನೋವು ತೋಡಿಕೊಂಡರು.

‘ಎರಡು ವರ್ಷಗಳಿಂದ ಕ್ಷೇತ್ರದ ಹಳ್ಳಿಹಳ್ಳಿಗೂ ಭೇಟಿ ನೀಡಿ ಪಕ್ಷದ ಧ್ವಜ ಕಟ್ಟಿ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದ್ದೇನೆ. ಸ್ವಂತ ಹಣದಿಂದ ಹಲವಾರು ಕಾರ್ಯಕ್ರಮ ಏರ್ಪಡಿಸಿದೆ. ನನಗೆ ಟಿಕೆಟ್‌ ಕೊಡುವುದಾಗಿ ಆಶ್ವಾಸನೆ ನೀಡಿ, ಕೊನೆ ಗಳಿಗೆಯಲ್ಲಿ ಮೋಸ ಮಾಡಲಾಗಿದೆ. ಪಕ್ಷದ ಸ್ಥಳೀಯ ಮುಖಂಡರ ಕುತಂತ್ರವೇ ಇದಕ್ಕೆ ಕಾರಣ’ ಎಂದು ಅರುಣ್‌ಬಾಬು ಕಣ್ಣೀರಿಟ್ಟರು.

‘ಪಕ್ಷದ ನಾಯಕರು ಟಿಕೆಟ್‌ ಕೊಡುವುದಾಗಿ ಆಶ್ವಾಸನೆ ನೀಡಿ ಪಕ್ಷಕ್ಕೆ ಸೇರಿಸಿಕೊಂಡರು. ಅವರೇ ಕರೆದುಕೊಂಡು ಹೋಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಿಸಿದರು. ನನಗೆ ಟಿಕೆಟ್‌ ತಪ್ಪಿಸಲು ಸ್ಥಳೀಯ ಶಾಸಕ ಎಂ.ಕೃಷ್ಣಾರೆಡ್ಡಿಗೆ ಬೆಂಗಳೂರಿನ ಬಿಜೆಪಿ ನಂಟು ಕಾರಣ. ಬಿಜೆಪಿಗೆ ದುರ್ಬಲ ಅಭ್ಯರ್ಥಿಯಾದರೆ ಮತಗಳು ಜೆಡಿಎಸ್‌ಗೆ ಬೀಳುತ್ತವೆ ಎಂಬುದು ಅವರ ಆಲೋಚನೆಯಾಗಿದೆ’ ಎಂಬುದು ವೆಂಕಟೇಶರೆಡ್ಡಿ ಆರೋಪ.

ವಕೀಲ ಶಂಕರ್‌ 30 ವರ್ಷಗಳಿಂದ ಪಕ್ಷದ ಹಲವು ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಮೋರ್ಚಾಗಳ ನೇತೃತ್ವ ವಹಿಸಿದ್ದರು. ಸೇವೆ ಹಾಗೂ ಪಕ್ಷನಿಷ್ಠೆ ಗಮನಿಸಿ ಹೈಕಮಾಡ್‌ ಟಿಕೆಟ್‌ ನೀಡಿದೆ ಎಂದು ಶಂಕರ್‌ ಹೇಳುವರು.

ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿಯಾದ ನೆಲೆಯಿಲ್ಲ. ಆಂತರಿಕ ಭಿನ್ನಮತದಿಂದ ಪಕ್ಷ ಮತ್ತಷ್ಟು ನಲುಗಿದೆ. ಇದೀಗ ಭಿನ್ನಮತ ಬಹಿರಂಗವಾಗಿ ಗುಂಪುಗಳು ವಿಭಜನೆಯಾಗಿವೆ. ಮುಖಂಡರಾದ ಶಂಕರ್‌, ಸತ್ಯನಾರಾಯಣ ಮಹೇಶ್‌ ನೇತೃತ್ವದ ಮೂಲ ಬಿಜೆಪಿಯವರು ಒಂದೆಡೆಯಾದರೆ, ವಲಸಿಗರಾದ ಅರುಣ್‌ಬಾಬು ಮತ್ತು ವೆಂಕಟೇಶರೆಡ್ಡಿ ಅವರದು ಪ್ರತ್ಯೇಕ ಗುಂಪುಗಳಾಗಿವೆ. ಮೂವರೂ ಭಿನ್ನಮತ ಇಲ್ಲ ಎನ್ನುತ್ತಲೇ ಪರಸ್ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನೆಲಕಚ್ಚಿರುವ ಪಕ್ಷ, ಮುಂದೆ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಈ ಬಗ್ಗೆ ವರಿಷ್ಠರೂ ಆಸಕ್ತಿ ತೋರುತ್ತಿಲ್ಲ ಎಂಬುದು ಪಕ್ಷದ ಹಿರಿಯರ ಅಳಲು.

ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT