ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಯಲು ಕಸ ಮುಕ್ತ ಗ್ರಾಮಕ್ಕೆ ಯೋಜನೆ

ಜಿಲ್ಲೆಯಲ್ಲಿ ಸ್ವಚ್ಛತಾ ಸಪ್ತಾಹ ನಾಳೆಯಿಂದ; ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ
Last Updated 30 ಮಾರ್ಚ್ 2022, 15:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಬಯಲು ಕಸ ಮುಕ್ತ ಗ್ರಾಮ’ವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಏ.1ರಿಂದ 7ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛತಾ ಸಪ್ತಾಹದ ರೀತಿಯಲ್ಲಿ ಅಭಿಯಾನ ನಡೆಸಲು ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದೆ.

ಈ ಸಂಬಂಧ ಕಾರ್ಯಕ್ರಮ ಆಯೋಜಿಸಲು ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾಗಿರುವ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ಮತ್ತು ಸಲಹಾ ಸಮಿತಿಗಳ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ರಸ್ತೆಗಳ ಅಂಚಿನಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟುವ ಮತ್ತು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಈ ಸಮಿತಿ ಅಧಿಕಾರ ಹೊಂದಿದೆ.

ಕಾರ್ಯಪಡೆ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಬಿಸಾಡುವ ರಸ್ತೆಗಳ ಇಕ್ಕೆಲ, ನೀರಿನತೋಡು, ಚರಂಡಿ ಮತ್ತು ಸಾರ್ವಜನಿಕ ಪ್ರದೇಶಗಳನ್ನು ಗುರುತಿಸಿ, ಅಲ್ಲಿರುವ ತ್ಯಾಜ್ಯಗಳನ್ನು ಸಂಪೂರ್ಣ ವಿಲೇವಾರಿ ಮಾಡಬೇಕು. ಗುಣಮಟ್ಟದ ಒಣ ತ್ಯಾಜ್ಯಗಳು ಇದ್ದಲ್ಲಿ ಅದನ್ನು ಸ್ವಚ್ಛ ಸಂಕೀರ್ಣದಲ್ಲಿ ಸಂಗ್ರಹಿಸಬಹುದು. ಸ್ಥಳೀಯ ಸಂಘ ಸಂಸ್ಥೆ, ಸ್ವ ಸಹಾಯ ಸಂಘ, ಸಂಜೀವಿನಿ ಒಕ್ಕೂಟ, ಶಾಲಾಭಿವೃದ್ಧಿ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಈ ಕಾರ್ಯ ನಡೆಸಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ತಾಲ್ಲೂಕು ಪಂಚಾಯಿತಿ ಪ್ರಮುಖರಿಗೆ ತಿಳಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಮಾಡಿರುವ ಸ್ಥಳವನ್ನು ಸುಂದರವಾಗಿಸಲು, ಪೇಂಟಿಂಗ್, ಗೋಡೆ ಬರಹ, ಸೂಚನಾ ಫಲಕ ಅಳವಡಿಕೆ, ಗಿಡಗಳನ್ನು ನೆಡುವ ಅಥವಾ ಉದ್ಯಾನ ನಿರ್ಮಿಸುವಂತಹ ರಚನಾತ್ಮಕ ಕಾರ್ಯಗಳನ್ನು ಸಹ ಮಾಡಬಹುದು. ಮತ್ತೆ ಅಕ್ರಮವಾಗಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ, ಅಂತಹ ವಾಹನದ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬಹುದು. ವರ್ತಕರಾಗಿದ್ದಲ್ಲಿ ಅವರ ಪರವಾನಗಿ ರದ್ದತಿಗೆ ಕ್ರಮವಹಿಸಬಹುದು. ಕಸ ಚೆಲ್ಲುವ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದರೆ, ಅಂತಹ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT