ಗುರುವಾರ , ನವೆಂಬರ್ 21, 2019
22 °C
ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

‘ಸಮೃದ್ಧ ಮಂಗಳೂರು’ ನಿರ್ಮಾಣದ ಭರವಸೆ

Published:
Updated:
Prajavani

ಮಂಗಳೂರು: ನಗರದ ಎಲ್ಲ ವಾರ್ಡ್‌ಗಳಿಗೂ 24X7 ಕುಡಿಯುವ ನೀರು ಪೂರೈಕೆ, ನಗರದಾದ್ಯಂತ ಒಳಚರಂಡಿ ಸಂಪರ್ಕ, ಗುಣಮಟ್ಟದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ, ವಾಹನ ನಿಲುಗಡೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ, ಪಂಪ್‌ವೆಲ್‌ಗೆ ನಗರ ಸಾರಿಗೆ ಮತ್ತು ಸರ್ವೀಸ್‌ ಬಸ್‌ ನಿಲ್ದಾಣಗಳ ಸ್ಥಳಾಂತರ, ಮಹಿಳೆಯರಿಗೆ ಉಚಿತವಾಗಿ ನ್ಯಾಪ್ಕಿನ್‌ ವಿತರಣೆ, ಕೂಳೂರು ಹಿನ್ನೀರಿನಲ್ಲಿ ದೋಣಿ ವಿಹಾರಧಾಮ ನಿರ್ಮಾಣ....

ಇವು ಸ್ವಚ್ಛ, ಸುಂದರ ಮತ್ತು ಸಮೃದ್ಧ ಮಂಗಳೂರಿನ ನಿರ್ಮಾಣದ ಭರವಸೆಯೊಂದಿಗೆ ಕಾಂಗ್ರೆಸ್‌ ಪಕ್ಷವು ಮಹಾನಗರ ಪಾಲಿಕೆ ಚುನಾವಣೆಗಾಗಿ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಬುಧವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪಕ್ಷ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಎಡಿಬಿ–2 ಯೋಜನೆಯನ್ನು ಬಳಸಿಕೊಂಡು ನಗರದ ಎಲ್ಲ ವಾರ್ಡ್‌ಗಳಿಗೂ ನಿರಂತರ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ಕೊರತೆಯನ್ನು ನೀಗಲು ಉಪ್ಪು ನೀರು ಸಂಸ್ಕರಿಸಿ ಪೂರೈಕೆ ಮಾಡುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಬಾಕಿ ಇರುವ ಎಲ್ಲ ಪ್ರದೇಶಗಳಲ್ಲೂ ಎಡಿಬಿ–2 ಅಡಿಯಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು. ರಾಜಕಾಲುವೆ ಗಳಲ್ಲಿ ತ್ಯಾಜ್ಯ ಹರಿಯುವುದನ್ನು ತಪ್ಪಿಸುವ ಪಾಂಡೇಶ್ವರ– ಕಂಡತ್ತಪಳ್ಳಿ– ಕುದ್ರೋಳಿ– ಮುಲ್ಲಕಾಡು– ಕಾವೂರು ಮುಖ್ಯ ಪಂಪಿಂಗ್‌ ಕೊಳವೆ ಬದಲಾವಣೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂಬ ಆಶ್ವಾಸನೆ ಇದೆ.

ಹೆದ್ದಾರಿಗಳಿಗೆ ಸಂಪರ್ಕ ಜೋಡಣೆ: ನಗರದ ಕೇಂದ್ರ ಭಾಗ ಹಾಗೂ ಸುರತ್ಕಲ್‌ ಪ್ರದೇಶದ 15 ಮುಖ್ಯ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು. ಸುರತ್ಕಲ್‌– ಕಾನ– ಎಂಆರ್‌ಪಿಎಲ್‌ ರಸ್ತೆಯನ್ನು ಆರು ಪಥಗಳ ಹೆದ್ದಾರಿಯಾಗಿ ಮೇಲ್ದರ್ಜೇಗೇರಿಸಲಾಗುವುದು. ನಗರದಲ್ಲಿ ವಾಹನ ದಟ್ಟಣೆ ತಗ್ಗಿಸಲು ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಜೋಡಿಸಲಾಗುವುದು ಎಂಬ ಭರವಸೆಯನ್ನು ಕಾಂಗ್ರೆಸ್‌ ಮತದಾರರ ಮುಂದಿಟ್ಟಿದೆ.

ಮಹಾಕಾಳಿಪಡ್ಪು ಬಳಿ ರೈಲ್ವೆ ಕೆಳ ಸೇತುವೆ ನಿರ್ಮಾಣ, ಕಣ್ಣೂರು ಬಳಿ ರೈಲ್ವೆ ಅಂಡರ್‌ಪಾಸ್‌, ಕೆಪಿಟಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌, ಪುರಭವನದ ಎದುರಿನಲ್ಲಿ ಅಂಡರ್‌ಪಾಸ್‌ ಹಾಗೂ ಪಾಂಡೇಶ್ವರ ರೈಲ್ವೆ ಲೆವೆಲ್‌ ಕ್ರಾಸ್‌ ಬಳಿ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಿಸುವುದಾಗಿ ಪ್ರಕಟಿಸಿದೆ.

ಹಳೆ ಬಸ್‌ ನಿಲ್ದಾಣದ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಿಸಲಾಗುವುದು. ಆಟೊ ಮತ್ತು ಟ್ಯಾಕ್ಸಿಗಳ ನಿಲುಗಡೆಗೂ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ನಗರ ಎಲ್ಲ ವೃತ್ತಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು. ಮಲ್ಲಿಕಟ್ಟೆ ಮತ್ತು ಸ್ಟೇಟ್‌ ಬ್ಯಾಂಕ್‌ ಬಳಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲಾಗುವುದು. ಸುರತ್ಕಲ್‌ ಬಸ್‌ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದೆ.

ಖಾಸಗಿ ಐ.ಟಿ. ಉದ್ದಿಮೆಗಳ ಸ್ಥಾಪನೆಗೆ ಸಹಕಾರ, ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ಪ್ರದೇಶದ ಸಮಸ್ಯೆಗಳಿಗೆ ಸ್ಪಂದನೆ, ಕೊಣಾಜೆಯಿಂದ ಸುರತ್ಕಲ್‌ ಎನ್‌ಐಟಿಕೆವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಡ ಹೇರುವುದಾಗಿ ಭರವಸೆ ನೀಡಿದೆ.

ಪ್ರತಿಕ್ರಿಯಿಸಿ (+)