ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷೆ ಅಸಹಿಷ್ಣುತೆಗೆ ಕಾರಣವಾಗಿಲ್ಲ: ಪ್ರೊ. ನಾವಡ ಅಭಿಮತ

ರಾಷ್ಟ್ರೀಯ ವಿಚಾರ ಸಂಕಿರಣ
Last Updated 15 ಏಪ್ರಿಲ್ 2019, 14:34 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಗರು ಬಹುಭಾಷಿಗರಾದರೂ, ಭಾಷೆ ಯಾವತ್ತೂ ಇಲ್ಲಿ ಅಸಹಿಷ್ಣುತೆಗೆ ಕಾರಣವಾಗಿಲ್ಲ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಕೊಂಕಣಿ ಅಧ್ಯಯನ ಪೀಠ, ಕಾಲೇಜಿನ ಹಿಂದಿ ಸ್ನಾತಕೋತ್ತರ ವಿಭಾಗ ಮತ್ತು ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಬೀಮಿಂಗ್ ರೈನ್‌ಬೋ’ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಾತ್ಯರು ಆಂಗ್ಲಭಾಷೆಯನ್ನು ತಂದರು. ಅದೆಷ್ಟೋ ಬುಡಕಟ್ಟು ಭಾಷೆಗಳು ಅವನತಿಯಾಗಿವೆ. ಕೊಂಕಣಿ ಚೇತರಿಸಿಕೊಳ್ಳುತ್ತಿದ್ದರೆ, ಅದರಲ್ಲಿ ಕೇಂದ್ರ ಮತ್ತು ರಾಜ್ಯ ಭಾಷಾ ಅಕಾಡೆಮಿಗಳ ಪಾತ್ರ ದೊಡ್ಡದು ಎಂದ ಅವರು, ‘ನಮ್ಮ ಮನೆ ಭಾಷೆಯನ್ನು ಬಳಸುವ ವಲಯ ವಿಸ್ತರಿಸಬೇಕು. ನಿಘಂಟುಗಳ ರಚನೆಯಾಗಬೇಕು. ಸರ್ಕಾರದ ಉಪಭಾಷೆ ಎಂಬ ನೀತಿ ಬೇಡ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್ ಕೆ. ಮಾತನಾಡಿ, ‘ಕಳೆದು ಹೋಗುವ ಅಪಾಯ ಆಂಗ್ಲಭಾಷೆಯನ್ನೂ ಬಿಟ್ಟಿಲ್ಲ. ನಾವು ಮೂಲಭಾಷೆಯನ್ನು ಕಲಿಯದೇ ಅದನ್ನು ಅನುಸರಿಸುತ್ತೇವೆ. ಕೆಲವೊಮ್ಮೆ ಭಾಷೆಯ ವಿಷಯದಲ್ಲಿ ಅವಕಾಶವಾದಿಗಳಾಗುತ್ತೇವೆ. ಆದರೆ ಮಾನವ ಸಂಬಂಧಗಳನ್ನು ಬೆಸೆಯುವ ಭಾಷೆ ರೂಢಿಯಿಂದಷ್ಟೇ ಬರುವಂಥದ್ದು. ಕೊಂಕಣಿಗೆ ಬಹುಧರ್ಮಗಳ ಹಿನ್ನೆಲೆಯೂ ಇದೆ ಎಂದು ಹೇಳಿದರು.

ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ., ಮನೆ-ಮನದಲ್ಲಿ ನೆಲೆಯೂರಬೇಕಾದ ಭಾಷೆ ಸಮಾಜವನ್ನೂ ಅರ್ಥ ಮಾಡಿಕೊಳ್ಳಬೇಕು. ಸಂಸ್ಕೃತಿಯೂ ಭಾಷೆಯ ಬೆಳವಣಿಗೆಗೆ ಕಾರಣ ಎಂದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ. ಮೈಕೆಲ್ ಸಾಂತುಮಾಯರ್, ಭಾಷೆ ಸಂಸ್ಕಾರಯುತ ಸಮಾಜ ಕಟ್ಟುತ್ತದೆ ಎಂದರು.

ಡಾ. ಗೀತಾ ಶೆಣೈ ಅವರಿಂದ ಕನ್ನಡಕ್ಕೆ ಭಾಷಾಂತರಗೊಂಡ ಮೀನಾ ಕಾಕೋಡ್ಕರ್‍ ಅವರ ಪ್ರಶಸ್ತಿ ವಿಜೇತ ಕಾದಂಬರಿ ‘ವಾಸ್ತು’ವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಉಳಿದೆರಡು ಅವಧಿಗಳಲ್ಲಿ ಗಣ್ಯರು ಭಾಷೆ ಮತ್ತು ಜಾನಪದ ಸಾಹಿತ್ಯ, ಹಾಗೂ ಭಾಷೆ-ಸಾಹಿತ್ಯ-ಸಮಾಜ ಎಂಬ ವಿಷಯಗಳ ಕುರಿತು ವಿಚಾರ ಮಂಡನೆ ನಡೆಯಿತು.

ಪ್ರಧಾನ ಭಾಷಣ ಮಾಡಿದ ಪ್ರಸಿದ್ಧ ಬರಹಗಾರ ಡಾ.ಭೂಷಣ್ ಭಾವೆ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ., ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ.ಜಯವಂತ್ ನಾಯಕ್, ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಾಗರತ್ನರಾವ್, ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ ಉಪಸ್ಥಿತರಿದ್ದರು. ಕಾನ್ಸೆಪ್ಟಾ ಫರ್ನಾಂಡಿಸ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT