ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಸೇರಿದಂತೆ ಜಿಲ್ಲೆಯಾದ್ಯಂತ ಯೋಗ ದಿನಾಚರಣೆ

‘ಮಾನವೀಯ ಮೌಲ್ಯದ ಯೋಗ’
Last Updated 22 ಜೂನ್ 2022, 2:17 IST
ಅಕ್ಷರ ಗಾತ್ರ

ಉಜಿರೆ: ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ನೈತಿಕ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಸ್ವಾಮಿ ಪರಮಾನಂದಜೀ ಮಹಾರಾಜ್ ಹೇಳಿದರು.

ಧರ್ಮಸ್ಥಳದಲ್ಲಿ ಮಂಗಳವಾರ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ನಡೆದ ಎಂಟನೇ ವಿಶ್ವಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಮಾಜಸೇವೆ ಎಲ್ಲರ ಹೊಣೆಗಾರಿಕೆ. ನಗುಮೊಗದಿಂದ ನಿಸ್ವಾರ್ಥ ಸೇವೆ ಮಾಡಿ ಎಂದು ಸಲಹೆ ನೀಡಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಯೋಗದ ಮಹತ್ವದ ಬಗ್ಗೆ ನಾಲ್ಕು ಲಕ್ಷ ಜನರಲ್ಲಿ ಅರಿವು ಮೂಡಿಸಲಾಗಿದೆ.
ನಾವು ಅನೇಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡುತ್ತೇವೆ. ಆದರೆ, ಯೋಗಾಭ್ಯಾಸ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನವನ್ನು ರಫ್ತು ಮಾಡಿ ಭಾರತ ವಿಶ್ವಮಾನ್ಯವಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪಕಾರ್ಯದರ್ಶಿ ನಸೀಮಾ ಮಾತನಾಡಿ, ಯೋಗ ಬಲ್ಲವರಿಗೆ ರೋಗವಿಲ್ಲ ಎಂದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲಥೋಮಸ್ ಬಿಜಿಲಿ, ಮಾತನಾಡಿದರು.

ಬೆಂಗಳೂರಿನ ಯೋಗಪಟು ಪ್ರಜ್ವಲ್ ನಾಯಕ್‌ರಿಗೆ ‘ಯೋಗರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ, ಡಾ. ಜೋಸ್ನಾ ಮತ್ತು ಡಾ. ಅನನ್ಯಾ ಇದ್ದರು.

‘ಸೌಹಾರ್ದದ ಯೋಗ’

ಮುಡಿಪು: ನಾವೆಲ್ಲರೂ ಯೋಗದಲ್ಲಿ ತೊಡಗಿಸಿಕೊಂಡರೆ ಉತ್ತಮ ಸೌಹಾರ್ದಯುತ, ಆರೋಗ್ಯಯುತ ಸದೃಢ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನ ವಿಭಾಗ ಹಾಗೂ ವಿವಿಯ ಧರ್ಮ ನಿಧಿ ಯೋಗ ಪೀಠದ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ 1987 ರಲ್ಲೇ ಯೋಗ ವಿಜ್ಞಾನ ವಿಭಾಗವನ್ನು ಆರಂಭಿಸಲಾಗಿತ್ತು ಎಂದರು.

ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಹಣಕಾಸು ಅಧಿಕಾರಿ ಪ್ರೊ.ಜಯಪ್ಪ, ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಕೃಷ್ಣ ಶರ್ಮ ಇದ್ದರು. ಸಂಶೋಧನಾ ವಿದ್ಯಾರ್ಥಿ ಎನ್. ಕೆ. ಹಿರೇಗೌಡ ನಿರೂಪಿಸಿದರು.

ಪತ್ರಕರ್ತರಿಗೆ ಯೋಗ

ಬೆಳ್ತಂಗಡಿ: 'ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು' ಎಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನ್ ಹೇಳಿದರು

ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ 8 ದಿನಗಳ ಕಾಲ ನಡೆದ ಯೋಗ ತರಬೇತಿಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಗಣೇಶ್ ಶಿರ್ಲಾಲು ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಬಿ.ಆರ್., ಪ್ರವೀಣ್, ತರಬೇತುದಾರ ಉಲ್ಲಾಸ್ ಇದ್ದರು.

ತರಬೇತಿ ಕೇಂದ್ರ

ಮುಡಿಪು: ಇಲ್ಲಿನ ಜನ ಶಿಕ್ಷಣ ಟ್ರಸ್ಟ್‌ನಲ್ಲಿ ನಿರಂತರ ಯೋಗ ತರಬೇತಿ ಕೇಂದ್ರ ಆರಂಭಿಸುವ ಮೂಲಕ ವಿಶ್ವ ಯೋಗ ದಿನ ಆಚರಿಸಲಾಯಿತು.

ಸ್ಮೈಲ್ ಟ್ರಸ್ಟ್, ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪತಂಜಲಿ‌ ಯೋಗ ಸಮಿತಿ, ಚಿತ್ತಾರ ಬಳಗ, ಮಂಗಳ ಗಂಗೋತ್ರಿ ಲಯನ್ಸ ಕ್ಲಬ್ ಸಹಯೋಗದಲ್ಲಿ ನಡೆದ ದಿನಾಚರಣೆಗೆ ಸೌರಶಕ್ತಿ ದೀಪವನ್ನು ಬೆಳಗಿಸುವ ಮೂಲಕ ಉದ್ಯಮಿ ರಮೇಶ ಶೇಣವ ಚಾಲನೆ ನೀಡಿದರು.

ಪ್ರಮುಖರಾದ ಚಂದ್ರಹಾಸ ಕಣಂತೂರು, ಶೀನ ಶೆಟ್ಟಿ,ಟೇಲರ್ಸ್‌ ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾ, ಪಂಚಾಯತಿ ‌ಸದಸ್ಯೆಯರಾದ ಶಮೀಮ, ಝೊಹರ ಇದ್ದರು. ಸ್ಮೈಲ್ ಸ್ಕಿಲ್ ಸ್ಕೂಲ್ ನ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.

ಅಳಿಕೆಯಲ್ಲಿ ಆಚರಣೆ

ವಿಟ್ಲ: ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕ ರಘು ಮಾತನಾಡಿ, ಆರೋಗ್ಯದ ಸುಸ್ಥಿತಿಗೆ ಯೋಗವೇ ಮುಖ್ಯ ಎಂದರು.

ಸಂಸ್ಥೆಯ ಯೋಗ ಗುರು ಆನಂದ ಶೆಟ್ಟಿ ಯೋಗ ತರಬೇತಿ ನೀಡಿದರು. ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಾಲಕುಟೀರ ವಸತಿ ನಿಲಯ ಪಾಲಕ ಉದನೇಶ್ವರ ಭಟ್, ಕಾನ ಈಶ್ವರ ಭಟ್, ಸಂಸ್ಥೆಯ ಗೌರವ ಶಿಕ್ಷಕ ರತ್ನಾಕರ ರೈ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ರೂಪಿತ್ ರೈ, ಶಿಕ್ಷಕಿ ಲಕ್ಷ್ಮೀ ಇದ್ದರು.

ಯೆನೆಪೋಯ

ಮಂಗಳೂರು: ಯೆನೆಪೋಯ ಯೋಗ ಮತ್ತು ಸ್ವಾಸ್ಥ್ಯ ಕೇಂದ್ರವು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಯೋಗ ದಿನವನ್ನು ಆಚರಿಸಿತು. ಯೋಗ ತರಬೇತುದಾರ ಕುಶಾಲಪ್ಪ ಗೌಡ ತರಬೇತಿ ನೀಡಿದರು.

ಯೆನೆಪೋಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ, ಹೆಚ್ಚುವರಿ ಡೀನ್ ಡಾ. ಅಭಯ್ ನಿರ್ಗುಡೆ, ಎನ್ಎಸ್ಎಸ್ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ, ಪ್ರಾಧ್ಯಾಪಕಿ ಡಾ. ಪದ್ಮಿನಿ ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT