ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‍ಸಿಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಪ್ರಥಮ: ಎಂಎನ್‌ಆರ್

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ
Last Updated 5 ಜುಲೈ 2022, 3:46 IST
ಅಕ್ಷರ ಗಾತ್ರ

ಮಂಗಳೂರು: ‘ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ) ಸಮರ್ಪಕವಾಗಿ ಜಾರಿಗೆ ತಂದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರ’ ಎಂದು ಎಸ್‍ಸಿಡಿಸಿಸಿ ಬ್ಯಾಂಕ್‍ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಕೆನರಾ ಬ್ಯಾಂಕ್ ಹಾಗೂ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್, ತೋಟಗಾರಿಕೆ ಇಲಾಖೆ, ನಬಾರ್ಡ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಮಾ ವಿಭಾಗದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಹವಾಮಾನ ವೈಪರೀತ್ಯದಿಂದ ಆಗುವ ಬೆಳೆ ಹಾನಿ ಭರಿಸಲು ಸರ್ಕಾರ ಕೈಗೊಂಡ ಈ ಯೋಜನೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದ್ದು, ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಮುನ್ನಡೆ ಸಾಧಿಸಿ, ದಾಖಲೆ ನಿರ್ಮಿಸಿದೆ. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 3,45,808 ರೈತರು ಈ ಯೋಜನೆಯಡಿ ದಾಖಲಾಗಿದ್ದು, ಈ ಪೈಕಿ ಎಸ್‍ಸಿಡಿಸಿಸಿ ಬ್ಯಾಂಕ್ ಮೂಲಕ ಉಭಯ ಜಿಲ್ಲೆಗಳಲ್ಲಿ 1,04,895 ರೈತರು ಈ ಯೋಜನೆಯಲ್ಲಿ ದಾಖಲು ಮಾಡಿಕೊಂಡಿದ್ದರು. ಒಟ್ಟು ₹ 24.14 ಕೋಟಿ ವಿಮೆ ಮೊತ್ತ ಜಮೆಯಾಗಿದೆ ಎಂದರು.

ಬೆಳೆ ಸಾಲ ಪಡೆದ ರೈತರಿಗೆ ವಿಮಾ ಯೋಜನೆಯನ್ನು ಮಾಡಿಸುವ ಬಗ್ಗೆ ಎಸ್‍ಸಿಡಿಸಿಸಿ ಬ್ಯಾಂಕ್ ಚಿಂತನೆ ನಡೆಸಿದೆ. ಕೃಷಿ ಬೆಳೆ ಸಾಲ ಮಾಡಿದ ರೈತ ಅಕಾಲಿಕ ಮೃತ ಪಟ್ಟರೆ ಅವರ ಕುಟುಂಬಕ್ಕೆ ಹೊರೆಯಾಗಬಾರದೆಂಬ ಚಿಂತನೆಯಿಂದ ರೈತರಿಗೆ ಈ ವಿಮಾ ಯೋಜನೆ ಆಧಾರವಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ನಬಾರ್ಡ್ ಡಿಡಿಎಂ ಸಂಗೀತಾ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮಾ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಶಾಂತನು ದಾಸ್, ಕ್ಷೇತ್ರ ಮಾರಾಟ ವ್ಯವಸ್ಥಾಪಕ ಸತೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ, ಮಹಾ ಪ್ರಬಂಧಕ ಗೋಪಿನಾಥ್ ಭಟ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT