ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿ ಸಮಿತಿ ರಚನೆಗೆ ಚಿಂತನೆ

ಪರಿಶಿಷ್ಟರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಎಸ್ಪಿ ಋಷಿಕೇಶ್ ಸೋನಾವಣೆ
Last Updated 2 ಡಿಸೆಂಬರ್ 2022, 6:05 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮಗಳ ಜನರ ಸುರಕ್ಷತೆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿ, ಸ್ಥಳೀಯರನ್ನು ಒಳಗೊಂಡ ಜಾಗೃತ ಸಮಿತಿ (ವಿಜಿಲನ್ಸ್ ಕಮಿಟಿ) ರಚನೆಗೆ ಯೋಚಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದರು.

ಎಸ್ಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಅವರು ಪರಿಶಿಷ್ಟ ಸಮುದಾಯದ ನಾಯಕಿ ಸರಸ್ವತಿ ಅವರ ಅಹವಾಲಿಗೆ ಉತ್ತರಿಸಿದರು. ‘ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನಲ್ಲಿ ಅನೇಕರು ಚಾಪೆ, ಬಕೆಟ್‌ ಸೇರಿದಂತೆ ಸಾಮಗ್ರಿಗಳ ಮಾರಾಟಕ್ಕೆ ಬರುತ್ತಾರೆ. ಒಂಟಿ ಮಹಿಳೆಯರು ಇರುವ ಮನೆಗಳಲ್ಲಿ ತೊಂದರೆ ಎದುರಾಗುವ ಸಂದರ್ಭ ಇರುತ್ತದೆ. ಹಳ್ಳಿಗಳಲ್ಲಿ ನಗರದಂತೆ ಸಿಸಿಟಿವಿ ಕ್ಯಾಮೆರಾಗಳು ಇರುವುದಿಲ್ಲ. ಹಾಗಾಗಿ, ವ್ಯಾಪಾರಕ್ಕೆ ಬರುವವರು ಸ್ಥಳೀಯ ಪಂಚಾಯಿತಿಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಸರಸ್ವತಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಪಂಚಾಯಿತಿ ಅನುಮತಿ ಪಡೆಯುವ ಬಗ್ಗೆ ಚರ್ಚಿಸಲಾಗುವುದು. ಸ್ಥಳೀಯರು ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಇದ್ದಲ್ಲಿ, ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ, ಶಾಲಾ– ಕಾಲೇಜುಗಳಲ್ಲಿ ಠಾಣಾ ಮುಖ್ಯಸ್ಥರು, ಪೊಲೀಸ್ ಸಿಬ್ಬಂದಿ ಮೂಲಕ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ತಿಂಗಳ ಮೂರನೇ ಭಾನುವಾರವನ್ನು ನೊಂದವರ ದಿನವನ್ನಾಗಿ ಠಾಣೆಗಳಲ್ಲಿ ಆಚರಿಸಲಾಗುತ್ತದೆ. ಇಲ್ಲಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುತ್ತದೆ. ಠಾಣಾ ಮಟ್ಟದಲ್ಲಿ ಯುವ ಸಮಿತಿಗಳ ರಚನೆ ಕಾರ್ಯ ನಡೆಯುತ್ತಿದೆ ಎಂದರು.

ಉಮೇಶ ವಿಟ್ಲ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸರು ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಬೇಕು. ಆ ಮೂಲಕ ಜನರಿಗೆ ಪೊಲೀಸರ ಬಗ್ಗೆ ಇರುವ ಭಯ ದೂರಗೊಳಿಸಿ, ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವ ವಾತಾವರಣ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ. ಠಾಣೆಗಳಲ್ಲಿ ಪೊಲೀಸರು ದೂರು ಸ್ವೀಕರಿಸದಿದ್ದರೆ ನೇರವಾಗಿ ಮೊಬೈಲ್ ಫೋನ್‌ಗೆ ಕರೆ ಮಾಡಬಹುದು ಅಥವಾ ಸಂದೇಶ ಕಳುಹಿಸಬಹುದು. ಎಲ್ಲ ಠಾಣೆಗಳಲ್ಲೂ ಹಿರಿಯ ಅಧಿಕಾರಿಗಳ ಸಂಪರ್ಕ ಸಂಖ್ಯೆ ಇರುತ್ತದೆ’ ಎಂದು ಎಸ್ಪಿ ತಿಳಿಸಿದರು.

ಉಳ್ಳಾಲ ಚೊಂಬುಗುಡ್ಡೆಯ ರುದ್ರಭೂಮಿಯಲ್ಲಿ ಕಟ್ಟಿಗೆ ಬಳಸಿ ಮೃತದೇಹದ ದಹನ ಕ್ರಿಯೆ ನಡೆಸುವುದರಿಂದ ಸುತ್ತಮುತ್ತಲಿನ ಮನೆಗಳಿಗೆ ತೊಂದರೆಯಾಗುತ್ತದೆ. ಎಲೆಕ್ಟ್ರಿಕ್ ದಹನದ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ನೀಡಲಾಗಿದೆ. ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಕಲಾವತಿ ಎಂಬುವರು ಒತ್ತಾಯಿಸಿದರು.

ಸಭೆಯಲ್ಲಿ ಸರೋಜಿನಿ ಬಂಟ್ವಾಳ, ವಿಶ್ವನಾಥ್, ಅಣ್ಣಪ್ಪ ಸೇರಿದಂತೆ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT