ಮಂಗಳವಾರ, ಜೂನ್ 22, 2021
23 °C
ಯುವ ವಿದ್ಯಾರ್ಥಿಗಳ ಸ್ಮಾರ್ಟ್‌ಫೋನ್‌ ದಾನ ಅಭಿಯಾನ

ಆನ್‌ಲೈನ್‌ ಕಲಿಕೆಗೆ ಬಡಮಕ್ಕಳಿಗೆ ಸೌಕರ್ಯ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಶಾಲೆ–ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆನ್‌ಲೈನ್‌ ಮೂಲಕ ಬೋಧನೆ ಶುರುವಾಗಿದೆ. ಆದರೆ, ಅನೇಕ ಬಡ ಮಕ್ಕಳು ಸ್ಮಾರ್ಟ್‌ ಫೋನ್‌ ಸೇರಿದಂತೆ ಆನ್‌ಲೈನ್‌ ತರಗತಿಗಳಿಗೆ ಅಗತ್ಯ ಸೌಕರ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಮಕ್ಕಳ ನೆರವಿಗಾಗಿ ಇಬ್ಬರು ಯುವ ವಿದ್ಯಾರ್ಥಿಗಳು ಅಭಿಯಾನವನ್ನು ಆರಂಭಿಸಿದ್ದಾರೆ.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿಯುತ್ತಿರುವ ಇಬ್ಬರು ಯುವ ವಿದ್ಯಾರ್ಥಿಗಳಾದ ಅಮನ್ ರಾಡ್ರಿಗಸ್ ಮತ್ತು ಸುಚೇತಾ ವಿಕ್ರಮ್ ಅವರು, ಬಳಸಿದ ಮೊಬೈಲ್‌ಗಳನ್ನು ಸಂಗ್ರಹಿಸಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ದಾನ ಮಾಡಲು ಆರಂಭಿಸಿದ್ದಾರೆ.

ಈ ಅಭಿಯಾನದ ಮಂಗಳೂರಿನ ಉಸ್ತುವಾರಿಯನ್ನು ಕರಂಗಲ್ಪಾಡಿಯ ಅಮನ್ ರಾಡ್ರಿಗಸ್ ವಹಿಸಿದ್ದು, ಬೆಂಗಳೂರಿನ ಉಸ್ತುವಾರಿಯನ್ನು ಸುಚೇತಾ ವಿಕ್ರಮ್ ವಹಿಸಿದ್ದಾರೆ.

‘ಸುರಕ್ಷಾ ಧಾಮ ಎನ್‌ಜಿಒ ಭಾಗವಾಗಿ ಆರಂಭ ಮಾಡಿರುವ ಈ ಅಭಿಯಾನದ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ಹಾಗೂ ಸುಚೇತಾ ವಿಕ್ರಮ್, ಉಪಯೋಗ ಮಾಡಿರುವ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಲಾಪ್‌ಟಾಪ್‌ಗಳನ್ನು ಸಂಗ್ರಹಿಸಿ ದಾನ ಮಾಡಲು ನಿರ್ಧರಿಸಿದ್ದೇವೆ’ ಎಂದು ಅಮನ್‌ ಹೇಳಿದ್ದಾರೆ.

‘ಉದ್ಯೋಗ ಕಳೆದುಕೊಂಡ ಅಥವಾ ಆರ್ಥಿಕವಾಗಿ ಸದೃಢರಲ್ಲದ ಹಲವು ಪೋಷಕರು ತಮ್ಮ ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿಗಾಗಿ ಮೊಬೈಲ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ನಾವು ಗಮನಿಸಿದ್ದೇವೆ. ಬಳಸಿದ ಸ್ಮಾರ್ಟ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ಜನರಿಂದ ಸಂಗ್ರಹಿಸಿ, ಅವುಗಳನ್ನು ಆನ್‌ಲೈನ್‌ ಕಲಿಕೆಗಾಗಿ ಮಕ್ಕಳಿಗೆ ದಾನ ಮಾಡುತ್ತೇವೆ. ಅವರು ನಿಜವಾಗಿಯೂ ಫೋನ್ ಬಳಸುತ್ತಾರೋ ಇಲ್ಲವೋ ಎಂದು ತಿಂಗಳಿಗೊಮ್ಮೆ ಪರಿಶೀಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ 4 ಫೋನ್‌ಗಳನ್ನು ಸಂಗ್ರಹಿಸಿದ್ದೇವೆ. ಇನ್ನೂ ಅದನ್ನು ದಾನ ಮಾಡಿಲ್ಲ. ಇನ್ನಷ್ಟು ಮೊಬೈಲ್‌ಗಳನ್ನು ಸಂಗ್ರಹ ಮಾಡಿ ದಾನ ಮಾಡುವ ನಿರ್ಧಾರ ಮಾಡಿದ್ದೇವೆ. ಉಜ್ವಲ್‌ ಎಂಬ ಶಾಲೆಗೆ ಅವುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ. ಈಗ ಜನರ ಪ್ರತಿಕ್ರಿಯೆ ಉತ್ತಮವಾಗಿಲ್ಲ. ಈ ಅಭಿಯಾನ ತೀರಾ ನಿಧಾನವಾಗಿ ಸಾಗುತ್ತಿದೆ’ ಎಂದು ಸುಚೇತಾ ವಿಕ್ರಮ್ ಹೇಳಿದ್ದಾರೆ.

ಬಳಸಿದ ಸ್ಮಾರ್ಟ್ ಫೋನ್‌ಗಳನ್ನು ದಾನ ಮಾಡಲು ಬಯಸುವವರು ಅಮನ್‌ ರಾಡ್ರಿಗಸ್ (8050884563– ಮಂಗಳೂರು), ಸುಚೇತಾ ವಿಕ್ರಮ್ (9980910055 –ಬೆಂಗಳೂರು) ಅವರನ್ನು ಸಂಪರ್ಕಿಸಬಹುದಾಗಿದೆ.

‘ನಾಲ್ಕು ಫೋನ್‌ ದಾನ’

‘ಒಂದು ವಾರದ ಹಿಂದೆ ನಾವು ಈ ಅಭಿಯಾನವನ್ನು ಆರಂಭಿಸಿದ್ದು, ಮಂಗಳೂರಿನಲ್ಲಿ ನಾಲ್ಕು ಫೋನ್‌ಗಳನ್ನು ದಾನ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಎರಡು ಮೊಬೈಲ್‌ಗಳನ್ನು ನಮ್ಮ ಅಪಾರ್ಟ್‌ಮೆಂಟ್‌ನ ಮನೆ ಕೆಲಸ ಮಾಡುವ ಕುಟುಂಬದ ಮಕ್ಕಳಿಗೆ ಹಾಗೂ ಇನ್ನೆರಡು ಮೊಬೈಲ್‌ಗಳನ್ನು ವೈಟ್‌ ಡವ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೊರಿನ್ ರಸ್ಕಿನಾ ಅವರ ಮೂಲಕ ವೈಟ್‌ ಡವ್ಸ್ ಸಂಸ್ಥೆಯಲ್ಲಿರುವ ಮಕ್ಕಳಿಗೆ ದಾನ ಮಾಡಲಾಗಿದೆ’ ಎಂದು ಅಮನ್‌ ತಿಳಿಸಿದ್ದಾರೆ.

‘ಮಂಗಳೂರಿನಲ್ಲಿ ಫೋನ್ ದಾನ ಮಾಡಲು ಈವರೆಗೆ 4-5 ಜನರು ಮುಂದಾಗಿದ್ದಾರೆ. ನಮ್ಮೊಂದಿಗೆ ಮುಂಬೈನ ಸಂಘಟನೆಯೊಂದು ಕೈಜೋಡಿಸಿದ್ದು, ಅಲ್ಲಿನ ಕೆಲವರು ಬಳಸಿದ ಫೋನ್‌ಗಳನ್ನು ದಾನ ಮಾಡಲು ಆಸಕ್ತಿ ತೋರಿಸಿದ್ದಾರೆ. ಶೀಘ್ರವೇ ಬೆಂಗಳೂರಿಗೆ ಅದನ್ನು ಕಳುಹಿಸಿಕೊಡಲಿದ್ದಾರೆ’ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.