ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ, ಗಸ್ತಿಗೆ ಸೂಚನೆ
Last Updated 12 ಮಾರ್ಚ್ 2021, 13:39 IST
ಅಕ್ಷರ ಗಾತ್ರ

ಮಂಗಳೂರು: ಮಹಾರಾಷ್ಟ್ರ ಹಾಗೂ ಕೇರಳದಲ್ಲಿ 2 ನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಕೋವಿಡ್–19 ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಗಡಿ ಪ್ರದೇಶದಲ್ಲಿ ವಿಶೇಷ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಡಿಯಲ್ಲಿ ಹಾದು ಹೋಗುವವರ ಮೇಲೆ ನಿಗಾ ಇರಿಸಲು ಇದೇ 13 ರಿಂದ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಪೊರ್ಸ್ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯೇ ಗಡಿ ಪ್ರದೇಶದ ಪ್ರಯಾಣಿಕರ ಮೇಲೆ ನಿಗಾ ಇರಿಸಲಿದೆ. ಅಧಿಕಾರಿ ಮಟ್ಟದ ಸಭೆಯಲ್ಲಿ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ, ಅದಕ್ಕೆ ಕೊರೊನಾ ಸೋಂಕಿತರ ತಪಾಸಣೆ ಹಾಗೂ ಗಸ್ತು ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೇರಳದಲ್ಲಿ ವಿಧಾನಸಭೆಯ ಚುನಾವಣೆ ಸಮೀಪಿಸಿರುವುದರಿಂದ ಸಾಕಷ್ಟು ಗಡಿ ಭದ್ರತೆ ಅನಿವಾರ್ಯ. ಇದೇ ಸಂದರ್ಭದಲ್ಲಿ ಕೇರಳದಿಂದ ಇಲ್ಲಿಗೆ ಬರುವವರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣಪತ್ರ ತರಬೇಕು. ಗಡಿಯೊಳಗೆ ಬಂದು ಇಲ್ಲಿರುವ ಕೇಂದ್ರಗಳಲ್ಲೂ ಕೋವಿಡ್–19 ಪರೀಕ್ಷೆ ಮಾಡಿಸಬಹುದು. ಈಗ ಗಡಿ ಹಾದು ಹೋಗಲು ಕಟ್ಟುನಿಟ್ಟು ಕ್ರಮ ಇಲ್ಲವಾದರೂ, ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಕೇರಳದಿಂದ ಬರುವವ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ. ಆದರೂ ಉಭಯ ಜಿಲ್ಲೆಗಳ ನಿತ್ಯ ಸಂಚರಿಸುವವರ ಹಿತದೃಷಿಯಿಂದ ಇನ್ನೂ ನಾಲ್ಕು ಗಡಿ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಈಗ ಪ್ರತಿದಿನ 2 ಸಾವಿರ ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದ್ದು, 4 ಸಾವಿರಕ್ಕೆ ಏರಿಕೆ ಮಾಡಲಾಗುವುದು. ವೆನ್ಲಾಕ್ ಆಸ್ಪತ್ರೆಯಲ್ಲಿ ಇದಕ್ಕೆ ಬೇಕಾದ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಗಂಟಲು ದ್ರವ ತಪಾಸಣಾ ಕೇಂದ್ರವಿದ್ದು, ದಿನದ 24 ಗಂಟೆಯಲ್ಲಿ ಫಲಿತಾಂಶ ನೀಡಲಾಗುತ್ತಿದೆ. ಕೇರಳ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಿದೆ. ಕೋವ್ಯಾಕ್ಸಿನ್ ಲಸಿಕೆ ಶೀಘ್ರವೇ ಮಂಗಳೂರಿಗೂ ಬರಬಹುದು. ಮೊದಲು ಪಡೆದ ಲಸಿಕೆಯನ್ನೇ 2ನೇ ಹಂತದಲ್ಲೂ ಪಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 100 ಮಂದಿಗೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 150, ತಾಲ್ಲೂಕು ಆಸ್ಪತ್ರೆಗಳಲ್ಲಿ 200 ಮಂದಿ, ಜಿಲ್ಲಾಸ್ಪತ್ರೆಯಲ್ಲಿ 300 ಮಂದಿಗೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಲಾ 500 ಮಂದಿಗೆ ಲಸಿಕೆ ನೀಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಇದ್ದರು.

‘ಅಗತ್ಯ ಲಸಿಕೆ ಲಭ್ಯ’

‌ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರ, 10 ನಗರ ಆರೋಗ್ಯ ಕೇಂದ್ರ, 4 ತಾಲ್ಲೂಕು ಆಸ್ಪತ್ರೆ, 8 ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ, ಜಿಲ್ಲಾಸ್ಪತ್ರೆ ವೆನ್ಲಾಕ್ ಹಾಗೂ 6 ಸಮುದಾಯ ಕೇಂದ್ರಗಳಲ್ಲಿ ಕೋವಿಡ್–19 ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಆನ್‌ಲೈನ್ ನೋಂದಣಿ ಮಾಡಿಕೊಂಡು ನಿಗದಿತ ದಿನಾಂಕದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ಇದೆ. ಆದರೆ, ಲಸಿಕೆ ಹಾಕಿಸಿಕೊಳ್ಳಲು ಬಯಸುವ ಹಿರಿಯ ನಾಗರಿಕರು ನೇರವಾಗಿ ಸಂಬಂಧಪಟ್ಟ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಹಿರಿಯ ನಾಗರಿಕರ ಕೇಂದ್ರ, ವೃದ್ಧಾಶ್ರಮಗಳಿಂದ ಹೆಚ್ಚು ನಡೆದಾಡಲು ಅಶಕ್ತರಾಗಿರುವವರಿಗೆ ಸಮೀಪದ ಲಸಿಕಾ ಕೇಂದ್ರಗಳಿಗೆ ಶಾಲಾ ಬಸ್ ವ್ಯವಸ್ಥೆ ಮೂಲಕ ಕರೆದೊಯ್ದು ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ವಾರದ ಏಳು ದಿನ ನೀಡಲು ಬೇಕಾದಷ್ಟು ಲಸಿಕೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT