ಶನಿವಾರ, ಜುಲೈ 31, 2021
21 °C
ದ.ಕ. ಜಿಲ್ಲೆಯಲ್ಲಿ ಐವರಿಗೆ ಕೋವಿಡ್‌–19 ದೃಢ; ಏಳು ಜನರು ಗುಣಮುಖ

ಕೋವಿಡ್‌-19: ಮುಂಬೈನಿಂದ ಬಂದಿದ್ದ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 26 ವರ್ಷದ ಯುವಕ ಕೋವಿಡ್–19 ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್–19 ನಿಂದ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದ್ದು, ಈ ಪೈಕಿ ಒಬ್ಬರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ.

ಮೃತ ಯುವಕ ಮುಂಬೈನಿಂದ ಮೇ 28 ರಂದು ನಗರಕ್ಕೆ ಬಂದಿದ್ದು, ಜಿಲ್ಲಾಡಳಿತದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ವರ್ಗಕ್ಕೆ ಸೇರಿಸಿ, ಇದೇ 10ರವರೆಗೆ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.

11 ರಂದು ಮಧ್ಯರಾತ್ರಿ ರಕ್ತವಾಂತಿ ಮಾಡಿಕೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರ ಕೋವಿಡ್–19 ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಯುವಕನಿಗೆ ಅಲೋಪತಿ ಔಷಧ ತೆಗೆದುಕೊಳ್ಳಲು ಜಿಲ್ಲಾಡಳಿತ ಸೂಚಿಸಿತ್ತು. ಆದಾಗ್ಯೂ, ಯುವಕ ಆಯುರ್ವೇದ ಔಷಧಕ್ಕೆ ಮೊರೆ ಹೋಗಿದ್ದ. ಕಿಡ್ನಿ ಸಮಸ್ಯೆ ಇರುವುದು ಈತನಿಗೆ ಮುಂಬೈನಲ್ಲಿ ಇರುವಾಗಲೇ ಅರಿವಿತ್ತು. ಆಯುರ್ವೇದ ಔಷಧ ಪಡೆಯಲೆಂದೇ ಮಂಗಳೂರಿಗೆ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಐವರಿಗೆ ಕೋವಿಡ್–19 ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟ ಯುವಕ ಸೇರಿದಂತೆ ಭಾನುವಾರ ಐವರಿಗೆ ಕೋವಿಡ್‌–19 ದೃಢಪಟ್ಟಿದೆ. ಇದರಲ್ಲಿ ಸೌದಿಯಿಂದ ಬಂದ ಮೂವರು ಹಾಗೂ ರೋಗಿ ಸಂಖ್ಯೆ 4226 ರ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ.

ಇದೇ 10 ರಂದು ಸೌದಿ ಅರೇಬಿಯಾದಿಂದ ಬಂದು, ಹೋಟೆಲ್‌ ಕ್ವಾರಂಟೈನ್‌ನಲ್ಲಿದ್ದ 24 ಮತ್ತು 26 ವರ್ಷದ ಮಹಿಳೆಯರು ಹಾಗೂ 60 ವರ್ಷದ ವೃದ್ಧರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಕೋವಿಡ್–19 ಇರುವುದು ಖಚಿತವಾಗಿದೆ. ಇವರೆಲ್ಲರನ್ನು ವೆನ್ಲಾಕ್ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ

ವೆನ್ಲಾಕ್‌ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ 122 ಜನರ ಪೈಕಿ, ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

50 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 70 ವರ್ಷದ ವೃದ್ಧರೊಬ್ಬರು ಮಧುಮೇಹ ಹಾಗೂ ಅರ್ಬುದ ರೋಗದಿಂದ ಬಳಲುತ್ತಿದ್ದು, ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಏಳು ಜನ ಗುಣಮುಖ

ಕೋವಿಡ್‌–19 ಸೋಂಕಿನಿಂದ ಬಳಲುತ್ತಿದ್ದ ವಿಮಾನಯಾನ ಸಂಸ್ಥೆಯ 6 ಜನ ಸಿಬ್ಬಂದಿ ಸೇರಿದಂತೆ ಏಳು ಜನರು ಭಾನುವಾರ ಗುಣಮುಖರಾಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆ ಆದವರ ಸಂಖ್ಯೆ 153ಕ್ಕೆ ಏರಿದಂತಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸೇರಿದ್ದಾರೆ.

ಇದೇ 2 ರಂದು ಟರ್ಕಿಯಿಂದ ಬಂದು ಕ್ವಾರಂಟೈನಲ್ಲಿದ್ದ 24 ವರ್ಷದ ಯುವಕನಿಗೆ ಇದೇ 6 ರಂದು ಸೋಂಕು ದೃಢವಾಗಿತ್ತು. ಇದರ ಜತೆಗೆ ಇದೇ 3 ರಂದು ದುಬೈನಿಂದ ಕೇರಳಕ್ಕೆ ಬಂದು, ಅಲ್ಲಿಂದ ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ವಿಮಾನಯಾನ ಸಂಸ್ಥೆಯ ಸಿಬ್ಬಂದಿ 24 ವರ್ಷದ ಯುವಕ, 31, 33, 35, 36, 37 ಪುರುಷರು ಹಾಗೂ 35 ವರ್ಷದ ಮಹಿಳೆಗೂ ಇದೇ 6 ರಂದು ಸೋಂಕು ದೃಢವಾಗಿತ್ತು. ಇದೀಗ ಏಳು ಮಂದಿಯ ಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು