ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಮಹಾನಗರ ಪಾಲಿಕೆಗೆ ‘ತ್ಯಾಜ್ಯ’ ಭಾರ

ಕಸ ವಿಂಗಡಣೆಯಲ್ಲಿ ಸಿಗದ ನಿರೀಕ್ಷಿತ ಸಹಕಾರ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಸವಾಲು
Last Updated 29 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತ್ಯಾಜ್ಯ ಉತ್ಪತ್ತಿ, ಅವುಗಳ ವೈಜ್ಞಾನಿಕ ವಿಂಗಡಣೆ ಮಹಾನಗರ ಪಾಲಿಕೆಗೆ ಸವಾಲಾಗಿದೆ. ತ್ಯಾಜ್ಯ ವಿಂಗಡಣೆಯಲ್ಲಿ ಶೇ 70ರಷ್ಟು ಸಾಧನೆ ಮಾಡಿರುವುದಾಗಿ ಪಾಲಿಕೆ ಹೇಳಿಕೊಂಡರೂ, ರಸ್ತೆ ಬದಿಯಲ್ಲಿ ಎಸೆಯುವ ಕಸ, ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣಗಳಲ್ಲಿ ಉತ್ಪತ್ತಿಯಾಗುವ ಮಿಶ್ರ ಕಸಗಳ ವಿಲೇವಾರಿ ತಲೆನೋವಾಗಿ ಪರಿಣಮಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಂದ ಪ್ರತಿದಿನ ಸರಾಸರಿ 330 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಮೀಪದ ಉಳ್ಳಾಲ ನಗರಸಭೆಯ 31 ವಾರ್ಡ್‌ಗಳು, ಕೋಟೆಕಾರ್ ಪಟ್ಟಣ ಪಂಚಾಯಿತಿಯಲ್ಲಿ ಉತ್ಪತ್ತಿಯಾಗುವ 50 ಟನ್‌ ಸೇರಿ ಪ್ರತಿದಿನ ಒಟ್ಟು 380 ಟನ್ ತ್ಯಾಜ್ಯ ಪಚ್ಚನಾಡಿಯ ತ್ಯಾಜ್ಯ ಘಟಕದ ಒಡಲು ಸೇರುತ್ತಿದೆ.

2019ರಲ್ಲಿ ಸುರಿದ ಭಾರಿ ಮಳೆಗೆ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಡ್ಡೆ ಹಾಕಿದ್ದ ಕಸದ ಗುಡ್ಡ ಕುಸಿದು, ಎರಡು ಕಿ.ಮೀ ದೂರದವರೆಗೆ ಕೊಚ್ಚಿಕೊಂಡು ಹೋಗಿತ್ತು. ಕೃಷಿಭೂಮಿ, ಮನೆಗಳಿಗೆ ಹಾನಿಯಾಗಿತ್ತು. ಈ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ, ಕಸದ ವೈಜ್ಞಾನಿಕ ವಿಲೇವಾರಿ ಮಾಡುವ ನಿಟ್ಟಿನಲ್ಲಿ, ಪ್ರತಿ ಮನೆಯಿಂದ ಕಸ ನೀಡುವಾಗ ಹಸಿ ಕಸ, ಒಣ ಕಸವನ್ನು ಕಡ್ಡಾಯವಾಗಿ ವಿಂಗಡಣೆ ಮಾಡಲು ನಿರ್ದೇಶನ ನೀಡಿದೆ. ನಿತ್ಯವೂ ಉತ್ಪತ್ತಿಯಾಗುವ ಕಸದಲ್ಲಿ ಶೇ 50ರಷ್ಟು ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಹಸಿ ಕಸದಿಂದ ಗೊಬ್ಬರ, ಇಂಧನ ಉತ್ಪಾದನೆ ಮಾಡುವುದು ಪಾಲಿಕೆಯ ಉದ್ದೇಶ. ಆದರೆ, ಇದರಲ್ಲಿ ನಿಗದಿತ ಗುರಿ ತಲುಪಲು ಪಾಲಿಕೆ ಹೆಣಗಾಡುತ್ತಿದೆ.

‘ಹಸಿ ಕಸ– ಒಣ ಕಸ ವಿಂಗಡಣೆಯಲ್ಲಿ ಸಾರ್ವಜನಿಕರ ಸಹಕಾರ ಹಿಂದಿನಿಂದ ಹೆಚ್ಚು ಸಿಗುತ್ತಿದೆ. ಕಳೆದ ವಾರ 80 ಟನ್ ಮಿಶ್ರ ತ್ಯಾಜ್ಯ ಸಂಸ್ಕರಣೆ ಮಾಡಲಾಗಿದೆ. ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಶೇ 70ರಷ್ಟು ಸಾಧನೆ ಸಾಧ್ಯವಾಗಿದೆ. ಕೆಲವು ಕಡೆಗಳಲ್ಲಿ ಈಗಲೂ ಮನೆಯ ಹಂತದಲ್ಲಿ ವಿಂಗಡಣೆ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಸರಿಪಡಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತ್ಯಾಜ್ಯ ಸಂಸ್ಕರಣೆಗೆ ಪಾಲಿಕೆ ರೂಪಿಸಿರುವ ₹12.56 ಕೋಟಿ ವೆಚ್ಚದ ‘ಮೆಗಾ ಪ್ಲಾನ್‌‌’ ಅನುಷ್ಠಾನಗೊಳ್ಳಲಿದೆ. ಎರಡು ಹೊಸ ಯಂತ್ರಗಳ ಮೂಲಕ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು 425 ಟನ್‌ಗೆ ಹೆಚ್ಚಿಸುವುದು ಪಾಲಿಕೆಯ ಉದ್ದೇಶ. ಉರ್ವಸ್ಟೋರ್‌ನಲ್ಲಿರುವ ಎರಡು ಟನ್ ಸಾಮರ್ಥ್ಯದ ಬಯೊಗ್ಯಾಸ್ ಘಟಕದಲ್ಲಿ ಪ್ರತಿನಿತ್ಯ 200 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.

9 ಸಾವಿರ ಟನ್ ತ್ಯಾಜ್ಯ: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಸುಮಾರು 9 ಸಾವಿರ ಟನ್ ತ್ಯಾಜ್ಯದ ವಿಲೇವಾರಿಯ ₹ 73.73 ಕೋಟಿ ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನಾ ವರದಿಯನ್ನು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿತ್ತು.

‘ಜೈವಿಕ ಗಣಿಗಾರಿಕೆ ಮಾದರಿಯಲ್ಲಿ ತ್ಯಾಜ್ಯವನ್ನು ಸಂಸ್ಕರಿಸಲಾಗುವುದು. ಇದರಲ್ಲಿ ದೊರೆತ ಜೈವಿಕ ತ್ಯಾಜ್ಯದಿಂದ ಗೊಬ್ಬರ ಹಾಗೂ ಇತರ ತ್ಯಾಜ್ಯವನ್ನು ಮರುಬಳಕೆಗೆ ವಿನಿಯೋಗಿಸುವ ಬಗ್ಗೆ ಯೋಚಿಸಲಾಗಿದೆ’ ಎಂದು ಅಕ್ಷಯ್‌ ಶ್ರೀಧರ್ ತಿಳಿಸಿದರು.

ಮತ್ತೆ ಹಿಂದಕ್ಕೆ ಹೋಗುತ್ತಿರುವ ವ್ಯವಸ್ಥೆ: ‘2013ರಲ್ಲಿ ಇದ್ದ ವ್ಯವಸ್ಥೆಗೆ ನಾವು ಮತ್ತೆ ಮರಳುವ ಆತಂಕ ಎದುರಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಆ್ಯಂಟನಿ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪನಿಯ ಗುತ್ತಿಗೆ 2022ರ ಜನವರಿಗೆ ಮುಕ್ತಾಯವಾಗುತ್ತದೆ. ಆಟೊ ಟಿಪ್ಪರ್, ಮಾನವ ಶಕ್ತಿ, ಗೊಬ್ಬರ ಉತ್ಪಾದಕ ಯಂತ್ರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಆಟೊ ಟಿಪ್ಪರ್ ಸಂಖ್ಯೆ ಕೂಡ ಕಡಿಮೆ ಇದೆ. ಕಂಪನಿ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಮುಂದಿನ ವ್ಯವಸ್ಥೆ ಬಗ್ಗೆ ಪಾಲಿಕೆ ಇನ್ನೂ ಯೋಜನೆ ರೂಪಿಸಿಲ್ಲ’ ಎಂದು ಪಾಲಿಕೆ ಸದಸ್ಯ ಎ.ಸಿ.ವಿನಯ್‌ರಾಜ್ ಆರೋಪಿಸಿದರು.

ಮನೆ–ಮನೆ ಕಸ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ. ಒಣ ಕಸ, ಹಸಿ ಕಸ, ಇ– ವೇಸ್ಟ್ ಜತೆಗೆ ಮಿಶ್ರ ತ್ಯಾಜ್ಯ ಎಂಬ ಇನ್ನೊಂದು ರೀತಿಯ ತ್ಯಾಜ್ಯ ಸಂಗ್ರಹ ಇಲ್ಲಿ ನಡೆಯುತ್ತಿದೆ. ಈ ಮಿಶ್ರ ತ್ಯಾಜ್ಯವು, ಒಣ, ಹಸಿ ಕಸ ಯಾವ ಗುಂಪಿಗೂ ಸೇರದೆ, ಇದರ ವಿಲೇವಾರಿ ಸಮಸ್ಯೆ ಸೃಷ್ಟಿಸಿದೆ. ಆರೋಗ್ಯ ನಿರೀಕ್ಷಕರಿಂದ ವ್ಯವಸ್ಥಿತ ನಿಗಾ, ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

‘ಸಿಸಿಟಿವಿ ಕ್ಯಾಮೆರಾ ಕಣ್ಗಾವಲು’

ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳ ವಿಂಗಡಣೆ ನಮಗೆ ಸವಾಲಾಗಿದೆ. ಈ ರೀತಿ ಅಕ್ರಮವಾಗಿ ತ್ಯಾಜ್ಯ ಎಸೆಯುವವರ ಮೇಲೆ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ನಿಗಾ ವಹಿಸಲಾಗಿದೆ. ಜನರು ಬೇಕಾಬಿಟ್ಟಿಯಾಗಿ ಕಸ ಎಸೆದು ಹೋಗುವ ಸ್ಥಳಗಳನ್ನು ಗುರುತಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ದಂಡ ವಿಧಿಸಲು ಯೋಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಿಯಾಶೀಲ ಯೋಜನೆ ಯಶಸ್ವಿ

ರಾಮಕೃಷ್ಣ ಮಠದ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯು ಏಕಗಮ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಗರದ 17 ಅಪಾರ್ಟ್‌ಮೆಂಟ್‌ಗಳ 600 ಫ್ಲಾಟ್‌ಗಳಲ್ಲಿ ಒಂದೂವರೆ ವರ್ಷಗಳಿಂದ ‘ಮೂರು ಮಡಿಕೆ ಸಾಧನ’ದ ಮೂಲಕ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ.

‘ಇದು ನಾವೇ ಸೃಷ್ಟಿಸಿದ ಮಾದರಿಯಾಗಿದೆ. ಕಪ್ಪು ಸೈನಿಕ ಹುಳಗಳ ಮೂಲಕ ತ್ಯಾಜ್ಯ ನಿರ್ವಹಣೆ ಮಾಡಿ, ಗೊಬ್ಬರ ಉತ್ಪತ್ತಿ ಮಾಡಲಾಗುತ್ತಿದೆ. ಪ್ರತಿದಿನ ಒಂದು ಮನೆಯಿಂದ ಸರಾಸರಿ ಅರ್ಧ ಕೆ.ಜಿ ಹಸಿ ಕಸ ಉತ್ಪತ್ತಿಯಾದರೆ, ತಿಂಗಳಿಗೆ 15 ಕೆ.ಜಿ ಕಸ ಸಂಗ್ರಹವಾಗುತ್ತದೆ. ಹಸಿ ತ್ಯಾಜ್ಯದ ಶೇ 20ರಷ್ಟು ಗೊಬ್ಬರ ಉತ್ಪಾದನೆಯಾಗುತ್ತದೆ’ ಎಂದು ಸ್ವಾಮೀಜಿ ತಿಳಿಸಿದರು.

‘ಈ ತಿಂಗಳಲ್ಲಿ ಮತ್ತೆ 10 ಅಪಾರ್ಟ್‌ಮೆಂಟ್‌ಗಳಲ್ಲಿ ವಿಚಾರಣೆ ಬಂದಿದೆ. ಅನೇಕ ಸಂಘ–ಸಂಸ್ಥೆಗಳು ಈ ಮಾದರಿ ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ. ಕೇವಲ ತರಬೇತಿ ಮತ್ತು ಮಾರ್ಗದರ್ಶನದಿಂದ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ಅನುಭವದಿಂದ ಮನದಟ್ಟಾಗಿದೆ. ಹೀಗಾಗಿ ನಮ್ಮ ಪರಿಣಿತ ಕಾರ್ಯಕರ್ತರ ಮೂಲಕವೇ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ.ಯಂತ್ರರಹಿತವಾಗಿ, ಮಾನವ ಶಕ್ತಿ ಮೂಲಕ ಇದು ಅನುಷ್ಠಾನಗೊಳ್ಳುವುದರಿಂದ ಸಮಸ್ಯೆ ಇಲ್ಲದೆ ನಿರಂತರವಾಗಿ ನಡೆಯುತ್ತದೆ. ಉಪ್ಪಿನಂಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆ ಯಶಸ್ವಿಯಾಗಿದೆ’ ಎಂದು ವಿವರಿಸಿದರು.

ಜನರಿಗೆ ಲಾಭದಾಯಕವಾಗುವ ಯೋಜನೆಯನ್ನು ಭವಿಷ್ಯದಲ್ಲಿ ಜಾರಿಗೊಳಿಸಲು ಸಂಸ್ಥೆ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.

‘ವಾಮಂಜೂರಿನಲ್ಲಿ ಮತ್ತೊಂದು ಕಾಂಕ್ರೀಟ್ ಗುಡ್ಡ’

ಪ್ರತಿದಿನ ಸಂಗ್ರಹವಾಗುವ ಕಸವನ್ನು ವಿಲೇವಾರಿ ಘಟಕದಲ್ಲಿ ರಾಶಿ ಹಾಕಲಾಗುತ್ತಿದೆ. ಗೊಬ್ಬರ ಉತ್ಪಾದನೆ ಆಗುತ್ತಿಲ್ಲ. ತ್ಯಾಜ್ಯದ ಗುಡ್ಡವನ್ನು ನಾವು ಸೃಷ್ಟಿಸುತ್ತಿದ್ದೇವೆ. ಬೇಸಿಗೆಯಲ್ಲಿ ತ್ಯಾಜ್ಯ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ತ್ಯಾಜ್ಯ ಘಟಕದ ಹೊಲಸು ನೀರು, ಫಲ್ಗುಣಿ ನದಿಗೆ ಸೇರುತ್ತಿದೆ. 30 ಗ್ರಾಮಗಳ ಜನರು ಈ ನೀರನ್ನು ಕುಡಿಯುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಿಲ್ಲ. ‘ನಮಾಮಿ ಗಂಗೆ’ ಮಾದರಿಯ ಯೋಜನೆ ರೂಪಿಸಬಹುದಿತ್ತು’ ಎಂದು ಪಾಲಿಕೆ ಸದಸ್ಯ ವಿನಯ್‌ರಾಜ್ ಸಲಹೆ ಮಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕಾಂಕ್ರೀಟ್ ತ್ಯಾಜ್ಯಗಳನ್ನು ವಾಮಂಜೂರಿನ ಸಮತಟ್ಟು ನೆಲದಲ್ಲಿ ರಾಶಿ ಹಾಕಲಾಗುತ್ತಿದೆ. ಇನ್ನೊಂದು ಕಾಂಕ್ರೀಟ್ ಗುಡ್ಡ ಅಲ್ಲಿ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT