ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬು ನಾರುತ್ತಿರುವ ಕಸ: ಆತಂಕದಲ್ಲಿ ಜನರು

ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನಕ್ಕೆ ಅಂತ್ಯ
Last Updated 4 ಜುಲೈ 2022, 16:16 IST
ಅಕ್ಷರ ಗಾತ್ರ

ಮಂಗಳೂರು: ಕೆಲಸ ಕಾಯಂ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಧರಣಿ ಸೋಮವಾರ ಸಂಜೆ ಕೊನೆಗೊಂಡಿದೆ. ಆದರೆ, ನಾಲ್ಕು ದಿನಗಳಿಂದ ನಗರದಲ್ಲಿ ಕಸ ಸಂಗ್ರಹ ನಡೆಯದ ಕಾರಣ ಇಡೀ ಪರಿಸರ ಗಬ್ಬು ನಾರುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಪ್ರತಿನಿತ್ಯ 500 ಟನ್‌ಗೂ ಅಧಿಕ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಮಂಗಳೂರು ನಗರದಲ್ಲಿ ಮನೆಗಳು, ಅಂಗಡಿ, ಮಾರುಕಟ್ಟೆ, ಹೋಟೆಲ್‌, ವಾಣಿಜ್ಯ ಮಳಿಗೆಗಳು ಸೇರಿ ಸುಮಾರು 340 ಟನ್‌ನಷ್ಟು ಕಸ ಸಂಗ್ರಹವಾಗುತ್ತದೆ. ನಾಲ್ಕು ದಿನಗಳಿಂದ ಈ ಕಸ ಸಂಗ್ರಹಕ್ಕೆ ಪೌರ ಕಾರ್ಮಿಕರು ಹೋಗಿರಲಿಲ್ಲ. ಹೀಗಾಗಿ, ಫ್ಲ್ಯಾಟ್‌ಗಳಲ್ಲಿ, ರಸ್ತೆ ಬದಿಯಲ್ಲಿ ಕಸದ ರಾಶಿಗಳು ಬಿದ್ದಿವೆ.

ಸೋಮವಾರ ಶಾಸಕ ಯು.ಟಿ.ಖಾದರ್, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಶ್ಯಾಲೆಟ್ ಪಿಂಟೊ, ಅಬ್ದುಲ್ ರವೂಫ್, ಅಪ್ಪಿ, ಶಾಂತಲಾ ಗಟ್ಟಿ ಮೊದಲಾದವರು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ, ಪೌರ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.

‘ಪೌರ ಕಾರ್ಮಿಕರ 2008ರಿಂದ 2013ರವರೆಗೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಗುತ್ತಿಗೆ ಪೌರ ಕಾರ್ಮಿಕರ ಗೌರವಧನ ₹ 7,000 ಮಾತ್ರ ಇತ್ತು. 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಈ ಮೊತ್ತವನ್ನು ₹ 14ಸಾವಿರಕ್ಕೆ ಏರಿಕೆ ಮಾಡಿತ್ತು, ಆದರೆ ಇಂದಿಗೂ ಇದೇ ಮೊತ್ತ ಮುಂದುವರಿದಿದೆ. ಪೌರ ಕಾರ್ಮಿಕರನ್ನು ಸರ್ಕಾರ ಯಾಕೆ ಕಾಯಂಗೊಳಿಸುತ್ತಿಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರಶ್ನಿಸಿದರು.

‘ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರಿಗೆ ಸರ್ಕಾರ ಅಗತ್ಯ ಸಲಕರಣೆಗಳನ್ನು ನೀಡಿಲ್ಲ. ಸುರಕ್ಷತಾ ಕವಚ, ನಿವೃತ್ತಿ ಸೇವಾ ಸೌಲಭ್ಯ, ವೈದ್ಯಕೀಯ ಉಪಚಾರ, ಹೆರಿಗೆ ಭತ್ಯೆ, ರಜಾ ದಿನಗಳನ್ನು ನೀಡಬೇಕು. ನೇರ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್‌ ಕಾಮತ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT