ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕ್ರಮ ಪ್ರಶ್ನಿಸಿ ಪಿಐಎಲ್‌

ಮದ್ಯದ ಬಾಟಲಿ ಬಿರಡೆಗಳ ಲೇಬಲ್‌ ಬದಲು
Last Updated 19 ಫೆಬ್ರುವರಿ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ವಿಧದ ಮದ್ಯ ಬಾಟಲಿಗಳ ಬಿರಡೆ ಮೇಲೆ ಅಂಟಿಸುವ ‘ಅಬಕಾರಿ ಲೇಬಲ್‌’ಗಳನ್ನು ಇನ್ನು ಮುಂದೆ ಪಾಲಿಯೆಸ್ಟರ್‌ ಆಧಾರಿತ ಉತ್ಪನ್ನಗಳಿಂದ ತಯಾರಿಸಿ ಅಂಟಿಸುವ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

‘ಸದ್ಯ ರಾಜ್ಯದಾದ್ಯಂತ ಮಾರಾಟವಾಗುವ ಎಲ್ಲ ಬಗೆಯ ಮದ್ಯದ ಬಾಟಲಿಗಳ ಮೇಲೆ ಪೇಪರ್‌ ಲೇಬಲ್‌ಗಳನ್ನು ಅಂಟಿಸಲಾಗುತ್ತದೆ. ಆದರೆ, ಈ ಪೇಪರ್‌ ಲೇಬಲ್‌ಗಳ ಬದಲಿಗೆ ಇನ್ನು ಮುಂದೆ ಪಾಲಿಯೆಸ್ಟರ್‌ ಆಧಾರಿತ ಉತ್ಪನ್ನಗಳಿಂದ ತಯಾರಿಸಿದ ಲೇಬಲ್‌ ಬಳಸಲು ರಾಜ್ಯ ಅಬಕಾರಿ ಇಲಾಖೆ ಮುಂದಾಗಿದೆ. ಇದು ಪರಿಸರಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಈ ಕುರಿತು ಕರೆಯಲಾಗಿರುವ ಟೆಂಡರ್‌ಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಈ ಸಂಬಂಧ ನಗರದ ವಿದ್ಯಾರಣ್ಯಪುರ ನಿವಾಸಿ ರಾಮ್‌ಪ್ರಸಾದ್‌ ಹಾಗೂ ‘ಸ್ವಚ್ಛ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ರಾಜೇಶ್‌ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಿರಿಯ ವಕೀಲ ಎಸ್‌.ಪಿ.ಶಂಕರ್‌, ‘ಸರ್ಕಾರದ ಈ ಕ್ರಮದಿಂದ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳೂ 32 ಕೋಟಿ ಲೇಬಲ್‌ಗಳು ಕಸವಾಗಿ ಪರಿವರ್ತನೆಯಾಗುತ್ತವೆ. ದುರಂತವೆಂದರೆ ಈ ರೀತಿಯ ಪಾಲಿಯೆಸ್ಟರ್‌ ಆಧಾರಿತ ಉತ್ಪನ್ನಗಳು ಮಣ್ಣಿನಲ್ಲಿ ಕರಗುವುದಿಲ್ಲ. ಇದರಿಂದ ಜನರು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಬಾಟಲ್‌ಗಳಿಗೆ ಹಾಕುವ ಲೇಬಲ್‌ಗಳನ್ನು ತೋರಿಸಿ’ ಎಂದು ಕೇಳಿತು. ಆದರೆ, ಅರ್ಜಿದಾರರ ಬಳಿ ಈ ಲೇಬಲ್‌ಗಳು ಇಲ್ಲದಿದ್ದ ಕಾರಣ ವಿಚಾರಣೆಯನ್ನು ಮಂಗಳವಾರಕ್ಕೆ (ಫೆ.20) ಮುಂದೂಡಲಾಗಿದೆ.

ಅರ್ಜಿಯಲ್ಲಿ ಏನಿದೆ ?: ಮದ್ಯದ ಬಾಟಲಿಗಳ ಮೇಲಿನ ಮುಚ್ಚಳದ ಮೇಲೆ ಅಂಟಿಸಲಾಗುವ ಲೇಬಲ್‌ಗಳನ್ನು ‘ಎಕ್ಸೈಸ್‌ ಅಡ್ಹೆಸ್ಸೀವ್‌ ಲೇಬಲ್‌ (ಇಎಎಲ್‌) ಅಥವಾ ಎಕ್ಸ್ಐಸ್‌ ಟ್ಯಾಕ್ಸ್‌ ಬ್ಯಾಂಡ್‌’ ಎಂದು ಕರೆಯಲಾಗುತ್ತದೆ.

ಇವು 25 x 75 ಎಂ.ಎಂ.ಗಾತ್ರದಲ್ಲಿ ಇರುತ್ತವೆ. ಇವುಗಳಲ್ಲಿ ತಯಾರಿಕೆಯ ಸರಣಿ ಸಂಖ್ಯೆ, 2–ಡಿ ಬಾರ್ ಕೋಡ್‌, ಕಂಪನಿಯ ಹೆಸರು ಒಳಗೊಂಡ 14 ವಿವರಗಳು ಮುದ್ರಿತವಾಗಿರುತ್ತವೆ. ಡಿಸ್ಟಿಲರಿಗಳಲ್ಲಿ ಇವುಗಳನ್ನು ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರೇ ಕೈಯ್ಯಾರೆ ಅಂಟಿಸುತ್ತಾರೆ. ಇವುಗಳನ್ನು ಬದಲು ಮಾಡುವ ಪ್ರಕ್ರಿಯೆ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
 

9 ಜನರ ಸಮಿತಿ

ಲೇಬಲ್‌ ಅಂಟಿಸುವ ಪ್ರಸಕ್ತ  ವ್ಯವಸ್ಥೆಯ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರ 2014ರಲ್ಲಿ 9 ಜನರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ದೇಶದ ವಿವಿಧ ರಾಜ್ಯಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವರದಿ ನೀಡಿದೆ. ಈ ವರದಿ ಪ್ರಕಾರ ಪಾಲಿಯೆಸ್ಟರ್‌ ಆಧಾರಿತ ಲೇಬಲ್‌ಗಳು ಪರಿಸರಕ್ಕೆ ಮಾರಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಪಾಲಿಯೆಸ್ಟರ್‌ ಲೇಬಲ್‌ಗಳನ್ನು ಬೇರೆ ಉದ್ದೇಶಕ್ಕೂ ಬಳಸಲು ಆಗುವುದಿಲ್ಲ. ಭದ್ರತೆಯ ದೃಷ್ಟಿಯಿಂದಲೂ ಇವು ಅಪಾಯಕಾರಿ. ಈ ರೀತಿಯ ಪಾಲಿಯೆಸ್ಟರ್‌ ಲೇಬಲ್‌ಗಳನ್ನು ಸುಲಭವಾಗಿ ನಕಲು ಮಾಡಬಹುದಾಗಿದ್ದು ಇದು ರಾಜ್ಯ ಸರ್ಕಾರದ ವರಮಾನಕ್ಕೆ ಕುತ್ತು ತರಲಿದೆ. ಸರ್ಕಾರ ಈ ಸಮಿತಿಯ ಶಿಫಾರಸುಗಳನ್ನು ಕಡೆಗಣಿಸಿದೆ ಎಂಬುದು ಅರ್ಜಿದಾರರ ಆಕ್ಷೇಪ.

***

ಸರ್ಕಾರದ ಈ ಕ್ರಮ ಕೋಟ್ಯಂತರ ರೂಪಾಯಿ ಹಗರಣಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
– ಎಸ್‌.ಪಿ.ಶಂಕರ್,  ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT