ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ: ಕ್ರಿಮಿನಲ್ ಮೊಕದ್ದಮೆಯ ಎಚ್ಚರಿಕೆ

ನದಿಗೆ ತ್ಯಾಜ್ಯ ನೀರು ಹರಿವು– ಪುತ್ತೂರು ತಹಶೀಲ್ದಾರ್ ಪರಿಶೀಲನೆ
Last Updated 30 ಏಪ್ರಿಲ್ 2021, 4:27 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಕೆಲ ವಸತಿ ಸಮುಚ್ಚಯ, ಹೋಟೆಲ್‌ಗಳು ತ್ಯಾಜ್ಯ ನೀರನ್ನು ನೇತ್ರಾವತಿ ಮತ್ತು ಕುಮಾರ ಧಾರ ನದಿಗಳಿಗೆ ಹರಿಯ ಬಿಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ತಹಶೀಲ್ದಾರ್ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

ವಸತಿ ಸಮುಚ್ಚಯ, ಹೊಟೇಲ್‌ಗಳು ತಕ್ಷಣ ಇಂಗು ಗುಂಡಿ ರಚಿಸಿ, ತ್ಯಾಜ್ಯ ನೀರಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದರು.

‘ಉಪ್ಪಿನಂಗಡಿಯಲ್ಲಿ ನೇತ್ರಾವತಿಯ ನದಿಯ ದಡದಲ್ಲೇ ಇಂಗುಗುಂಡಿ ರಚಿಸಿ, ತ್ಯಾಜ್ಯದ ನೀರನ್ನು ಅದಕ್ಕೆ ಹರಿಯ ಬಿಡಲಾಗುತ್ತಿದೆ. ಇದರಿಂದ ನದಿ ನೀರು ಮಲಿನಗೊಳ್ಳುವುದಲ್ಲದೆ, ಸಾಂಕ್ರಾಮಿಕ ರೋಗಭೀತಿ ಆವರಿಸಿದೆ’ ಎಂದು ಬುಧವಾರ ಸಾರ್ವಜನಿಕರೊಬ್ಬರು ತಹಶೀಲ್ದಾರ್ ರಮೇಶ್ ಬಾಬು ಅವರಿಗೆ ದೂರು ನೀಡಿದ್ದರು.

ಇದಕ್ಕೆ ಸ್ಪಂದಿಸಿ ಗುರುವಾರ ಬೆಳಿಗ್ಗೆ ಉಪ್ಪಿನಂಗಡಿ ಮತ್ತು 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಭಯ ನದಿ ತೀರಕ್ಕೆ ಭೇಟಿ ನೀಡಿದರು. ಉಪ್ಪಿನಂಗಡಿಯಲ್ಲಿ ಮನೆಗಳ, ಪ್ಲಾಟ್‌ಗಳ ಹಾಗೂ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ತ್ಯಾಜ್ಯ ನೀರು ನೇರವಾಗಿ ನದಿಗೆ ಹರಿಯುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂತು.

ಪಿಡಿಒಗೆ ತರಾಟೆ: ತಹಶೀಲ್ದಾರ್ ನದಿ ದಡಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಬಂದು ‘ಈ ಸಮಸ್ಯೆ ಸುಮಾರು 20 ವರ್ಷದಿಂದ ಇದೆ. ಯಾರು ಕೂಡಾ ಕ್ರಮ ವಹಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ವೇಳೆ ಗರಂ ಆದ ತಹಶೀಲ್ದಾರ್ ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇದೆಲ್ಲಾ ಏನು? ನದಿಯಲ್ಲೇ ತ್ಯಾಜ್ಯ ಗುಂಡಿ ಮಾಡೋಕೆ ಯಾಕೆ ಅವಕಾಶ ಕೊಟ್ಟಿದ್ದೀರಿ? ಇದಕ್ಕೆ ನಿಮ್ಮನ್ನೇ ಜವಾಬ್ದಾರಿ ಮಾಡುತ್ತೇನೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಜತೆ ಚರ್ಚೆ ಮಾಡುತ್ತೇನೆ’ ಎಂದರು.

ಪಿಡಿಒ ಪ್ರತಿಕ್ರಿಯಿಸಿ, ‘ಸಂಬಂಧ ಪಟ್ಟವರಿಗೆ ನೋಟಿಸ್ ಕೊಡಲಾಗಿದೆ. ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ತ್ಯಾಜ್ಯ ನೀರು ಬಿಡುವವರನ್ನು ಕರೆದು ಸಭೆ ನಡೆಸಿ, ಸಮಿತಿಯೊಂದನ್ನು ಮಾಡಿ, ನದಿಗೆ ತ್ಯಾಜ್ಯ ನೀರು ಬಿಡದಂತೆ ಕ್ರಮ ತೆಗೆದು ಕೊಳ್ಳಲು ನಿರ್ಣಯಿಸಲಾಗಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್‌ಗಳ ತ್ಯಾಜ್ಯ ನೀರು ಕೂಡಾ ನದಿಯನ್ನು ಸೇರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದಾಗ, ಗ್ರಾಮ ಪಂಚಾಯಿತಿಗೂ ನೋಟಿಸ್ ನೀಡಲು ಗ್ರಾಮಕರಣಿಕರಿಗೆ ತಹಶೀಲ್ದಾರ್ ಸೂಚಿಸಿದರು. ಅಲ್ಲದೆ, ಗಡುವಿನ ಬಳಿಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ನದಿಗಳಿಗೆ ಹರಿಯುವುದನ್ನು ಪರಿಶೀಲಿಸಿದ ತಹಶೀಲ್ದಾರ್, ಖಾಸಗಿ ವ್ಯಕ್ತಿಯೊಬ್ಬರು ನದಿ ಪರಾಂಬೋಕು ಜಾಗವನ್ನು ಅತಿಕ್ರಮಿಸಿರುವುದನ್ನು ಕಂಡು ಈ ಅತಿಕ್ರಮಣದ ತೆರವಿಗೆ ಸೂಚಿಸಿದರಲ್ಲದೆ, ಅಲ್ಲಿ ನಡೆಯುತ್ತಿದ್ದ ಆವರಣ ಗೋಡೆಯ ಕಾಮಗಾರಿಯನ್ನು ನಿಲ್ಲಿಸಲು ತಿಳಿಸಿದರು.

‘ಈ ಜಾಗವನ್ನು ನಮಗೆ ನೀಡಿದ್ದಲ್ಲಿ ಇಲ್ಲಿ ಇಂಗುಗುಂಡಿ ರಚಿಸಿ ನದಿಗೆ ಮನೆಗಳ ತ್ಯಾಜ್ಯ ನೀರು ಹರಿಯದಂತೆ ಮಾಡುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ ತಿಳಿಸಿದರು. ಈ ಬಗ್ಗೆ ಲಿಖಿತವಾಗಿ ಬರೆದುಕೊಟ್ಟರೆ ಈ ಜಾಗವನ್ನು ಇಂಗುಗುಂಡಿ ರಚಿಸಲು ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ನದಿಗೆ ಹಾಕಲಾಗಿರುವ ತ್ಯಾಜ್ಯವನ್ನು ತಕ್ಷಣ ತೆರವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಧನಂಜಯ, ಯು.ಟಿ. ತೌಸೀಫ್, ಅಬ್ದುಲ್ ರಝಾಕ್, 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ, ಪಿಡಿಒ ಕುಮಾರಯ್ಯ, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ಯುನಿಕ್, ಕೃಷ್ಣ, ಕಂದಾಯ ನಿರೀಕ್ಷಕ ಜಯವಿಕ್ರಮ್, ಗ್ರಾಮಕರಣಿಕರಾದ ಸುನಿಲ್, ರಮಾನಂದ ಚಕ್ಕಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT