ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣಾಜೆ | ಕಲೆ–ಸಂಸ್ಕೃತಿಯ ಸತ್ಯ ಉಳಿಯಲಿ: ಡಾ.ಆಳ್ವ

ಮಂಗಳೂರು ವಿವಿ: ದಶಮಾನೋತ್ಸವ, ಯಕ್ಷಮಂಗಳ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ನೀತಿ ಬಿಡುಗಡೆ
Last Updated 19 ಮಾರ್ಚ್ 2023, 7:33 IST
ಅಕ್ಷರ ಗಾತ್ರ

ಕೊಣಾಜೆ: ವಿಜ್ಞಾನದಂತೆಯೇ ಸಾಂಸ್ಕೃತಿಕ ಬದುಕಿನಲ್ಲಿ ಸತ್ಯವಿದೆ. ಆದರೆ ಈಗ ಕಲೆಗಳ ಡೊಂಬರಾಟವಾಗುತ್ತಿದೆ. ವ್ಯಾವಹಾರಿಕತೆಯ ಮೇಲಾಟವಾಗಿದೆ. ಕಲಾವಿದರು ಪ್ರೇಕ್ಷಕವರ್ಗದಲ್ಲಿ ಭ್ರಷ್ಟಾಚಾರ ನುಸುಳಿದೆ. ಇದು ಬದಲಾಗಬೇಕು, ಕಲೆ- ಸಂಸ್ಕೃತಿಯಲ್ಲಿರುವ ಸತ್ಯ ಉಳಿಯಬೇಕು ಎಂದು ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು 11 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರೆಲ್ಲರನ್ನು ಕಲಾ ಸಂಪತ್ತಾಗಿ ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾದರೆ ಮಾತ್ರ ಭವಿಷ್ಯದಲ್ಲಿ ಕಲೆ ಉಳಿಯಬಲ್ಲದು ಎಂದು ಹೇಳಿದರು.

ಆಶೀರ್ವಚನ ನೀಡಿದ ಎಡನೀರು ಮಠದ ಸಚ್ಛಿದಾನಂದ ಭಾರತಿ ಸ್ವಾಮೀಜಿ, ‘ಕಲೆ –ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಸಾಂಸ್ಕೃತಿಕ ನೀತಿ ರೂಪಿಸಿರುವ ಮಂಗಳೂರು ವಿಶ್ವವಿದ್ಯಾಲಯದ ಇತರ ಸಂಸ್ಥೆಗಳಿಗೆ ಮಾದರಿ’ ಎಂದರು.

ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಅಧ್ಯಯನ ಕೇಂದ್ರದ 2021- 22ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯನ್ನು ಕಲಾವಿದರಾದ ಪುಂಡರೀಕಾಕ್ಷ ಉಪಾಧ್ಯಾಯ ಹಾಗೂ ದಯಾನಂದ ನಾಗೂರು ಅವರಿಗೆ, ‘ಶ್ರೀಕೃಷ್ಣ ಚರಿತ‘ ಯಕ್ಷಗಾನ ಮಹಾಕಾವ್ಯಕ್ಕಾಗಿ ಲೇಖಕ ಡಾ.ಡಿ.ಸದಾಶಿವ ಭಟ್ಟ ಯಕ್ಷಮಂಗಳ ಕೃತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯಕ್ಷಗಾನ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಡಿತ್ತಾಯ, ಅರುವ ಕೊರಗಪ್ಪ ಶೆಟ್ಟಿ, ಶಿವರಾಮ ಜೋಗಿ, ಕುಂಬ್ಳೆ ಶ್ರೀದರ ರಾವ್, ಆರ್ಗೋಡು ಮೋಹನ್ ದಾಸ ಶೆಣೈ, ಪೇತ್ರಿ ಮಾಧವ ನಾಯ್ಕ, ಬಳ್ಕೂರು ಕೃಷ್ಣ ಯಾಜಿ, ಮುಖ್ಯಪ್ರಾಣ ಕಿನ್ನಿಗೋಳಿ, ಉಬರಡ್ಕ‌ ಉಮೇಶ್ ಶೆಟ್ಟಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಡಾ.ಉಪ್ಪಂಗಳ ಶಂಕರನಾರಾಯಣ ಭಟ್, ಡಾ.ಚಂದ್ರಶೇಖರ ದಾಮ್ಲೆ ಅವರಿಗೆ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯಕ್ಷಗಾನ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಡಾ.ಗಣರಾಜ ಕುಂಬ್ಳೆ, ಡಾ. ಧನಂಜಯ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಯಕ್ಷಮಂಗಳ ತಂಡದ ಹಿರಿಯ ಕಲಾವಿದರಿಂದ ‘ಮಹಿಷವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನ‌ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿ ವಂದಿಸಿದರು. ಧನಂಜಯ ಕುಂಬ್ಳೆ, ವಿದ್ಯಾರ್ಥಿನಿ ಶ್ರೀದೇವಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT