ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ದೇಶದ ರಂಗಭೂಮಿಗೆ ಯಕ್ಷಗಾನ ಹೆಮ್ಮೆ: ಪ್ರಭಾಕರ ಜೋಶಿ

ಯಕ್ಷಧ್ರುವ ಪಟ್ಲ ಸಂಭ್ರಮ: ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಫರ್ಧೆ
Published 27 ಮೇ 2023, 16:07 IST
Last Updated 27 ಮೇ 2023, 16:07 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ರಂಗಭೂಮಿಯಲ್ಲೇ ಯಕ್ಷಗಾನ ಒಂದು ಹೆಮ್ಮೆಯ ಕಲೆ. ಸಂಶೋಧನಾತ್ಮಕವಾಗಿ ನೋಡಿದಾಗಲೂ ಯಕ್ಷಗಾನ ವಿಶ್ವಪ್ರಸಿದ್ಧಿ ಪಡೆದ ಕಲೆ’ ಎಂದು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. 

‘ಯಕ್ಷಧ್ರುವ ಪಟ್ಲ ಸಂಭ್ರಮ– 2023’ರ ಅಂಗವಾಗಿ ಅಡ್ಯಾರ್‌ನಲ್ಲಿ ಪ್ರೌಢಶಾಲೆ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಯಕ್ಷಗಾನ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಗವತ ಪಟ್ಲ ಸತೀಶ ಶೆಟ್ಟಿ ಅವರ ಜನಪ್ರಿಯತೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಪಟ್ಲ ಫೌಂಡೇಷನ್ ಟ್ರಸ್ಟ್  ಮೂಲಕ ತಿಳಿಯಬಹುದು’ ಎಂದರು.

ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ‘ಯಕ್ಷಗಾನದ ಪಾರಂಪರಿಕ ಸೊಗಡನ್ನು ಉಳಿಸುವುದೇ ಯಕ್ಷಗಾನ ಸ್ಪರ್ಧೆಯ ಉದ್ದೇಶ‘ ಎಂದರು.

ಅತಿಥಿಯಾಗಿದ್ದ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ‘ಕರ್ಮತತ್ವದಲ್ಲಿ ವ್ಯಕ್ತಿ ನಂಬಿಕೆ ಇಟ್ಟಾಗ ಇಡೀ ಸಮಾಜವೇ ಅವರ ಜೊತೆ ನಿಲ್ಲುತ್ತದೆ.  ಇದಕ್ಕೆ ಯಕ್ಷಧ್ರುವ ಪಟ್ಲ ಪ್ರತಿಷ್ಠಾನವೇ ಸಾಕ್ಷಿ. ಯಕ್ಷಗಾನ ಕಲಾವಿದರು ನೆರವಿಗಾಗಿ ಸರ್ಕಾರದತ್ತ ನೋಡುವ ದಿನಗಳಿದ್ದವು. ಸರ್ಕಾರವೇ ಈ ಪ್ರತಿಷ್ಠಾನದ ಕಾರ್ಯಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ’ ಎಂದರು.

ಉದ್ಯಮಿ ಜಯರಾಮ ಶೇಖ, ಪ್ರತಿಷ್ಠಾನದ ಬಹರೇನ್‌– ಸೌದಿ ಅರೇಬಿಯಾ ಘಟಕದ ಅಧ್ಯಕ್ಷ ವಿ.ರಾಜೇಶ್ ಶೆಟ್ಟಿ ಇದ್ದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕುಂಬಳೆ ಸುಂದರ ರಾವ್ ವೇದಿಕೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪುತ್ತೂರು ಶ್ರೀಧರ ಭಂಡಾರಿ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ 12 ತಂಡಗಳು ಹಾಗೂ ಕಾಲೇಜು ವಿಭಾಗದಲ್ಲಿ 22 ತಂಡಗಳು ಭಾಗವಹಿಸಿದವು. ಸ್ಪರ್ಧೆ ಭಾನುವಾರವೂ ಮುಂದುವರಿಯಲಿದೆ.

ಪ್ರೌಢಶಾಲಾ ವಿಭಾಗದ ಸ್ಪರ್ಧೆಗೆ ಕಲಾವಿದರಾದ ವಾಟೆಪಡ್ಪು ವಿಷ್ಣು ಶರ್ಮ, ದಿವಿತ್ ಕೋಟ್ಯಾನ್ ಹಾಗೂ ಆರತಿ ಪಟ್ರಮೆ, ಕಾಲೇಜು ವಿಭಾಗದ ಸ್ಪರ್ಧೆಗೆ ಕೃಷ್ಣ ಪ್ರಕಾಶ ಉಳಿತ್ತಾಯ, ಉಬರಡ್ಕ ಉಮೇಶ್ ಶೆಟ್ಟಿ ಹಾಗೂ ಸಂಜಯ್ ಕುಮಾರ್ ಗೋಣಿಬೀಡು ಅವರು ತೀರ್ಪುಗಾರರಾಗಿದ್ದರು.

ಯಕ್ಷಗಾನ  ಹಾಗೂ ರಂಗಭೂಮಿ ಕಲಾವಿದರಿಗೆ ಯಕ್ಷ ಧ್ರುವ ಪ‍ಟ್ಲ ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ಅಪಘಾತ ಮತ್ತು ಆರೋಗ್ಯ ವಿಮೆ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಕಲಾವಿದರು ಹೆಸರು ನೋಂದಾಯಿಸಿ ವಿವರಗಳನ್ನು ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT