ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣಕ್ಕೆ ವಾರದ ಗಡುವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ 5ಕ್ಕಿಂತ ಕೆಳಗಿಳಿಸಲು ಕಟ್ಟುನಿಟ್ಟು
Last Updated 13 ಜೂನ್ 2021, 3:34 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಾರದ್ದರಿಂದ ಮತ್ತೊಂದು ವಾರ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ. ವಾರದಲ್ಲಿ ಸೋಂಕಿನ ಪ್ರಮಾಣ ಇಳಿಸುವ ಅನಿವಾರ್ಯತೆ ಇದೀಗ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಜೊತೆಗೆ ಜನರಿಗೂ ಎದುರಾಗಿದೆ.

ಇದೀಗ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಪ್ರಾಥಮಿಕ, ದ್ವಿತೀಯ ಸಂಪರ್ಕ ಪತ್ತೆ ಮಾಡುವ ಕಾರ್ಯವನ್ನೂ ಚುರುಕುಗೊಳಿಸಲಾಗಿದೆ. ಜೊತೆಗೆ ಕೋವಿಡ್–19 ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಉಡುಪಿ ಮಾದರಿ: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ತಗ್ಗಿಸಲು ಇದೀಗ ಉಡುಪಿ ಜಿಲ್ಲೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಐದಾರು ದಿನ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಉಡುಪಿಯಲ್ಲಿ ಕೋವಿಡ್–19 ನಿಯಂತ್ರಣ ಮಾಡಲಾಗಿದ್ದು, ಜೂನ್‌ 14 ರ ನಂತರ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಲಿದೆ.

ಅದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿರುವ 40 ಗ್ರಾಮಗಳು ಹಾಗೂ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೆಳ್ತಂಗಡಿಯ ನಗರ ಪ್ರದೇಶಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ವಸತಿ ಸಮುಚ್ಚಯದಲ್ಲಿ ಪರೀಕ್ಷೆ ಆರಂಭ: ಮಂಗಳಾದೇವಿ ಪರಿಸರದಲ್ಲಿನ ಒಂದು ವಸತಿ ಸಮುಚ್ಚಯದಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಈ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ, ಅಲ್ಲಿನ ಎಲ್ಲ ಜನರ ಗಂಟಲು ದ್ರವ ಪರೀಕ್ಷೆಗೆ ವ್ಯವಸ್ಥೆ ಮಾಡಿದರು.

ಕೋವಿಡ್–19 ನಿಯಂತ್ರಣ ಸಭೆಗಳಲ್ಲಿ ನಿರ್ಣಯಿಸಿದಂತೆ ನಗರ ವ್ಯಾಪ್ತಿಯ ವಸತಿ ಸಮುಚ್ಚಯದಲ್ಲಿ ವಾಸಿಸುವ ಜನರಿಗೆ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್–19 ಪತ್ತೆಯಾದಲ್ಲಿ, ವಸತಿ ಸಮುಚ್ಚಯದಲ್ಲಿ ವಾಸಿಸುವ ಎಲ್ಲ ಜನರಿಗೆ ಕೋವಿಡ್ ಪರೀಕ್ಷೆಯನ್ನು ತ್ವರಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪಾಲಿಕೆಯ ವತಿಯಿಂದ ಈಗಾಗಲೇ ಸಂಚಾರಿ ಗಂಟಲು ದ್ರವ ಪರೀಕ್ಷೆಯನ್ನು ವ್ಯವಸ್ಥೆಯ ಪ್ರಾರಂಭಿಸಿದ್ದು, ಪ್ರತ್ಯೇಕವಾಗಿ ಸಹಾಯವಾಣಿ ತೆರೆಯಲಾಗಿದೆ.

ಗ್ಯಾರೇಜ್‌ಗಳು ಆರಂಭ

ಸಚಿವರ ನೇತೃತ್ವದ ಸಭೆಯಲ್ಲಿ ನಿರ್ಧರಿಸಿದಂತೆ ಶನಿವಾರ ಬೆಳಿಗ್ಗೆಯಿಂದ ನಗರದಲ್ಲಿ ಗ್ಯಾರೇಜ್‌ಗಳು ಕಾರ್ಯಾರಂಭ ಮಾಡಿದವು.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಾಹನಗಳ ದುರಸ್ತಿಗೆ ಅವಕಾಶ ನೀಡಲಾಗಿದೆ. ಏ.23 ರಿಂದಲೇ ಬಂದ್‌ ಆಗಿದ್ದ ಗ್ಯಾರೇಜ್‌ಗಳು ಬಾಗಿಲು ತೆರೆದಿದ್ದು, ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಗ್ಯಾರೇಜ್‌ಗೆ ಬಂದಿದ್ದವು. ಆದರೆ, ವಾಹನ ಬಿಡಿಭಾಗಗಳ ಅಂಗಡಿಗಳು ಬಂದ್ ಆಗಿರುವುದರಿಂದ ಮೊದಲ ದಿನ ಸಮಸ್ಯೆ ಎದುರಾಗಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲೂ ನಮಗೆ ಹಲವರು ಕರೆ ಮಾಡಿ, ವಾಹನ ದುರಸ್ತಿ ಮಾಡಲು ಕೇಳುತ್ತಿದ್ದರು. ಸಣ್ಣ ಪ್ರಮಾಣದ ದುರಸ್ತಿ ಮಾಡಿಕೊಡಲಾಗುತ್ತಿತ್ತು. ಆದರೆ, ದೊಡ್ಡ ಪ್ರಮಾಣದ ದುರಸ್ತಿಗೆ ಸಾಧ್ಯವಾಗಿರಲಿಲ್ಲ’ ಎಂದು ಗ್ಯಾರೇಜ್‌ ಮಾಲೀಕ ಜಗದೀಶ್‌ ಹೇಳಿದರು.

ಕೋವಿಡ್: ಕರಾವಳಿಯಲ್ಲಿ 6 ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 618 ಮಂದಿಗೆ ಕೋವಿಡ್–19 ದೃಢವಾಗಿದ್ದು, 524 ಜನರು ಗುಣಮುಖರಾಗಿದ್ದಾರೆ. ಮೃತಪಟ್ಟ ನಾಲ್ವರಿಗೆ ಕೋವಿಡ್ ಇರುವುದು ಶನಿವಾರ ದೃಢವಾಗಿದೆ.

ಉಡುಪಿ: ಜಿಲ್ಲೆಯಲ್ಲಿ 258 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 625 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟ ಇಬ್ಬರಿಗೆ ಕೋವಿಡ್ ಇರುವುದು ದೃಢವಾಗಿದೆ. 3,348 ಸಕ್ರಿಯ ಪ್ರಕರಣಗಳಿವೆ.

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 475 ಮಂದಿಗೆ ಸೋಂಕು ದೃಢಪಟ್ಟಿದ್ದು, 375 ಮಂದಿಗೆ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 77,108 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 72,602 ಮಂದಿಗೆ ಗುಣಮುಖರಾಗಿದ್ದಾರೆ. ಸದ್ಯ 3,889 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT