ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗೆ ಬೀಗ ಹಾಕಲು ಒತ್ತಾಯ

ಎಸ್‌ಕೆಎಫ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ಬದಲಿ ಉದ್ಯೋಗಕ್ಕೆ ಕಾರ್ಮಿಕರ ಪಟ್ಟು
Last Updated 25 ಡಿಸೆಂಬರ್ 2021, 3:56 IST
ಅಕ್ಷರ ಗಾತ್ರ

ಮೂಡುಬಿದಿರೆ: ಬನ್ನಡ್ಕದಲ್ಲಿರುವ ಬೆಂಗಳೂರು ಮೂಲದ ಎಸ್‌ಕೆಎಫ್ ಬಾಯ್ಲರ್ಸ್ ಅಂಡ್ ಡ್ರಯರ್ಸ್ ಕೈಗಾರಿಕೆ ಮುಚ್ಚಬೇಕು ಎಂದು ಆಗ್ರಹಿಸಿ ಶುಕ್ರವಾರ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸೂರಜ್ ಜೈನ್ `ಕಂಪನಿ ಶೌಚ ನೀರು ಪಕ್ಕದ ಮನೆಗಳ ಜಾಗಕ್ಕೆ ಹರಿದು ಪರಿಸರ ಮಾಲಿನ್ಯ ಉಂಟಾಗಿದೆ. ಪೈಂಟಿಂಗ್‌ನಿಂದ ಹಾಗೂ ಇನ್ನೊಂದೆಡೆ ಶಬ್ದ ಮಾಲಿನ್ಯದಿಂದಲೂ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಪರವಾನಗಿ ನವೀಕರಿಸದೆ ಅನಧಿಕೃತವಾಗಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಹಲವು ಬಾರಿ ದೂರು ನೀಡಿದರೂ ಕಂಪನಿ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಂಪನಿಗೆ ಬೀಗ ಹಾಕುವವರಿಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ' ಎಂದ ಎಚ್ಚರಿಸಿದರು.

ಪ್ರತಿಭಟನಕಾರರ ಒತ್ತಡಕ್ಕೆ ಮಣಿದು ಪಂಚಾಯಿತಿ ಅಧ್ಯಕ್ಷೆ ಸಿ.ಎಸ್ ಕಲ್ಯಾಣಿ ಮತ್ತು ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ಮಧ್ಯಾಹ್ನ ಎಸ್‌ಕೆಎಫ್‌ಗೆ ಬೀಗ ಹಾಕಲು ಹೋದಾಗ ಅಲ್ಲಿದ್ದ 300 ಕಾರ್ಮಿಕರು ಗೇಟ್‌ ಎದುರು ನಿಂತು ಪ್ರತಿಭಟನೆ ನಡೆಸಿದರು. ಕಂಪನಿ ಬಂದ್ ಮಾಡುವ ಮೊದಲು ನಮಗೆ ಬದಲಿ ಉದ್ಯೋಗ ಕೊಡಿ, ಇಲ್ಲದಿದ್ದರೆ ನಾವು ಬೀದಿಗೆ ಬೀಳುತ್ತೇವೆ' ಎಂದು ಅಳಲು ತೋಡಿಕೊಂಡರು.

ಎಸ್‌ಕೆಎಫ್ನ ಆಡಳಿತ ನಿರ್ದೆಶಕ ಪ್ರಮೋದ್ ಕುಮಾರ್ ಮಾತನಾಡಿ, ಸ್ಥಳೀಯರಿಗೆ ತೊಂದರೆ ಆಗುವುದನ್ನು ಮನಗಂಡು ಶೌಚಾಲಯವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದೇವೆ, ಹೊಸದಾಗಿ ಪೈಂಟಿಂಗ್ ಬೂತ್ ನಿರ್ಮಾಣವಾಗುತ್ತಿದೆ. ಜನವಸತಿ ಪ್ರದೇಶಕ್ಕೆ ಹತ್ತಿರವಿದ್ದ ವರ್ಕ್‌ಶಾಪ್‌ ಅನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನವನ್ನು, ಪಂಚಾಯಿತಿ ಆದೇಶವನ್ನು ಪಾಲಿಸಿಕೊಂಡು ಬಂದಿದ್ದೇವೆ. ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದರೂ, ನವೀಕರಿಸಿಲ್ಲ. ಆದಾಗ್ಯೂ ಪಂಚಾಯಿತಿ ಆಡಳಿತ ಕೆಲ ಮಂದಿ ಒತ್ತಡಕ್ಕೆ ಮಣಿದು ಆಗಾಗ್ಗೆ ನೋಟಿಸ್‌ ಕೊಟ್ಟು ತೊಂದರೆ ಕೊಡುತ್ತಿದೆ. ಕಂಪನಿಗೆ ಬೀಗ ಹಾಕಲು ಬಂದಿರುವುದು ಕಾನೂನು ಬಾಹಿರ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಕಂಪನಿ ಮಾನವ ಸಂಪನ್ಮೂಲ ವಿಭಾಗದ ವಿವೇಕ್ ವಲ್ಲಭ ಮತ್ತು ಸಿಇಒ ಸುಮುಖ್ ಮುಖರ್ಜಿ ಇದ್ದರು.

ತಾಲ್ಲೂಕು ಪಂಚಾಯಿತಿ ಸಿಇಒ ದಯಾವತಿ ಸ್ಥಳಕ್ಕೆ ಭೇಟಿ ನೀಡಿ ಪ್ರಮುಖರ ಜತೆ ಮಾತುಕತೆ ನಡೆಸಿ ಸೋಮವಾರದವರೆಗೆ ಕಾಯುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ನೀಡದ ಪ್ರತಿಭಟನಕಾರರು ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT