ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿವಾಡಗೆ ಸಂಬಂಧಿಕರೇ ಪ್ರತಿಸ್ಪರ್ಧಿಗಳು!

10ನೇ ಬಾರಿ ಚುನಾವಣೆಗೆ ಸ್ಪರ್ಧಿಸಲು ತಯಾರಿ
Last Updated 20 ಏಪ್ರಿಲ್ 2018, 8:01 IST
ಅಕ್ಷರ ಗಾತ್ರ

ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಸತತ 10ನೇ ಬಾರಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಆದರೆ, ಅವರಿಗೆ ಈ ಬಾರಿ ಸಂಬಂಧಿಕರೇ ಎದುರಾಳಿಗಳು!

ಜೆಡಿಎಸ್‌ನಿಂದ ಶ್ರೀಪಾದ ಸಾವುಕಾರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರುಕ್ಮಿಣಿ ಸಾವುಕಾರ್‌ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇವರಿಬ್ಬರೂ ಕೋಳಿವಾಡ ಅವರ ಹತ್ತಿರದ ಸಂಬಂಧಿಕರು. ಜೊತೆಗೆ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಅವರ ಬಂಧುಗಳು.

ಶ್ರೀಪಾದ್‌ ಸಾವುಕಾರ್ ಅವರ ಪತ್ನಿ ನಳಿನಾ ಸಾವುಕಾರ್‌, ಕೋಳಿವಾಡ ಅವರ ಅಕ್ಕನ ಮಗಳು. ಈಗಾಗಲೇ ಪತಿ ಪರವಾಗಿ, ಕೋಳಿವಾಡರ ವಿರುದ್ಧ ಅವರು ಪ್ರಚಾರ ಆರಂಭಿಸಿದ್ದಾರೆ. ಇತ್ತ ಕೋಳಿವಾಡರ ಪರವಾಗಿ ಪುತ್ರ ಪ್ರಕಾಶ್‌ ಪ್ರಚಾರ ಮಾಡುತ್ತಿದ್ದಾರೆ.

ಕೋಳಿವಾಡರ ಅಣ್ಣನ ಮಗಳಾದ ರುಕ್ಮಿಣಿ ಸಾವುಕಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಶ್ರೀಪಾದ ಸಾವುಕಾರ್ ಅವರು ರುಕ್ಮಿಣಿ ಅವರ ದೊಡ್ಡಪ್ಪನ ಮಗ.

‘ಇಂವಾ ದೊಡ್ಡಪ್ಪನ ಮಗ (ಶ್ರೀಪಾದ), ಅವ್ರು (ಕೋಳಿವಾಡ) ನಮ್ ಚಿಗವ್ವನ್ನ ಮದುವಿ ಆಗಿದ್ರಿಂದ ನನಗ ಕಾಕಾ ಆಗಬೇಕು. ಗದುಗಿನವರಾದ ಎಚ್‌.ಕೆ. ಪಾಟೀಲರ ತಂಗೀನ ನಮ್‌ ಮನೆತನಕ್ಕೆ ತಂದುಕೊಂಡಿದ್ದಾರೆ. ಹೀಗಾಗಿ ಅವ್ರೂ ಕಾಕಾ ಆಗ್ಬೇಕು. ಅವ್ರ್ ತಮ್ಮ ಡಿ.ಆರ್. ಪಾಟೀಲ ಸಹ ಕಾಕಾನೇ ಆಗಬೇಕು’ ಎಂದು ರುಕ್ಮಿಣಿ ಸಾವುಕಾರ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಜನಸೇವೆಗೂ ಕೌಟುಂಬಿಕ ಸಂಬಂಧಕ್ಕೂ ಯಾವುದೇ ನಂಟಿಲ್ಲ. ಚುನಾವಣೆ ಬಂದಾಗ ಸ್ಪರ್ಧೆ, ಮದುವೆ, ಮುಂಜಿ, ಕಷ್ಟ–ಸುಖ ಬಂದಾಗ ಬಾಂಧವ್ಯ. ನಾವು ಸಂಬಂಧಿಕರು ಎಂಬ ಕಾರಣಕ್ಕೆ, ನಮ್ಮನ್ನು ನಂಬಿದ ಜನರನ್ನು ಕೈ ಬಿಡಲಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಮೂಲತಃ ಆರು ಜನ ಸಹೋದರರ ಸಾವುಕಾರ್ ಕುಟುಂಬದಲ್ಲಿ ಈಗ 300 ಸದಸ್ಯರು ಇದ್ದಾರೆ. ಹೀಗಾಗಿ, ಸ್ಪರ್ಧೆ ಸಹಜ. ಕೋಳಿವಾಡ ಮತ್ತು ಎಚ್.ಕೆ. ಪಾಟೀಲ ಅವರು ಸಾವುಕಾರ್‌ ಕುಟುಂಬದ ಬೀಗರು’ ಎಂದರು.

‘ಬಸವರಾಜ ಹೊರಟ್ಟಿ ನನ್ನನ್ನು ಕಣಕ್ಕಿಳಿಸಿದ್ದಾರೆ ಎಂದು ಕೋಳಿವಾಡ ತಪ್ಪು ತಿಳಿದುಕೊಂಡಿದ್ದಾರೆ. ಆದರೆ, ಎಚ್.ಡಿ.ದೇವೇಗೌಡ, ಎಚ್.ಡಿ. ರೇವಣ್ಣ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ನೇರ ಪರಿಚಯದ ಕಾರಣಕ್ಕೆ ನಾನು ಜೆಡಿಎಸ್ ಅಭ್ಯರ್ಥಿಯಾಗಿದ್ದೇನೆ’ ಎಂದು ಶ್ರೀಪಾದ ಸಾವುಕಾರ್ ಸ್ಪಷ್ಟಪಡಿಸಿದರು.ಕೋಳಿವಾಡ, 1972ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.

**

ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ನಾನು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧನಾಗಿ ರಾಜಕೀಯ ಮಾಡುತ್ತಾ ಬಂದಿದ್ದೇನೆ – ಕೆ.ಬಿ. ಕೋಳಿವಾಡ, ವಿಧಾನಸಭಾಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT