ದಕ್ಷಿಣಕನ್ನಡ: ಪ್ರಧಾನಿ ಕಚೇರಿ ಪತ್ರಕ್ಕೆ ಸಿಕ್ಕಿಲ್ಲ ಫಲ

7
ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋದ ರಸ್ತೆ

ದಕ್ಷಿಣಕನ್ನಡ: ಪ್ರಧಾನಿ ಕಚೇರಿ ಪತ್ರಕ್ಕೆ ಸಿಕ್ಕಿಲ್ಲ ಫಲ

Published:
Updated:
Deccan Herald

 ವಿಟ್ಲ: ಪುಣಚ ಗ್ರಾಮ ವ್ಯಾಪ್ತಿಗೊಳಪಟ್ಟ ಮಲೆತ್ತಡ್ಕ-ಬರೆಂಗಾಯಿ-ಗೌರಿಮೂಲೆ-ಗುಂಡ್ಯಡ್ಕ-ಪದವು ಈ ಎಲ್ಲಾ ಊರುಗಳನ್ನು ಸಂಪರ್ಕಿಸುವ  2.5 ಕಿ.ಮೀ. ಉದ್ದದ ಕಚ್ಛಾರಸ್ತೆ  ಕೆಸರು ಗದ್ದೆಯಂತಾಗಿ ನಡೆದಾಡಲೂ ಅಸಾಧ್ಯವಾಗಿದೆ. ಪ್ರಧಾನಮಂತ್ರಿ ಕಾರ್ಯಾಲಯ, ರಾಜ್ಯ ಸರ್ಕಾರದಿಂದ ಕ್ರಮಕ್ಕೆ ಸೂಚನೆ ಇದ್ದರೂ ಕಾಮಗಾರಿ ನಡೆದಿಲ್ಲ.

ಮಳೆರಾಯನ ಅಬ್ಬರಕ್ಕೆ ಬಹುತೇಕ ಪ್ರದೇಶಗಳ ರಸ್ತೆಗಳು ಹದಗೆಟ್ಟು ಹೋಗಿವೆ.

ಈ ಭಾಗದ ಜನರು ಪ್ರಮುಖ ರಸ್ತೆಯನ್ನು ಸೇರಲು ಪ್ರತಿದಿನ ಹರಸಾಹಸ ಪಡುತ್ತಿದ್ದಾರೆ. ‌ಆಬಾಲವೃದ್ಧರಾಗಿ ನೂರಾರು ಜನರು ನಿತ್ಯ ಸಂಚರಿಸುವವರು ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಚಿಕ್ಕಪುಟ್ಟ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಮಳೆಗಾಲದ ಸಮಯದಲ್ಲಿ ಈ ರಸ್ಯೆಯಲ್ಲಿ ಸಾಗಲು ಭಯಭೀತರಾಗುತ್ತಾರೆ. ಗ್ರಾಮದ ಮುಖ್ಯ ಕೇಂದ್ರಕ್ಕೆ ಬರಲು ಎಲ್ಲೆಲ್ಲೋ ಕಾಲುದಾರಿಯನ್ನು ಬಳಸಿ ಹೋಗಬೇಕಾದ ಶೋಚನೀಯ ಸ್ಥಿತಿ ಜನರದ್ದಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ, ಭರವಸೆ ನೀಡಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು  ಇತ್ತ ಬಂದಿಲ್ಲ.  ರಸ್ತೆ ಬಳಕೆದಾರರು ಸಂಘಟಿತರಾಗಿ ದುರಸ್ತಿ ಬಗ್ಗೆ ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಿ ಕೊಡಲು ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಸ್ಪಂದನೆ ದೊರೆಯದ ಕಾರಣ ಬರುವ ಲೋಕಸಭೆ ಮತದಾನವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಮಳೆಗಾಲದಲ್ಲಿ ನರಕಸದೃಶ: ಪುಣಚ ಗ್ರಾಮ ಸಡಕ್ ರಸ್ತೆಯಿಂದ ಗ್ರಾಮ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಲೆತ್ತಡ್ಕ-ಗೌರಿಮೂಲೆ- ಪದವು ರಸ್ತೆ ಮೇ ತಿಂಗಳಿನಿಂದ ಆರಂಭವಾಗಿ ಸೆಪ್ಟೆಂಬರ್‌ ವರೆಗೆ ನಿತ್ಯ ಸಂಚಾರಿಗಳಿಗೆ ನಡೆದಾಡಲೂ ಸಾಧ್ಯವಾಗದೇ ನರಕಸದೃಶವಾಗಿದೆ. ದ್ವಿಚಕ್ರ, ಆಟೊರಿಕ್ಷಾ, ಕಾರುಗಳಂತಹ ವಾಹನಗಳೂ  ಮಳೆಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಉದ್ಭವಿಸುತ್ತದೆ. ಜೀಪು, ಪಿಕಪ್, ಲಾರಿಗಳಂತಹ ವಾಹನಗಳು ಬಹಳ ಕಷ್ಟಪಟ್ಟು ಒಂದು ಬಾರಿ ಬಂದು ಹೋದರಂತೂ ಮತ್ತೆ ಯಾವುದೇ ವಾಹನಗಳಿಗೆ ಬರದಂತಹ ಕೆಸರು ರಾಡಿಯ ಗುಂಡಿಹೊಂಡಗಳು ನಿರ್ಮಾಣವಾಗುತ್ತವೆ. ಕುಂಭದ್ರೋಣ ಮಳೆಯ ಪರಿಣಾಮದಿಂದ ಈ ಮಣ್ಣಿನ ರಸ್ತೆ ಕೆಸರು ತುಂಬಿದ ಗದ್ದೆಯಂತಾಗಿದೆ.

ಪ್ರಧಾನಿಗೆ ಪತ್ರ: ನೂರಾರು ಮನೆಗಳ ಸಂಪರ್ಕದ ಈ ಕಚ್ಚಾ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕೆಂಬ ಸಾಮಾಜಿಕ ಕಳಕಳಿಯಿಂದ ಗೌರಿಮೂಲೆಯ ಕೃಷಿಕ ಸುರೇಶ್ ನಾಯಕ್ ನಾನಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆ. ಪ್ರಾರಂಭದ ಹಂತದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕುಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳ ಮೂಲಕ ಮನವಿ ಮಾಡಿಕೊಂಡರು. ಆದರೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸುಮಾರು ₹1 ಕೋಟಿಗಿಂತಲೂ ಅಧಿಕ ವೆಚ್ಚ ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಇಷ್ಟು ಹಣವನ್ನು ಭರಿಸಲು ಸಾಧ್ಯವಾಗದೇ ಕೈಚೆಲ್ಲಿದಾಗ ಸುರೇಶ್ ನಾಯಕರು ಸುಮ್ಮನೇ ಕೂರದೇ ನೇರವಾಗಿ ಪ್ರಧಾನಿ ಕಚೇರಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಪತ್ರ ಬರೆದು ಕಚ್ಛಾರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !