ಶುಕ್ರವಾರ, ಜನವರಿ 28, 2022
25 °C
ಅಳೆದು, ತೂಗಿ ನಿರ್ಧಾರ ಪ್ರಕಟಿಸಿದ ವರಿಷ್ಠರು

ವಿಧಾನ ಪರಿಷತ್‌ ಚುನಾವಣೆ: ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಕಣಕ್ಕೆ ಇಳಿಯಲಿದ್ದಾರೆ. ಮಂಗಳವಾರ (ನ.23) ನಾಮಪತ್ರ ಸಲ್ಲಿಸಲಿದ್ದಾರೆ.

ಇದುವರೆಗೆ ಉಡುಪಿ ಜಿಲ್ಲೆಯ ಪಾಲಾಗಿದ್ದ ಕಾಂಗ್ರೆಸ್‌ ಟಿಕೆಟ್‌ ಇದೀಗ, ದಕ್ಷಿಣ ಕನ್ನಡ ಜಿಲ್ಲೆಯವರಿಗೆ ದೊರೆತಿದೆ. ಈ ಮೂಲಕ ಕಾಂಗ್ರೆಸ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕ ತುಸು ಮೇಲುಗೈ ಸಾಧಿಸಿದೆ. ಈ ಮೊದಲು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್ ಅವರನ್ನೇ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ಉಡುಪಿ ಜಿಲ್ಲಾ ಘಟಕದ ಮುಖಂಡರು ಪ್ರಯತ್ನಿಸಿದ್ದರು. ಆದರೆ, ರಾಜೇಂದ್ರಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದು, ಇದೀಗ ಮಂಜುನಾಥ ಭಂಡಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಮೊದಲಿನಿಂದಲೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ ಭಂಡಾರಿ, ರಾಷ್ಟ್ರಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರ ಪರಿಣಾಮವಾಗಿಯೇ 11 ಆಕಾಂಕ್ಷಿಗಳ ಮಧ್ಯೆ ಮಂಜುನಾಥ ಭಂಡಾರಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣೆ ನಿಶ್ಚಿತ: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರಕ್ಕೆ ಇದುವರೆಗೆ ಕೇವಲ ಎರಡು ನಾಮಪತ್ರ ಸಲ್ಲಿಕೆಯಾಗಿವೆ. ಮೊದಲ ದಿನವೇ ಸುಪ್ರೀತ್‌ಕುಮಾರ್ ಪೂಜಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಎಸ್‌ಡಿಪಿಐನಿಂದ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ. ಜೆಡಿಎಸ್‌ನಿಂದ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಾಗಿದೆ. ಇದರಿಂದಾಗಿ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

ಈಗಾಗಲೇ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಬಿಜೆಪಿ ಸುಲಭದಲ್ಲಿ ಜಯಗಳಿಸುವ ವಿಶ್ವಾಸವನ್ನು ಹೊಂದಿದೆ. ಉಭಯ ಜಿಲ್ಲೆಗಳಲ್ಲಿ 3,500ಕ್ಕೂ ಅಧಿಕ ಮತಗಳಿದ್ದು, ಮೊದಲ ಪ್ರಾಶಸ್ತ್ಯದ ಮತಗಳ ಗೆಲುವಿಗೆ 2,050 ಮತಗಳನ್ನು ಪಡೆದರೆ ಸಾಕು. ಹೀಗಾಗಿ ಇನ್ನೂ 1,500 ಮತಗಳು ಹೆಚ್ಚುವರಿಯಾಗಿ ಉಳಿಯಲಿದ್ದು, ಯಾರಿಗೆ ಈ ಮತಗಳು ದೊರೆಯಲಿವೆ ಎನ್ನುವ ಕುತೂಹಲ ಇದೀಗ ಕ್ಷೇತ್ರದ ಮತದಾರರದ್ದಾಗಿದೆ.

ಒಂದೆಡೆ ಕಾಂಗ್ರೆಸ್‌ಗೆ 150 ಮತಗಳ ಕೊರತೆ ಎದುರಾಗಿದ್ದರೂ, ಪಕ್ಷೇತರರ ಮತದಾರರ ಬೆಂಬಲ ಪಡೆಯುವ ವಿಶ್ವಾಸವಿದೆ. ಆದರೆ, ಎಸ್‌ಡಿಪಿಐ ಸ್ಪರ್ಧೆಗೆ ಇಳಿಯುವುದರಿಂದ ಪಕ್ಷೇತರರು, ಅದರಲ್ಲೂ ಎಸ್‌ಡಿಪಿಐನ ಸದಸ್ಯರ ಮತಗಳು ಕಾಂಗ್ರೆಸ್‌ಗೆ ದೊರೆಯುವುದು ದುರ್ಲಭ ಎನ್ನಲಾಗುತ್ತಿದೆ.

ಇದೆಲ್ಲದರ ಮಧ್ಯೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವ ದಿನಾಂಕದತ್ತ ಮತದಾರರು ಗಮನ ಕೇಂದ್ರಿಕರಿಸಿದ್ದಾರೆ. ಒಂದು ವೇಳೆ ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿ ನಾಮಪತ್ರ ಹಿಂಪಡೆದರೆ, ಅವಿರೋಧ ಆಯ್ಕೆ ಆಗಲಿದೆ. ಆದರೆ, ಈ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಬಂಟ್ವಾಳ ತಾಲ್ಲೂಕಿನ ಭಂಡಾರಿ

ಬಂಟ್ವಾಳ ತಾಲ್ಲೂಕಿನ ತೆಂಕಬೆಳ್ಳೂರು ಗ್ರಾಮ ಕಮ್ಮಾಜೆಯ ಬಂಟ ಕೃಷಿ ಮನೆತನದ ಮಂಜುನಾಥ ಭಂಡಾರಿ, ಪಂಚಾಯತ್ ರಾಜ್‌ನಲ್ಲಿ ಎಂ.ಫಿಲ್‌ ಮತ್ತು ಪಿಎಚ್‌ಡಿ ಮಾಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ತೆಂಕಬೆಳ್ಳೂರು, ಬೆಂಜನಪದವಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಅವರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಅಖಿಲ ಭಾರತ ಯುವ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ, ಎಐಸಿಸಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2014 ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು