ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿಯಲ್ಲಿ ವಾರಾಂತ್ಯ ಹಬ್ಬ

ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ
Last Updated 24 ಸೆಪ್ಟೆಂಬರ್ 2021, 12:53 IST
ಅಕ್ಷರ ಗಾತ್ರ

ಮಂಗಳೂರು: ನಗರದ ಆಯ್ದ ರಸ್ತೆ ಬದಿಗಳಲ್ಲಿ ವಾರಾಂತ್ಯದ ಹಬ್ಬ ಆಯೋಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಕಾರ್ಯನಿರತರ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಕ್ಲಾಕ್‌ ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್‌ವರೆಗೆ, ಕದ್ರಿ ಪಾರ್ಕ್ ಎದುರು ರಸ್ತೆ ಬದಿಯಲ್ಲಿ ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ಥಳೀಯ ಕಲಾವಿದರು, ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಕೋವಿಡ್ ಪರಿಸ್ಥಿತಿ ಅವಲೋಕಿಸಿ, ಈ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

ಪ್ರವಾಸೋದ್ಯಮ ದಿನಾಚರಣೆಯಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಡೆದು ಬಂದಿರುವ ಹಾದಿ, ಅಭಿವೃದ್ಧಿ ಆಗಿರುವ ತಾಣಗಳು, ಮುಂದಿನ ಯೋಜನೆ ಬಗ್ಗೆ ಬೇರೆ ಬೇರೆ ಕ್ಷೇತ್ರದ ಪ್ರಮುಖರು, ಉದ್ಯಮಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ತಣ್ಣೀರು ಬಾವಿಯ ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಇಡ್ಯದ ಒಂದು ಕಿ.ಮೀ ವ್ಯಾಪ್ತಿಯ ಕಡಲ ತೀರಗಳಿಗೆ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ನೀಡುವ ಸಂಬಂಧ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಈ ಮಾನ್ಯತೆ ದೊರೆತರೆ ಸಹಜವಾಗಿ ಅಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಪ್ರವಾಸಿ ಬಸ್: ಪ್ರವಾಸಿಗ ಸ್ನೇಹಿ ವ್ಯವಸ್ಥೆಯಾಗಿ, ಕಡಲ ತೀರದ ಪ್ರವಾಸಕ್ಕೆ ಬಸ್ ವ್ಯವಸ್ಥೆ ಪ್ರಾರಂಭಿಸಲು ಈ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೋವಿಡ್ ಕಾರಣಕ್ಕೆ ಹಿಂದೆ ಬಿದ್ದಿದ್ದ ಯೋಜನೆಯನ್ನು ಮುನ್ನೆಲೆಗೆ ತಂದು ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. ಸ್ಥಳೀಯ ಹೋಟೆಲ್‌ಗಳು, ಉದ್ಯಮಿಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಂಡು, ಪ್ರವಾಸಿಗರಿಗೆ ಸಂಚಾರದ ನಡುವೆ ದಣಿವಾರಿಸಿಕೊಳ್ಳಲು ವಿಶ್ರಾಂತಿ ಕೊಠಡಿ, ಊಟೋಪಚಾರಕ್ಕೆ ನಿಗದಿತ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸುವ ಆಲೋಚನೆ ಇದೆ ಎಂದು ತಿಳಿಸಿದರು.

ಬೆಂಗ್ರೆ ಬೀಚ್‍ನಲ್ಲಿ ಚಟುವಟಿಕೆ ಪ್ರಾರಂಭಿಸಲು ಸಿಆರ್‌ಝಡ್ ಅನುಮತಿ ದೊರೆತಿದೆ. ಓಪಸ್ ಲಗೂನಾ ಸಂಸ್ಥೆ ಟೆಂಡರ್‌ ಪಡೆದಿದ್ದು, ಇಲ್ಲಿ ರೆಸಾರ್ಟ್, ಗಾಲ್ಫ್ ಇನ್ನಿತರ ಚಟುವಟಿಕೆಗಳಿಗೆ ಚಾಲನೆ ದೊರೆತರೆ ಸ್ಥಳೀಯ ಸುಮಾರು 800 ಜನರಿಗೆ ಉದ್ಯೋಗ ದೊರೆಯಬಹುದು. ಇಲ್ಲಿನ ಜಮೀನು ಒತ್ತುವರಿ ಸಮಸ್ಯೆ ಬಗೆಹರಿಸಲಾಗುವುದು. ಈ ಸಂಬಂಧ ಹಲವಾರು ಸುತ್ತಿನ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಈಗಾಗಲೇ ₹ 5 ಕೋಟಿ ಬಿಡುಗಡೆಯಾಗಿದೆ. ಆದರೆ, ಬೀಚ್‌ಗಳಿಗೆ
ಒದಗಿಸುವ ಮೂಲ ಸೌಕರ್ಯಗಳಿಗೆ ಕಡಲ್ಕೊರೆತದಿಂದ ಧಕ್ಕೆಯಾಗುತ್ತಿದೆ. ಇದನ್ನು ತಡೆಯುವ ಬಗ್ಗೆ ಯೋಚಿಸಬೇಕಾಗಿದೆ. ಪಿಲಿಕುಳದಲ್ಲಿ ಜಿರಾಫೆ, ಝೀಬ್ರಾ, ಆನೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲು ಯೋಚಿಸಲಾಗಿದೆ. ಇಲ್ಲಿ ಕಂಬಳವನ್ನು ಮತ್ತೆ ಆರಂಭಿಸುವ, ನದಿ ಉತ್ಸವ ನಡೆಸುವ ಯೋಚನೆ ಇದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರಮುಖ ದೇವಾಲಯ, ಚರ್ಚ್, ದರ್ಗಾಗಳನ್ನು ಒಳಗೊಂಡು ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮ ಅಭಿವೃದ್ಧಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಪ್ರವಾಸಿ ತಾಣಗಳ ಮಾಹಿತಿ, ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಕಾಫಿ ಟೇಬಲ್ ಬುಕ್ ಇಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಡಾ. ರಾಜೇಂದ್ರ ಪ್ರತಿಕ್ರಿಯಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT