ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಅರವಿಂದ ಚೊಕ್ಕಾಡಿ ಉಪನ್ಯಾಸಗಳ ಗುಚ್ಛ ಬಿಡುಗಡೆ

‘ಓದಿಸಿಕೊಂಡು ಹೋಗುವ ಪ್ರಬುದ್ಧ ಲೇಖನ’

Published:
Updated:
Prajavani

ಉಜಿರೆ: ‘ಶಿಕ್ಷಕ ಲೇಖಕ ಅರವಿಂದ ಚೊಕ್ಕಾಡಿ ಅವರ ಲೇಖನಗಳು ಸತ್ಯದ ಅನ್ವೇಷಣೆಯ ವೈಜ್ಞಾನಿಕವಾಗಿ ಪ್ರಬುದ್ಧ ಬರಹಗಳಾಗಿದ್ದು, ಕುತೂಹಲದೊಂದಿಗೆ ನಿರಾಳವಾಗಿ ಓದಿಸಿಕೊಂಡು ಹೋಗುತ್ತವೆ’ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ ಬಿ.ಎನ್. ಹೇಳಿದರು.

ಮಡಂತ್ಯಾರಿನ ಸೇಕ್ರೆಡ್ ಹಾರ್ಟ್‌ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ‘ಅರವಿಂದ ಚೊಕ್ಕಾಡಿ ಅವರ ಕೃತಿ ಉಪನ್ಯಾಸಗಳ ಗುಚ್ಛ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲೇಖನಗಳಲ್ಲಿ ಸಮಸ್ಯೆಗಳೊಂದಿಗೆ ಅವುಗಳ ಪರಿಹಾರದ ಬಗ್ಗೆಯೂ ಸಲಹೆ ನೀಡುತ್ತಾರೆ. ಅರ್ಥಶಾಸ್ತ್ರದ ನೆಲೆಯಲ್ಲಿ ಬರೆದ ಅವರ ಲೇಖನಗಳು ಪ್ರಸ್ತುತ ಸಮಾಜಕ್ಕೆ ಅನ್ವಯವಾಗಿದ್ದು ನೈಜತೆಯಿಂದ ಕೂಡಿವೆ. ಚಿಂತನ-ಮಂಥನಕ್ಕೆ ಗ್ರಾಸವಾಗಿವೆ. ಸಮಾಜಮುಖಿ ಚಿಂತನೆಯೊಂದಿಗೆ ಬರೆಯುವ ವೈಜ್ಞಾನಿಕ ಸಾಹಿತಿ ಅವರು ಮಾತನಾಡುವಾಗ ತಪ್ಪಾಗಬಹುದು, ಆದರೆ ಬರೆಯುವಾಗ ಎಂದೂ ತಪ್ಪುವುದಿಲ್ಲ’ ಎಂದು ಹೇಳಿದರು.

ಸೇಕ್ರೆಡ್ ಹಾರ್ಟ್‌ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎನ್.ಎಂ. ಜೋಸೆಫ್  ಪುಸ್ತಕದ ಬಗ್ಗೆ ಮಾತನಾಡಿ,  ಲೇಖನಗಳು ಸಮಾಜದ ಬಗ್ಗೆಯೆ ಕಾಳಜಿ ಹೊಂದಿ, ಜ್ಞಾನದ ನಿಧಿಯಾಗಿವೆ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಮಾರ್ಗದರ್ಶಿಯಾಗಿವೆ’ ಎಂದು ಅಭಿನಂದಿಸಿದರು.

ಚೊಕ್ಕಾಡಿ ಅವರ ಶಿಷ್ಯರಾದ ನಲ್ಲೂರಿನ ಜಿನೇಶ್ ಜೈನ್ ಮತ್ತು ಸುಜಾತ ಭುವನ್ ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಬೇಸಿಲ್ ವಾಸ್ ಮಾತನಾಡಿ, ‘ಪುಸ್ತಕ ಓದುವುದರಿಂದ ಅಪಾರ ಆನಂದ ಮತ್ತು ಅನುಭವ ಸಿಗುತ್ತದೆ’  ಎಂದರು.

ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸ್ವೀಕೇರಾ,  ಶ್ರುತಿ, ವೀಣಾ  ಇದ್ದರು.

Post Comments (+)