ಶುಕ್ರವಾರ, ಫೆಬ್ರವರಿ 28, 2020
19 °C

ಭರವಸೆಯ ಯಕ್ಷಗಾನ ಕಲಾವಿದ ಶಿವರಾಜ್ ಬಜಕೂಡ್ಲು

ಶರಧಿ ಆರ್. ಫಡ್ಕೆ ಮಾಳ Updated:

ಅಕ್ಷರ ಗಾತ್ರ : | |

Prajavani

ತುಳುನಾಡಿನ ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನವು ಇಲ್ಲಿನ ಧೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕರಾವಳಿ ಅನೇಕರಿಗೆ ಜೀವನ ನೀಡಿದ ಈ ಕಲೆಯು ಕಲಾವಿದರನ್ನು ಪೋಷಿಸುತ್ತಾ ಬಂದಿದೆ. ಕಲಾ ಆರಾಧಕರಿಗೆ ಕಲೆ ಎಂದು ಕೈ ಬಿಡುವುದಿಲ್ಲ ಎಂಬ ಮಾತಿದೆ. ತನ್ನಲ್ಲಿನ ಅಪಾರ ಆಸಕ್ತಿ ಮತ್ತು ತನ್ಮಯತೆಯಿಂದ ಯಕ್ಷರಂಗಕ್ಕೆ ಕಾಲಿಟ್ಟವರಲ್ಲಿ ಶಿವರಾಜ್ ಬಜಕೂಡ್ಲು ಕೂಡ ಒಬ್ಬರು.

ಮೂಲತಃ ಪೆರ್ಲ ಗ್ರಾಮದ ಬಜಕೂಡ್ಲು ನಿವಾಸಿ ಮೋಹನ್ ಮತ್ತು ಸುಗಂಧಿ ದಂಪತಿ ಪುತ್ರ ಶಿವರಾಜ್. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದರು. ತಮ್ಮ 4 ನೇ ವಯಸ್ಸಿನಲ್ಲಿಯೇ ಶಿಕ್ಷಣದ ಜತೆಗೆ ಸುಬ್ಬಣ್ಣಕೋಡಿ ರಾಮ ಭಟ್ಟ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ತರಬೇತಿಯನ್ನು ಪಡೆಯಲು ಆರಂಭಿಸಿದ ಇವರು, ಬಾಲ್ಯದಲ್ಲಿಯೇ ರಂಗಪ್ರವೇಶವನ್ನು ಮಾಡಿದ್ದಾರೆ. ಇವರಲ್ಲಿನ ಅದ್ಭುತ ಯಕ್ಷಗಾನ ಕಲಾವಿದನನ್ನು ಗಮನಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದತ್ತು ಸ್ವೀಕಾರ ಯೋಜನೆಯ ಸಾಂಸ್ಕೃತಿಕ ವಿಭಾಗದಲ್ಲಿ ಪದವಿ ಪೂರ್ವ ಮತ್ತು ಪದವಿಯಲ್ಲಿ ಉಚಿತ ಶಿಕ್ಷಣ ಮತ್ತು ಯಕ್ಷಗಾನ ತರಬೇತಿ ನೀಡಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರಿಗೆ ಮನೆಯ ವಾತಾವರಣವು ಯಕ್ಷಗಾನದಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟಿದೆ. 17 ವರ್ಷದಿಂದ ವೃತ್ತಿ ಮೇಳದ ಕಲಾವಿದರೊಂದಿಗೆ ರಂಗದಲ್ಲಿ ಅಭಿನಯಿಸಿ ತನ್ನ ಕುಣಿತ ಮತ್ತು ಮಾತುಗಾರಿಕೆ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಕಲಿಕೆಗೆ ಅಂತ್ಯವಿಲ್ಲವಾದ್ದರಿಂದ ಈಗಲೂ ಹಲವು ಅನುಭವೀ ಕಲಾವಿದರ ಒಡನಾಟದಿಂದ ಯಕ್ಷಗಾನದಲ್ಲಿನ ಅನೇಕ ವಿಚಾರಗಳನ್ನು ಕಲಿಯುತ್ತಿರುವ ಇವರಿಗೆ ಸುದರ್ಶನ ವಿಜಯದಲ್ಲಿನ ಸುದರ್ಶನ ಮತ್ತು ರಕ್ತರಾತ್ರಿಯಲ್ಲಿನ ಅಶ್ವತ್ಥಾಮನ ಪಾತ್ರಗಳನ್ನು ನಿರ್ವಹಿಸುವುದೆಂದರೆ ಅಚ್ಚುಮೆಚ್ಚು. ಅದನ್ನು ಹೊರತುಪಡಿಸಿ `ದೇವಿ ಮಹಾತ್ಮೆ' ಪ್ರಸಂಗದಲ್ಲಿ ಚಂಡ-ಮುಂಡ, ಯಕ್ಷ, ಸುಪಾರ್ಶ್ವಕ, ಧೂಮ್ರಾಕ್ಷ, ತರಣಿಸೇನ ಕಾಳಗದಲ್ಲಿ ತರಣಿಸೇನ, ಬಬ್ರುವಾಹನ ಪ್ರಸಂಗದಲ್ಲಿ ಬಬ್ರುವಾಹನ, ರಕ್ತ ರಾತ್ರಿ ಪ್ರಸಂಗದಲ್ಲಿ ಅಶ್ವತ್ಥಾಮ, ವೀರಾಭಿಮನ್ಯು ಪ್ರಸಂಗದಲ್ಲಿ ಅಭಿಮನ್ಯು ಹೀಗೆ 30 ಕ್ಕೂ ಹೆಚ್ಚು ಪ್ರಸಂಗಗಳಲ್ಲಿ 1000ಕ್ಕೂ ಅಧಿಕ ಪಾತ್ರಗಳನ್ನು ನಿರ್ವಹಿಸಿದ ಕೀರ್ತಿ ಶಿವರಾಜ್‍ಗೆ ಸಲ್ಲುತ್ತದೆ. ಹೀಗೆ ತನ್ನ ಜೀವನವನ್ನು ಯಕ್ಷಗಾನಕ್ಕೆ ಮೀಸಲಿಟ್ಟು, ಈ ರಂಗದಲ್ಲಿ ಉನ್ನತ ಸಾಧನೆ ಗೈಯಬೇಕೆಂಬುದು ಇವರ ಕನಸಾಗಿದೆ.

ಯಕ್ಷಗಾನದಿಂದ ಆತ್ಮಸ್ಥೈರ್ಯ

ಅಪಾರ ಆಸಕ್ತಿ, ತಾಳ್ಮೆ, ಅಭಿನಯ ಮತ್ತು ಮಾತುಗಾರಿಕೆಯನ್ನು ರೂಢಿಸಿಕೊಂಡಿದ್ದರೆ ಮಾತ್ರ ಯಕ್ಷಗಾನದಲ್ಲಿ ಮುಂದುವರೆಯಲು ಸಾಧ್ಯ.

ಈ ಕ್ಷೇತ್ರವು ಅನೇಕ ವಿಚಾರಗಳನ್ನೊಳಗೊಂಡಿದೆ. ಎಲ್ಲ ವಿಚಾರಗಳನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಿ ಅರಿತು ಅಳವಡಿಸಿಕೊಂಡಾಗ ಮಾತ್ರ ಜೀವನದ ಕಲೆಯನ್ನಾಗಿಸಲು ಸಾಧ್ಯ. ಯಕ್ಷಗಾನವು ಕಲಾವಿದನ ಜೀವನವನ್ನು ರೂಪಿಸುವುದರ ಜತೆಗೆ ಧೈರ್ಯ ತುಂಬುತ್ತದೆ ಎನ್ನುತ್ತಾರೆ ಶಿವರಾಜ್.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು