ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಗೂಡಿನ ಕ್ಯಾನ್ಸರ್ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

ಮಂಗಳೂರು ಯೇನೆಪೋಯ ಆಸ್ಪತ್ರೆ ವೈದ್ಯರ ಸಾಧನೆ
Last Updated 26 ಸೆಪ್ಟೆಂಬರ್ 2021, 4:00 IST
ಅಕ್ಷರ ಗಾತ್ರ

ಮಂಗಳೂರು: ಮಹಿಳೆಯೊಬ್ಬರ ಎದೆಗೂಡಿನಲ್ಲಿ ಬಾಲ್ಯದಿಂದಲೂ ಇದ್ದ ಕ್ಯಾನ್ಸರ್‌ ಗಡ್ಡೆಯನ್ನು ಇಲ್ಲಿನ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ವೈದ್ಯರ ತಂಡವು, ಸತತ 13 ಗಂಟೆಗಳ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದಿದೆ ಎಂದು ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಅಕ್ಬರ್ ಜಲಾಲುದ್ದೀನ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

33 ವರ್ಷ ಪ್ರಾಯದ ಮಹಿಳೆಯೊಬ್ಬರು ಬಾಲ್ಯದಿಂದ ಬೆನ್ನು ಮೂಳೆ ಮತ್ತು ಎದೆ ಮೂಳೆ ಗಂಟು ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಕ್ಯಾನ್ಸರ್ ರೂಪ ತಳೆದು 2019ರಲ್ಲಿ ಕೊಯಮುತ್ತೂರಿನ ಗಂಗಾ ಆಸ್ಪತ್ರೆಯಲ್ಲಿ 2 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದಾದ ಬಳಿಕ ಈ ವರ್ಷ ಜನವರಿಯಲ್ಲಿ ಎಂವಿಆರ್ ಆಸ್ಪತ್ರೆಯಲ್ಲಿ ರೇಡಿಯೇಷನ್ ಚಿಕಿತ್ಸೆ ಕೂಡ ಪಡೆದಿದ್ದರು. ಆದರೆ, ಕ್ಯಾನ್ಸರ್‌ನ ಗಡ್ಡೆ ಮಾಯವಾಗದೆ ಮತ್ತೆ ಬೆಳೆದಿದ್ದು, ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಆದರೆ ಅಲ್ಲಿಯೂ ಅಸಾಧ್ಯ ಎಂದು ತಿಳಿಸಿದಾಗ ಮಹಿಳೆಯ ಪೋಷಕರು ಯೇನೆಪೋಯ ಆಸ್ಪತ್ರೆ ಸಂಪರ್ಕಿಸಿದ್ದರು ಎಂದು ಡಾ. ಅಕ್ಬರ್ ಜಲಾಲುದ್ದೀನ್ ಮಾಹಿತಿ ನೀಡಿದರು.

ರೋಗಿ 9 ಪಕ್ಕೆಲುಬುಗಳ ಜತೆಗೆ ಇರುವ ಗಂಟು ಮತ್ತು ಶ್ವಾಸಕೋಶದ ಭಾಗದ ಒಂದು ಸಣ್ಣ ತುಣುಕನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ಬಲ ಭಾಗದ ಶ್ವಾಸಕೋಶ ಮತ್ತು ಎದೆಯ ಗೋಡೆ ಭಾಗದಲ್ಲಿ ಡುಯೆಲ್ ಮೆಶ್ ಮತ್ತು ಟೈಟಾನಿಯಂ ಪ್ಲೇಟ್‌ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಗಿದೆ. ಇದು ಸವಾಲಿನ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು ಎಂದು ತಿಳಿಸಿದರು.

ಆಸ್ಪತ್ರೆ ತಜ್ಞ ವೈದ್ಯರ ತಂಡದ ಸಹಕಾರದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2.5 ಕೆ.ಜಿ ತೂಕದ ಕ್ಯಾನ್ಸರ್ ಗೆಡ್ಡೆಯನ್ನು ಎದೆಯಿಂದ ತೆಗೆಯಲಾಗಿದೆ. ಮಹಿಳೆಯ ಚೇತರಿಸಿ
ಕೊಳ್ಳುತ್ತಿದ್ದು, ಇಂತಹ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನಲ್ಲಿಯೇ ಮಾಡಬಹುದು ಎಂಬುದು ಇದರಿಂದ ಸಾಬೀತಾಗಿದೆ. ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಡಾ. ರೋಹನ್ ಶೆಟ್ಟಿ, ಡಾ.ಅಮರ್ ರಾವ್, ಡಾ.ಮುಹಮ್ಮದ್, ಡಾ.ಪವಮನ್ ಎಸ್., ಡಾ. ಅಭಿಷೇಕ್ ಶೆಟ್ಟಿ, ಡಾ. ತಿಪ್ಪೇಸ್ವಾಮಿ, ಡಾ. ಎಜಾಝ್ ಅಹಮ್ಮದ್, ಡಾ. ಸಿದ್ಧಾರ್ಥ ಬಿಸ್ವಾಸ್ ಇದ್ದರು. ಮಹಿಳೆ ತಂದೆ ಸುಕುಮಾರ್, ವೈದ್ಯ ಯೇನೆಪೋಯ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ್ ಆರ್. ಎಂ. ಸಲ್ಡಾನ ಇದ್ದರು.

ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಬಿಡುಗಡೆ

ಯೇನೆಪೋಯ ಆಸ್ಪತ್ರೆ ವತಿಯಿಂದ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ನೀಡುವ ಆರೋಗ್ಯ ಕಾರ್ಡ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್ ಆರ್.ಎಂ. ಸಲ್ಡಾನ ಹಾಗೂ ಆಸ್ಪತ್ರೆ ಇತರ ಪ್ರಮುಖರು ಸಾಂಕೇತಿಕವಾಗಿ ಕಾರ್ಡ್ ಹಸ್ತಾಂತರ ಮಾಡಿದರು.

ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಕಾರ್ಡ್ ಮೂಲಕ ಚಿಕಿತ್ಸೆ ದೊರೆಯಲಿದೆ ಎಂದು ಡಾ. ಪ್ರಕಾಶ್ ಆರ್.ಎಂ. ಸಲ್ಡಾನ ತಿಳಿಸಿದರು. ಆಸ್ಪತ್ರೆ ಪ್ರಮುಖರಾದ ವಿಜಯಾನಂದ, ಅರುಣ್‍ನಾಥ್, ಮುಹಮ್ಮದ್ ಗುತ್ತಿಗಾರು, ನೆಲ್ವಿನ್, ಸಾದ್ ಯೇನೆಪೋಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಜಗನ್ನಾಥ ಶೆಟ್ಟಿ ಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT