ಹಕ್ಕಿಪಿಕ್ಕಿಗಳಿಗೆ ನಿವೇಶನ ನೀಡಲು ತುರ್ತು ಕ್ರಮ ಕೈಗೊಳ್ಳಿ: ದಸಂಸ

7

ಹಕ್ಕಿಪಿಕ್ಕಿಗಳಿಗೆ ನಿವೇಶನ ನೀಡಲು ತುರ್ತು ಕ್ರಮ ಕೈಗೊಳ್ಳಿ: ದಸಂಸ

Published:
Updated:
Deccan Herald

ಶಿವಮೊಗ್ಗ: ತಾಲ್ಲೂಕಿನ ವೀರಣ್ಣನ ಬೆನವಳ್ಳಿ ಬಳಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಮೀಸಲಿಟ್ಟಿರುವ ಭೂಮಿಯಲ್ಲಿ ನಿವೇಶನ ಸಿದ್ಧಪಡಿಸಿ, ಅರ್ಹರಿಗೆ ಹಂಚಿಕೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಒತ್ತಾಯಿಸಿದರು.

ಸರ್ಕಾರದ ಸೂಚನೆಯಂತೆ ಗ್ರಾಮದ ಸರ್ವೆ ನಂಬರ್ 78ರಲ್ಲಿ ಹಕ್ಕಿಪಿಕ್ಕಿ ಜನರಿಗಾಗಿಯೇ 4 ಎಕರೆ ಜಾಗ ಜಿಲ್ಲಾಡಳಿತ ಮಂಜೂರು ಮಾಡಿದೆ. 4 ಎಕರೆ ಜಮೀನಿನಲ್ಲಿ ಎಂಪಿಎಂ ನೀಲಗಿರಿ ಮರ ಬೆಳೆಸಿದೆ. ಸದರಿ ಜಾಗದಲ್ಲಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರದ ಕೆಲವರು ಅತಿಕ್ರಮ ಪ್ರವೇಶ ಮಾಡಿದ್ದರು. ಅಲ್ಲಿ ಗುಡಿಸಲು ಹಾಕುವ ಪ್ರಯತ್ನ ನಡೆಸಿದ್ದರು. ಹಾಗಾಗಿ, ಅರಣ್ಯ, ಕಂದಾಯ ಇಲಾಖೆ ಹಾಗೂ ಎಂಪಿಎಂ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಂಪಿಎಂ ಮರಕಡಿಯಲು, ನಿವೇಶನ ರೂಪಿಸಲು ಅನುಕೂಲವಾಗಲಿ ಎಂದು ಅಲ್ಲಿದ್ದ ಹಕ್ಕಿಪಿಕ್ಕಿ ಸಮುದಾಯದ ಹಲವರು ಶಿವಮೊಗ್ಗದ ಮಲ್ಲಿಗೇನಹಳ್ಳಿ ಬಳಿಯ ಮೈದಾನದಲ್ಲಿ ನೆಲೆಸಿದ್ದಾರೆ. ಬೇರೆಯವರು ಆ ಜಾಗವನ್ನೂ ಅತಿಕ್ರಮಿಸಲು ಹೊಂಚುಹಾಕಿದ್ದಾರೆ. ಅರ್ಹರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಹಾಗಾಗಿ, ಸಚಿವ ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಮರ ತೆರವುಗೊಳಿಸುವಂತೆ, ನಿವೇಶನ ಸಿದ್ಧಪಡಿಸಿ ಅರ್ಹರಿಗೆ ನೀಡುವಂತೆ ಸೂಚಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ಜತೆ ಚರ್ಚಿಸಿ ಮನೆ ಕಟ್ಟಿಸಿಕೊಡಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಪರಿಶಿಷ್ಟ ವಿಭಾಗದ ರಾಜ್ಯ ಸಂಚಾಲಕ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಸದರಿ ಜಾಗದಲ್ಲಿ ನಿವೇಶನ ಕೊಡಿಸುವುದಾಗಿ ಜನರಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಈ ರೀತಿಯ ವಂಚನೆ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಹಾಲೇಶಪ್ಪ, ಮುಖಂಡರಾದ ಏಳುಕೋಟಿ, ರವಿ, ರಮೇಶ್, ಪರಮೇಶ್ವರ್, ಹಕ್ಕಿಪಿಕ್ಕಿ ಸಮುದಾಯದ ರತನ್ ಜ್ಯೋತಿ, ಸಕ್ಕೂಬಾಯಿ, ಜಗ್ಗು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !