4 ದಿನ ನೀರು; ಎರಡು ದಿನ ಸ್ಥಗಿತ

ಬುಧವಾರ, ಏಪ್ರಿಲ್ 24, 2019
31 °C
ಬರಿದಾದ ಎಎಂಆರ್‌ ಡ್ಯಾಂ: ನಗರದಲ್ಲಿ ರೇಷನಿಂಗ್ ಆರಂಭ

4 ದಿನ ನೀರು; ಎರಡು ದಿನ ಸ್ಥಗಿತ

Published:
Updated:
Prajavani

ಮಂಗಳೂರು: ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಸ್ಥಗಿತವಾಗಿದ್ದು, ಶಂಭೂರಿನ ಎಎಂಆರ್ ಡ್ಯಾಂ ಬರಿದಾಗಿದೆ. ಇದೀಗ ತುಂಬೆ ಕಿಂಡಿ ಅಣೆಕಟ್ಟೆಯಲ್ಲೂ 5.80 ಮೀಟರ್‌ ಮಾತ್ರ ನೀರು ಸಂಗ್ರಹವಿದ್ದು, ಇದೀಗ ನಗರದಲ್ಲಿ ನೀರಿನ ರೇಷನಿಂಗ್ ಆರಂಭಿಸುವುದು ಅನಿವಾರ್ಯವಾಗಿದೆ.

ಕಳೆದ ವರ್ಷದಿಂದ ತುಂಬೆ ಅಣೆಕಟ್ಟೆಯಲ್ಲಿ 6 ಮೀಟರ್ ನೀರು ಸಂಗ್ರಹಿಸಲಾಗುತ್ತದೆ. ಆದರೆ, ಈ ವರ್ಷ ಎಎಂಆರ್ ಡ್ಯಾಂನಲ್ಲಿ ನೀರು ಖಾಲಿ ಆಗಿರುವುದರಿಂದ ತುಂಬೆ ಅಣೆಕಟ್ಟೆಯಲ್ಲಿ 5.80 ಮೀಟರ್‌ ನೀರನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತಿದೆ.

ಇರುವ ನೀರನ್ನು ಜೂನ್‌ ಮೊದಲ ವಾರದವರೆಗೆ ಪೂರೈಕೆ ಮಾಡುವ ಸವಾಲು ಮಹಾನಗರ ಪಾಲಿಕೆಯ ಮುಂದಿದ್ದು, ಇದೀಗ ನೀರನ್ನು ಮಿತವಾಗಿ ಬಳಸುವ ನಿರ್ಧಾರ ಕೈಗೊಂಡಿದೆ. ಇದರ ಪರಿಣಾಮವಾಗಿ 4 ದಿನ ನೀರು ಪೂರೈಕೆ ಮಾಡಿ, ಎರಡು ದಿನ ಸಂಪೂರ್ಣ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

ಬುಧವಾರ ಎಎಂಆರ್ ಡ್ಯಾಂನಿಂದ ತುಂಬೆ ಕಿಂಡಿ ಅಣೆಕಟ್ಟೆಗೆ ನೀರು ಹರಿಸಲಾಗಿದ್ದು, ಸದ್ಯದ ಮಟ್ಟಿಗೆ 5.80 ಮೀಟರ್ ನೀರು ತುಂಬೆಯಲ್ಲಿ ಸಂಗ್ರಹವಾಗಿದೆ. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೇತ್ರಾವತಿ ನದಿಯಿಂದ ಪೂರೈಕೆ ಮಾಡಲಾಗುತ್ತಿದೆ. ನೇತ್ರಾವತಿ ನದಿಯಲ್ಲಿ ಫೆಬ್ರುವರಿಯಿಂದಲೇ ನೀರಿನ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಬುಧವಾರದವರೆಗೆ ತುಂಬೆ ಡ್ಯಾಂನಲ್ಲಿ 5.80 ಮೀಟರ್‌ ಮಾತ್ರ ನೀರು ಲಭ್ಯವಾಗಿದೆ ಎಂದು ಪಾಲಿಕೆ ಪ್ರಭಾರ ಆಯುಕ್ತ ನಾರಾಯಣಪ್ಪ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, 4 ದಿನಗಳ ಒಟ್ಟು 96 ಗಂಟೆ ನಗರದ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುವುದು. ನಂತರ 48 ಗಂಟೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕೈತೋಟಗಳಿಗೆ, ವಾಹನ ತೊಳೆಯಲು ಹಾಗೂ ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು. ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಬೇಕು ಎಂದು ಮನವಿ ಮಾಡಿದ್ದಾರೆ.

ತೆಗ್ಗು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿರುವ ಬಳಕೆದಾರರು, ಅವಶ್ಯಕತೆ ಇದ್ದಷ್ಟೇ ನೀರನ್ನು ಬಳಸಿ, ಮನೆಯ ಗೇಟ್ ವಾಲ್ವ್‌ಗಳನ್ನು ಬಂದ್ ಮಾಡಬೇಕು. ಈ ಮೂಲಕ ಎತ್ತರದ ಪ್ರದೇಶದಲ್ಲಿನ ಸಾರ್ವಜನಿಕರಿಗೆ ನೀರು ಪೂರೈಕೆಯಾಗುವಂತೆ ಸಹಕರಿಸುವಂತೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !