ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉನ್ನತ ಹುದ್ದೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಿ’

ಬಿಲ್ಲವ ಸಮುದಾಯಕ್ಕೆ ಸಚಿವೆ ಡಾ.ಜಯಮಾಲಾ ಸಲಹೆ
Last Updated 5 ಆಗಸ್ಟ್ 2018, 13:24 IST
ಅಕ್ಷರ ಗಾತ್ರ

ಮಂಗಳೂರು: ‘ಸಮುದಾಯದ ಹಿತವನ್ನು ಕಾಯ್ದುಕೊಂಡು ಮುನ್ನಡೆಯುವುದಕ್ಕಾಗಿ ಬಿಲ್ಲವ ಸಮಾಜದ ಜನರು ತಮ್ಮ ಮಕ್ಕಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳನ್ನು ಪಡೆಯುವುದಕ್ಕೆ ಸಜ್ಜುಗೊಳಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ ಸಲಹೆ ನೀಡಿದರು.

ನಗರದ ಫಾದರ್ ಮುಲ್ಲರ್ಸ್ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ ಕೇಂದ್ರ ಸಮಿತಿಯ 31ನೇ ವಾರ್ಷಿಕ ಸಮಾವೇಶದಲ್ಲಿ ‘ಸಿಂಚನ’ ವಿಶೇಷಾಂಕ ಬಿಡುಗಡೆ ಮಾಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ನೌಕರಿ ಪಡೆಯುವುದಕ್ಕೆ ಪೂರಕವಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ತರಬೇತಿ ನೀಡುವಂತೆ ಕರೆ ನೀಡಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಬಿಲ್ಲವರ ಸ್ಥಾನ ಎಲ್ಲಿದೆ ಎಂಬ ಮರುಚಿಂತನೆ ಆಗಬೇಕಿದೆ. ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಬಿಲ್ಲವ ಯುವಕ, ಯುವತಿಯರು ಕಾಣಿಸುವಂತೆ ಆಗಬೇಕು. ಆ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕು. ಈ ದಿಸೆಯಲ್ಲಿ ಸಮುದಾಯದ ಜನರು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದರು.

‘ಒಂದು ಕಾಲಘಟ್ಟದಲ್ಲಿ ನಮ್ಮವರಿಗೆ ತೆಂಗಿನಕಾಯಿ ಚಿಪ್ಪಿನಲ್ಲಿ ಕುಡಿಯಲು ನೀರು ಕೊಡಲಾಗುತ್ತಿತ್ತು. ಹೆಣ್ಣುಮಕ್ಕಳು ರವಿಕೆ, ಮೇಲುವಸ್ತ್ರ ಧರಿಸದಂತಹ ಸ್ಥಿತಿ ಇತ್ತು. ನಾರಾಯಣ ಗುರುಗಳ ಹೋರಾಟದ ಮೂಲಕ ನಮ್ಮ ಸಮುದಾಯಕ್ಕೆ ಶಕ್ತಿ ದೊರೆಯಿತು. ಈಗ ನಾವು ಸಂಘರ್ಷ ಎದುರಿಸಿ ಬದುಕುವುದನ್ನು ಕಲಿತಿದ್ದೇವೆ. ಈ ಹಾದಿ ನಮ್ಮ ಮಕ್ಕಳನ್ನು ರಕ್ಷಿಸಿ, ಸರಿಯಾದ ಹಾದಿಯಲ್ಲಿ ಬೆಳೆಸುವುದಕ್ಕೆ ಬಳಕೆ ಆಗಬೇಕು’ ಎಂದು ಹೇಳಿದರು.

ಶಿಕ್ಷಣದ ಮೂಲಕ ಬೆಳೆಯಬೇಕು: ಅಭಿನಂದನೆ ಸ್ವೀಕರಿಸಿ, ಯುವವಾಹಿನಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಕೂಲಿಯ ಮಗ ಕೂಲಿಯೇ ಆಗಬೇಕು, ವೈದ್ಯರ ಮಗ ವೈದ್ಯನೇ ಆಗಬೇಕು ಎಂಬ ಅಲಿಖಿತ ನಿಯಮ ಹಿಂದೆ ಇತ್ತು. ಈಗ ಹಾಗೆ ಇಲ್ಲ. ಶಿಕ್ಷಣವನ್ನು ಸಾಧನವಾಗಿ ಬಳಸಿಕೊಂಡು ನಮ್ಮ ಸಮುದಾಯದ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು, ಅಧಿಕಾರಿಗಳು ಆಗಬೇಕು’ ಎಂದರು.

ಬಿಲ್ಲವ ಸಮುದಾಯ ಎರಡನೇ ತಲೆಮಾರಿನ ನಾಯಕರನ್ನು ಬೆಳೆಸುವ ಕೆಲಸ ಆರಂಭಿಸಬೇಕು. ಈಡಿಗರು ಮತ್ತು ಬಿಲ್ಲವರಿಗೆ ಪ್ರತ್ಯೇಕವಾದ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ ಮುಂದಿದೆ. ಸಮುದಾಯದ ಜನರು ಸ್ವಾಭಿಮಾನದಿಂದ ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಿಸಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.

ಬಿಲ್ಲವರು ಜಾತಿವಾದಿಗಳಲ್ಲ: ಸಮಾರಂಭ ಉದ್ಘಾಟಿಸಿದ ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಮಾತನಾಡಿ, ‘ಬಿಲ್ಲವರು ಜಾತಿವಾದಿಗಳು ಎಂಬ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ನಾವು ಸಮುದಾಯದ ಒಳಗಿನವರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸಗಳನ್ನು ಕಂಡು ಹೀಗೆ ಹೇಳಲಾಗುತ್ತಿದೆ. ಮನೆಯಿಂದಲೇ ಸುಧಾರಣೆ ಆರಂಭವಾಗಬೇಕು ಎಂಬ ಮಾತಿನಂತೆ ನಮ್ಮ ಸಮುದಾಯ ಕೆಲಸ ಮಾಡುತ್ತಿದೆ. ಬಿಲ್ಲವರು ಯಾವತ್ತೂ ಜಾತಿವಾದಿಗಳಲ್ಲ’ ಎಂದರು.

ಬಿಲ್ಲವ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಸಮುದಾಯದ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮುದಾಯದ ಜನರು ಇನ್ನೂ ಹಿಂದುಳಿದಿದ್ದಾರೆ. ಅವರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಯಾರನ್ನೂ ದ್ವೇಷಿಸದೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್.ಸಾಯಿರಾಮ್, ದಿವಾಕರ್‌ ಕನ್‌ಸ್ಟ್ರಕ್ಷನ್ಸ್ ಮಾಲೀಕ ದಿವಾಕರ್, ಚಿತ್ರನಟ ಅರವಿಂದ ಬೋಳಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT