ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿಲ್ಲ ಯಕ್ಷಗಾನ: ಬಾಲ ಪ್ರತಿಭೆಗಳಿಗೆ ನಿರಾಸೆ

ಈ ಬಾರಿ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿಲ್ಲ ಯಕ್ಷಗಾನ
Last Updated 26 ಜುಲೈ 2022, 16:23 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಅಸ್ಮಿತೆಯಾಗಿರುವ ಯಕ್ಷಗಾನವನ್ನು ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಬಾರಿ ಯಕ್ಷಗಾನವನ್ನು ಕೈಬಿಟ್ಟಿರುವುದು ಹಲವಾರು ಕಲಾವಿದರು, ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ಚಿಕ್ಕ ಮಕ್ಕಳ ಪ್ರತಿಭೆ ಗುರುತಿಸಲು ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಕ್ಲಸ್ಟರ್, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯಲಿವೆ. ಕೋವಿಡ್ ಕಾರಣಕ್ಕೆ ಎರಡು ವರ್ಷ ಸ್ಥಗಿತಗೊಂಡಿದ್ದ ಸ್ಪರ್ಧೆಯನ್ನು ಈ ಬಾರಿ ನಡೆಸಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಯಕ್ಷಗಾನ ಸ್ಪರ್ಧೆಯನ್ನು ಹೊರಗಿಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಗುಂಪು ಸ್ಪರ್ಧೆ, ವೈಯಕ್ತಿಕ ಸ್ಪರ್ಧೆಗಳಲ್ಲೂ ಅನೇಕ ಬದಲಾವಣೆ ತರಲಾಗಿದೆ.

ಜಿಲ್ಲೆಯ ಯಕ್ಷಗಾನ ಸಾವಿರಾರು ಕಲಾವಿದರಿಗೆ ಬದುಕು ನೀಡಿದೆ. ಯಕ್ಷಗಾನ ಕಲಾ ಕೇಂದ್ರಗಳು ಇವೆ. ಈ ಕೇಂದ್ರಗಳಲ್ಲಿ ಬಾಲ್ಯದಿಂದಲೇ ತರಬೇತಿ ಪಡೆದಿರುವ ನೂರಾರು ಬಾಲ ಕಲಾವಿದರು ಇದ್ದಾರೆ. ಇಂತಹ ಪ್ರತಿಭೆಗಳು ಖಾಸಗಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಾರೆ. ಆದರೆ, ಶಾಲೆ ಕಾರ್ಯಕ್ರಮ, ಅದರಲ್ಲೂ ಪ್ರತಿಭಾ ಕಾರಂಜಿಯಲ್ಲಿ ಪ್ರದರ್ಶನ ನೀಡುವುದು ಮಕ್ಕಳ ಪಾಲಕರು, ಶಿಕ್ಷಕರಿಗೆ ಹೆಮ್ಮೆಯ ವಿಷಯವಾಗಿದೆ.

‘ಎಲ್ಲ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಬದುಕಿನ ಭಾಗವಾಗಿರುವ ಈ ಕಲೆಯನ್ನು ಈ ಜಿಲ್ಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೇರಿಸಲಾಗಿತ್ತು. ಆದರೆ, ಈ ವರ್ಷ ಯಕ್ಷಗಾನವನ್ನು ಯಾಕೆ ಕೈಬಿಟ್ಟಿದ್ದಾರೆ ಎಂಬುದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಪಾಲಕರು.

‘ಯಕ್ಷಗಾನವನ್ನು ಪ್ರತಿಭಾ ಕಾರಂಜಿಯಿಂದ ಕೈಬಿಟ್ಟಿರುವ ವಿಷಯ ಗಮನಕ್ಕೆ ಬಂದಿಲ್ಲ. ಯಕ್ಷಗಾನ ಕರಾವಳಿಯ ಭಾಗ. ತುಳು ಮತ್ತು ಕನ್ನಡದಲ್ಲಿ ಯಕ್ಷಗಾನ ಪ್ರಯೋಗಗಳು ಇವೆ. ಮಕ್ಕಳ ಅಮೂಲ್ಯ ಶಿಕ್ಷಣಕ್ಕೆ ದಾರಿ ಮಾಡಿಕೊಡುವ ಸಾಂಪ್ರದಾಯಿಕ ಕಲೆ ಯಕ್ಷಗಾನ. ಇದರಲ್ಲಿ ಬ್ರೇಕ್ ಡಾನ್ಸ್ ಇರುವುದಿಲ್ಲ. ಪುರಾಣ, ನೀತಿಕತೆಗಳು, ಆದರ್ಶ ಪಾತ್ರಗಳನ್ನು ಪ್ರತಿಬಿಂಬಿಸುವ ಯಕ್ಷಗಾನ ಸಮಷ್ಠಿ ಕಲೆ. ಅದರಲ್ಲಿ ಹಾಡು, ಮಾತುಗಾರಿಕೆ, ನೃತ್ಯ, ಪ್ರಸಾದನ ಸಾಮಗ್ರಿ, ಸಾಹಿತ್ಯ ಎಲ್ಲವೂ ಒಳಗೊಂಡಿವೆ. ಕುಣಿತ ಮಕ್ಕಳಿಗೆ ವ್ಯಾಯಾಮವೂ ಹೌದು. ಶಾಲೆ– ಕಾಲೇಜುಗಳಲ್ಲಿ ಯಕ್ಷಗಾನ ತರಗತಿಗಳು ನಡೆಯುತ್ತವೆ. ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆಗಳು ನಡೆಯುತ್ತವೆ. ಯಕ್ಷಗಾನಕ್ಕಾಗಿಯೇ ಪ್ರತ್ಯೇಕ ಅಕಾಡೆಮಿ ಕೂಡ ಇದೆ. ಇಂತಹ ಕಲೆಯನ್ನು ಶಿಕ್ಷಣ ಇಲಾಖೆ ಇದನ್ನು ಸ್ಪರ್ಧೆಯಿಂದ ಹೊರಗಿಟ್ಟಿರುವುದು ಸರಿಯಲ್ಲ’ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಪ್ರತಿಕ್ರಿಯಿಸಿದರು.

ಸಂಸ್ಕೃತಿಯ ಪ್ರತೀಕ: ‘ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನಕ್ಕೆ ಪ್ರತಿಭಾ ಕಾರಂಜಿಯಲ್ಲಿ ಅವಕಾಶ ಇಲ್ಲದಿರುವುದು ಕರಾವಳಿಯ ಜನತೆಗೆ ಬೇಸರದ ಸಂಗತಿ. ಉಳಿದ ಎಲ್ಲಾ ರಂಗ ಪ್ರಕಾರಗಳಿಗೆ ಹೋಲಿಸಿದರೆ ಶುದ್ಧ ಕನ್ನಡ ಉಳಿದಿರುವುದು ಯಕ್ಷಗಾನದಲ್ಲಿ ಮಾತ್ರ. ಆದ್ದರಿಂದ ಪ್ರತಿಭಾ ಕಾರಂಜಿಯಂತಹ ಸ್ಪರ್ಧಾ ಕೂಟಗಳಲ್ಲಿ ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣ ಇಲಾಖೆ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ಯಕ್ಷಗಾನಕ್ಕೆ ಅವಕಾಶ ಒದಗಿಸಬೇಕು’ ಎಂದು ಯಕ್ಷಗಾನ ಪ್ರೇಮಿ ಕೊಣಾಜೆಯ ದೇವಣ್ಣ ಶೆಟ್ಟಿ ಅಭಿಪ್ರಾಯಪಟ್ಟರು.

‘ರಾಜ್ಯದ ಕರಾವಳಿ ಜಿಲ್ಲೆಗಳು ಯಕ್ಷಗಾನದ ತವರೂರು. ಇಲ್ಲಿಯ ಹೆಚ್ಚು ಯಕ್ಷಗಾನ ಕಲಾವಿದರು, ಆಸಕ್ತರು ಇರುತ್ತಾರೆ. ಇಂತಹ ಜಿಲ್ಲೆಗಳಲ್ಲಿಯೇ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇತರ ಕಲಾ ಪ್ರಕಾರಗಳಿಗೆ ಅವಕಾಶ ಕೊಟ್ಟಿರುವಾಗ ನಮ್ಮ ನೆಲದ ಕಲೆ ಯಕ್ಷಗಾನಕ್ಕೆ ಅವಕಾಶ ನೀಡದಿರುವುದು ಖಂಡನೀಯ. ಎಳೆಯ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಆಸಕ್ತಿ ಬೆಳೆಸುವ ಪ್ರಯತ್ನ ಮಾಡಬೇಕಿದೆ’ ಎಂದು ಪಾಲಕ ರವೀನಾ ಬಂಗೇರ ಬೋಳಿಯಾರ್ ತಿಳಿಸಿದರು.

‘ಕೇರಳದಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ’

ಪ್ರತಿಭಾ ಕಾರಂಜಿಯಲ್ಲಿ ಭರತನಾಟ್ಯ, ಜಾನಪದ ನೃತ್ಯ ಮೊದಲಾದವುಗಳಿಗೆ ಅವಕಾಶಕೊಟ್ಟು ನಮ್ಮ ರಾಜ್ಯದ ಕಲೆಯಾಗಿ ಗುರುತಿಸಿಕೊಂಡಿರುವ ಯಕ್ಷಗಾನಕ್ಕೆ ಅವಕಾಶ ಸಿಗದಂತೆ ಮಾಡಿರುವುದು ಬೇಸರದ ಸಂಗತಿ. ಇಂದಿಗೂ ಸ್ಪಷ್ಟ ಕನ್ನಡ ಭಾಷೆಯ ಮಾಧ್ಯಮವಾಗಿರುವ ಯಕ್ಷಗಾನಕ್ಕೆ ನಮ್ಮ ರಾಜ್ಯದಲ್ಲೇ ಮಾನ್ಯತೆ ಸಿಗುವುದಿಲ್ಲ ಎಂದಾದರೆ ಇನ್ನು ಬೇರೆ ರಾಜ್ಯದಲ್ಲಿ ಸಿಗಬಹುದೇ? ಕೇರಳದಲ್ಲಿ ನಡೆಯುವ ಕಲೋತ್ಸವ ಸ್ಪರ್ಧೆಯಲ್ಲಿ ಇತರ ಕಲೆಗಳೊಂದಿಗೆ ಯಕ್ಷಗಾನಕ್ಕೂ ಅವಕಾಶ ಕೊಡುತ್ತಾರೆ. ಪ್ರತಿಭಾ ಕಾರಂಜಿಯಿಂದ ಯಕ್ಷಗಾನ ಹೊರಗಿಟ್ಟರೆ ಅನೇಕ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಾರೆ.
–ಕುಸುಮಾಕರ್ ಮುಡಿಪು, ಯಕ್ಷಗಾನ‌ ಕಲಾವಿದರು ಹಾಗೂ ವಿದ್ಯಾರ್ಥಿ ಪೋಷಕ

‘ಬೇಸರದ ಸಂಗತಿ’

ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ. ಈ ಕಲೆಗೆ ಮಹತ್ತರವಾದ ಸ್ಥಾನವಿದೆ. ಯಕ್ಷಗಾನದಿಂದ ಮನರಂಜನೆ ಮಾತ್ರವಲ್ಲ ನೀತಿ ಬೋಧನೆಯೂ ಸಿಗುತ್ತದೆ. ನಾಡಿನ ಶ್ರೀಮಂತ ಕಲೆಯಾಗಿರುವ ಯಕ್ಷಗಾನವನ್ನು ಈ ಬಾರಿಯ ಪ್ರತಿಭಾ ಕಾರಂಜಿಯಿಂದ ಹೊರಗಿಟ್ಟುರುವುದು ಬೇಸರದ ಸಂಗತಿ. ಯಕ್ಷಗಾನದ ವೇಷ- ವಸ್ತ್ರವಿನ್ಯಾಸಕ್ಕೆ ಹೆಚ್ಚು ವೆಚ್ಚ ತಗಲುವುದರಿಂದ ಈ ನಿರ್ಧಾರ ಮಾಡಿರಬಹುದು. ಆದರೆ, ಎಳೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಆಸಕ್ತಿ ಬೆಳೆಯಬೇಕಾದರೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಕಲೆಗೂ ಅವಕಾಶ ಕೊಡಬೇಕು. ವೇಷ– ಭೂಷಣದ ವೆಚ್ಚವನ್ನು ಶಾಲಾಡಳಿತ ಮಂಡಳಿ ಭರಿಸಿದರೆ ಉತ್ತಮ.
–ಚನಿಯಪ್ಪ ನಾಯ್ಕ್, ವಿದ್ಯಾರ್ಥಿ ಪೋಷಕ ಕೊಣಾಜೆ

ಯಕ್ಷಗಾನ ತರಬೇತಿ ಹೆಚ್ಚು ನಡೆಯುತ್ತಿವೆ. ಈಗಿನ ತಲೆಮಾರಿನ ಮಕ್ಕಳಲ್ಲಿ ಯಕ್ಷಗಾನ ಬಗ್ಗೆ ಒತ್ತಾಸೆಯಿದೆ. ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಸ್ಮರ್ಧಾತ್ಮಕ ಮನೋಭಾವ ಹೆಚ್ಚುತ್ತದೆ. ಪ್ರತಿಭಾ ಕಾರಂಜಿಯಲ್ಲಿ ಈ ಸ್ಪರ್ಧೆಯನ್ನು ಬಿಟ್ಟರೆ ಶಾಲೆಯ ಮಟ್ಟದಲ್ಲಿ ಬೆಳೆಯುವ ಯಕ್ಷಗಾನ ಪ್ರೋತ್ಸಾಹ ಕುಂಠಿತ ಆಗುತ್ತದೆ.

–ಭವ್ಯಶ್ರೀ ಕುಲ್ಕುಂದ, ಭಾಗವತರು

‘ನಿಯಮದಲ್ಲಿ ಬದಲಾವಣೆ’

ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನ ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದೆ. ರಾಜ್ಯ ಮಟ್ಟದಲ್ಲಿ ಈ ಸ್ಪರ್ಧೆ ಇಲ್ಲ. ಕೊರೊನಾ ನಂತರ ಎಲ್ಲರೂ, ಎಲ್ಲ ವ್ಯವಸ್ಥೆಯೂ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಯಕ್ಷಗಾನ ಸ್ಪರ್ಧೆ ಹೆಚ್ಚು ವೆಚ್ಚದಾಯಕ. ಹೊರೆಯಾಗಬಾರದೆಂದು ಈ ವರ್ಷಕ್ಕೆ ಯಕ್ಷಗಾನವನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ. ಪ್ರತಿಭಾ ಕಾರಂಜಿ ವೆಚ್ಚವನ್ನು ಕೂಡ ಈ ವರ್ಷಕ್ಕೆ ಕಡಿತ ಮಾಡಲಾಗಿದೆ.ಈ ವರ್ಷ ಸ್ಪರ್ಧೆಗಳ ಅನೇಕ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಡಿಡಿಪಿಐ ಸುಧಾಕರ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT