ಭರತೇಶ ವೈಭವ ಸಾರ್ವಕಾಲಿಕ ಕೃತಿ

ಶನಿವಾರ, ಏಪ್ರಿಲ್ 20, 2019
29 °C
ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ. ತಾರಾನಾಥ್

ಭರತೇಶ ವೈಭವ ಸಾರ್ವಕಾಲಿಕ ಕೃತಿ

Published:
Updated:
Prajavani

ಮಂಗಳೂರು: ಕೃತಿಯೊಂದು ಪೂರ್ವಕಾಲೀನ, ಸಮಕಾಲೀನ ಸಂಗತಿಗಳನ್ನು ಒಳಗೊಂಡರೆ ಸಾರ್ವಕಾಲಿಕ ಎನಿಸುತ್ತದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಸಂಶೋಧಕ ಡಾ.ಎನ್.ಎಸ್. ತಾರಾನಾಥ ಹೇಳಿದರು.

ನಗರದ ರಥಬೀದಿಯ ಡಾ.ಪಿ.ದಯಾನಂದ.ಪೈ- ಪಿ.ಸತೀಶ.ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ರತ್ನಾಕರವರ್ಣಿಯ ಭರತೇಶ ವೈಭವ ಮರು ಓದು’ ವಿಷಯದ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರತ್ನಾಕರವರ್ಣಿಯ ಭರತೇಶ ವೈಭವವು ಪೂರ್ವಕಾಲಿಕವಾಗಿ ಬಂದ ಕೃತಿಗಳ ಸಾರವನ್ನು ವಿಭಿನ್ನವಾಗಿ, ನಾವೀನ್ಯವಾಗಿ ಚಿತ್ರಿತವಾಗಿದೆ. ಇದರೊಂದಿಗೆ ಕವಿ ತನ್ನ ಕಾಲದ ಮೌಲ್ಯಗಳನ್ನು, ಚಾರಿತ್ರಿಕ ವಿಚಾರಗಳನ್ನು ಹೊಂದಿಸಿಕೊಂಡಿದ್ದಾನೆ. ಹಾಗಾಗಿ ಭರತೇಶ ವೈಭವ ಕೃತಿಯೂ ಸಾರ್ವಕಾಲಿಕ ಎನಿಸಿದೆ ಎಂದು ವಿವರಿಸಿದರು.

ಕವಿಯೊಬ್ಬ ನೂತನ ಸೃಷ್ಟಿಗೆ ಹೊರಟಾಗ ವಸ್ತು, ನಿರೂಪಣೆ ಛಂದಸ್ಸು ಎಲ್ಲವೂ ಹೊಸತಾಗಿದ್ದರೆ, ಕವಿಗೆ ಸವಾಲು ಇರುವುದಿಲ್ಲ. ಆದರೆ ರತ್ನಾಕರವರ್ಣಿ ಆರಿಸಿದ ವಸ್ತು, ಛಂದಸ್ಸು ಆಗಲೇ ಜನಪ್ರಿಯವಾಗಿತ್ತು. ಹಾಗಾಗಿ ಅದರ ನಿರೂಪಣೆಯೇ ಅವನಿಗೆ ಸವಾಲಾಗಿತ್ತು. ರತ್ನಾಕರವರ್ಣಿ ಯಾವ ಕಾಲಕ್ಕೂ ಸಲ್ಲುವವನಾಗುವುದು ಈ ವಿಶಿಷ್ಟ ಗುಣದಿಂದಲೇ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಮಾತನಾಡಿ, ಸಾಹಿತ್ಯದ ಓದು ಮನಸ್ಸನ್ನು ಹಸನಾಗಿಸುತ್ತದೆ. ಜೀವನೋತ್ಸಾಹ ಮತ್ತು ಮಾನವೀಯ ಗುಣಗಳನ್ನು ಬೆಳೆಸುತ್ತದೆ. ಇದಕ್ಕಾಗಿ ಸಾಹಿತ್ಯದ ಅಭಿರುಚಿ ಇರಬೇಕು ಎಂದರು.

ಪೀಠದ ಸಂಯೋಜಕರಾದ ಡಾ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮ ಪಿ. ಉಪಸ್ಥಿತರಿದ್ದರು. ಡಾ ನಾಗವೇಣಿ ಮಂಚಿ ವಂದಿಸಿದರು. ಪ್ರೊ. ರವಿಕುಮಾರ ಎಂ.ಪಿ. ನಿರೂಪಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಕೆ. ತಿಮ್ಮಯ್ಯ, ಮದ್ರಾಸ್‌ ವಿಶ್ವವಿದ್ಯಾಲಯದ ಡಾ. ಎಂ ರಂಗಸ್ವಾಮಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಡಾ. ಎಚ್.ಎಂ. ನಾಗಾರ್ಜುನ, ಬೆಳಗಾವಿ ವಿಶ್ವವಿದ್ಯಾಲಯದ ಡಾ.ಪಿ. ನಾಗರಾಜು, ಮುನಿರಾಜ ರೆಂಜಾಳ ಮೂಡಬಿದಿರೆ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಡಾ.ಮಾಧವ ಎಂ.ಕೆ. ವಿವಿಧ ವಿಚಾರಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !