ಹೊಂದಾಣಿಕೆ ಕೊರತೆ: ದಸರಾ ಸಿದ್ಧತೆಗಳಿಗೆ ವಿಘ್ನ!

7
ದಸರಾ ಚಟವಟಿಕೆಗಳು ಆರಂಭವಾದರೂ ಬಾರದ ಸರ್ಕಾರದ ಅನುದಾನ

ಹೊಂದಾಣಿಕೆ ಕೊರತೆ: ದಸರಾ ಸಿದ್ಧತೆಗಳಿಗೆ ವಿಘ್ನ!

Published:
Updated:
Deccan Herald

ಶಿವಮೊಗ್ಗ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಈ ಬಾರಿಯ ದಸರಾ ಉತ್ಸವಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ.

ಮೈಸೂರು ಹೊರತುಪಡಿಸಿದರೆ ರಾಜ್ಯದಲ್ಲಿ ಸಾಂಪ್ರದಾಯಿಕ ದಸರಾ ಮಹೋತ್ಸವ ಅದ್ದೂರಿ ಆಚರಣೆ ತಲತಲಾಂತರದಿಂದ ನಡೆದುಕೊಂಡು ಬಂದಿರುವುದು ಶಿವಮೊಗ್ಗದಲ್ಲೇ.

ಹಲವು ದಶಕಗಳು ಕೇವಲ ಸಾಂಪ್ರದಾಯಿಕ ನೆಲೆಗಟ್ಟಿನಲ್ಲೇ ಆಡಂಬರವಿಲ್ಲದೆ ನಡೆದುಕೊಂಡು ಬಂದಿದ್ದ ದಸರಾ ಉತ್ಸವಕ್ಕೆ ವೈವಿಧ್ಯತೆಯ ಸ್ಪರ್ಶ ನೀಡಿದ್ದು ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದ ನಂತರ.

ಅದುವರೆಗೂ ಸ್ಥಳೀಯ ದಸರಾ ಮಹೋತ್ಸವ ಸಮಿತಿ ಹಾಗೂ ನಗರ ಪಾಲಿಕೆ ಸಹಯೋಗದಲ್ಲಿ ಸಾರ್ವಜನಿಕರ ಸಹಕಾರ ಪಡೆದು ಕಡಿಮೆ ಬಜೆಟ್‌ನಲ್ಲಿ ದಸರಾ ಮಹೋತ್ಸವ ಆಚರಿಸಲಾಗುತ್ತಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಮೈಸೂರು ದಸರಾಕ್ಕೆ ವಿಶೇಷ ಅನುದಾನ ನೀಡುವ ರೀತಿ, ಶಿವಮೊಗ್ಗ ದಸರಾಕ್ಕೂ ಸರ್ಕಾರದ ಅನುದಾನ ನೀಡಲು ಆದೇಶ ಹೊರಡಿಸಿದ್ದರು. ಮೊದಲ ಬಾರಿ ₹ 25 ಲಕ್ಷ ಅನುದಾನ ಸರ್ಕಾರ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಈ ಅದುದಾನದ ಮೊತ್ತ ಬರೋಬ್ಬರಿ ₹ 1 ಕೋಟಿಗೆ ಹೆಚ್ಚಿಸಲಾಯಿತು.

ವಿಜಯದಶಮಿಗೂ ಎರಡು ವಾರ ಮೊದಲೇ ದಸರಾ ಮಹೋತ್ಸವದ ವಿವಿಧ ಚಟುವಟಿಕೆಗಳು ಆರಂಭವಾಗುತ್ತವೆ. ಆಹಾರ ದಸರಾ, ಸಿನಿಮಾ ದಸರಾ, ಕ್ರೀಡಾ ದಸರಾ, ಚಲನಚಿತ್ರ ದಸರಾ, ಸಾಂಸ್ಕೃತಿಕ ದಸರಾ, ಕೃಷಿ ದಸರಾ... ಹೀಗೆ ಸಾಲುಸಾಲು ಆಚರಣೆಗಳು ನಡೆಯುತ್ತಿದೆ. ಇವೆಲ್ಲವೂ ಪ್ರತಿಬಾರಿ ಆನುಷ್ಠಾನಗೊಳ್ಳುತ್ತಿದ್ದುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯದಲ್ಲಿ. ಈ ಬಾರಿ ಅಂತಹ ಸಮನ್ವಯತೆ ಎಲ್ಲೂ ಕಾಣುತ್ತಿಲ್ಲ. ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ಪ್ರತಿನಿಧಿಗಳನ್ನು ಹೊರಗಿಟ್ಟು ಆಚರಣೆಗೆ ಸಿದ್ಧತೆ ನಡೆಯುತ್ತಿವೆ.

ಪ್ರಥಮ ಪ್ರಜೆ ಇಲ್ಲದ ದಸರಾ: ಈ ಬಾರಿಯ ದಸರಾ ಉತ್ಸವಕ್ಕೆ ನಗರದ ಪ್ರಥಮ ಪ್ರಜೆ ಮೇಯರ್ ಇಲ್ಲ. ನಗರ ಪಾಲಿಕೆಗೆ ಚುನಾವಣೆ ನಡೆದು, ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದಿದೆ. ಮೇಯರ್, ಉಪ ಮೇಯರ್ ಸ್ಥಾನದ ಮೀಸಲು ಪ್ರಕಟಿಸಲಾಗಿದೆ. ಆದರೆ, ಚುನಾವಣೆಗೆ ಸರ್ಕಾರ ಹಸಿರು ನಿಶಾನೆ ತೋರದ ಕಾರಣ ಪ್ರಥಮ ಪ್ರಜೆಯ ಆಯ್ಕೆ ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳು ಅಧಿಕೃತವಾಗಿ ಪಾಲಿಕೆ ಪ್ರವೇಶಿಸಲು ಅವಕಾಶವೇ ಸಿಕ್ಕಿಲ್ಲ! ಮೇಯರ್, ಉಪ ಮೇಯರ್, ಸದಸ್ಯರ ಸಹಕಾರ ಇಲ್ಲದೇ ಈ ಬಾರಿಯ ದಸರಾ ನಡೆಯುತ್ತಿದೆ.

ಸ್ವಾಗತ ಸಮಿತಿ ವಿವಾದ: ಈ ಬಾರಿಯ ದಸರಾ ಮಹೋತ್ಸವದ ಸ್ವಾಗತ ಸಮಿತಿಯೂ ವಿವಾದಕ್ಕೆ ಒಳಗಾಗಿತ್ತು. ಸಂಪ್ರದಾಯದಂತೆ ಸ್ಥಳೀಯ ಶಾಸಕರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಈ ಬಾರಿ ಪಾಲಿಕೆ ಸದಸ್ಯ ನಾಗರಾಜ ಕಂಕಾರಿ ಅವರಿಗೆ ಸ್ವಾಗತ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ವಿರೋಧ ವ್ಯಕ್ತವಾದ ನಂತರ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ, ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಅಧ್ಯಕ್ಷತೆ ವಹಿಸಲಾಗಿದೆ.

ಹಳೇ ಕಾರಾಗೃಹದಲ್ಲಿ ಅಂಬುಛೇದನ: ಹಳೇ ಕಾರಾಗೃಹದ 10 ಎಕರೆ ಪ್ರದೇಶದಲ್ಲಿ ಈ ಬಾರಿ ವಿಜಯ ದಶಮಿಗೆ ಸಿದ್ಧತೆ ನಡೆದಿದೆ. ಈಗಾಗಲೇ ಮೈದಾನದಲ್ಲಿ ಗಿಡಗಂಟೆ ತೆಗೆದು ಸ್ವಚ್ಛಗೊಳಿಸಲಾಗಿದೆ. ವಿನೋಬನಗರ 100 ಅಡಿ ರಸ್ತೆ–ಬೊಮ್ಮನಕಟ್ಟೆ ತಿರುವಿನಲ್ಲಿರುವ ಕಾಂಪೌಂಡ್‌ ಪಕ್ಕದ ಸ್ಥಳ ಬಳಸಿಕೊಳ್ಳಲಾಗುತ್ತಿದೆ. ಅದೇ ಸ್ಥಳದಲ್ಲೇ ಅಂಬುಛೇದನ, ರಾವಣ ಸಂಹಾರ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿವೆ. ಮಳೆ ಬಂದರೆ ಆಚರಣೆಗೆ ಅಡ್ಡಿಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !