ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5.37 ಕೋಟಿ ಕರ ವಸೂಲಿ ಬಾಕಿ

ದಾವಣಗೆರೆ ತಾಲ್ಲೂಕಿನ 152 ಹಳ್ಳಿಗಳು* ಬಾಕಿ ವೇತನ ಪಿಡಿಒಗಳಿಗೆ ಸೂಚನೆ
Last Updated 10 ಡಿಸೆಂಬರ್ 2019, 12:40 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ 152 ಹಳ್ಳಿಗಳಿಂದ ₹ 5.37 ಕೋಟಿ ಕರ ವಸೂಲಿ ಬಾಕಿ ಇದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಧಾರುಕೇಶ್ ಹೇಳಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಸಿಐಟಿಯುವತಿಯಿಂದ ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದಾವಣಗೆರೆ ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ 6ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದಿದ್ದರೂ ನಿಮಗೆ ಸಂಬಳ ನೀಡುತ್ತಿದ್ದೇವೆ. ಗ್ರಾಮ ಪಂಚಾಯಿತಿಗಳಿಂದ ಸಂಗ್ರಹವಾದ ಹಣದಲ್ಲಿ ಶೇ 10ರಷ್ಟನ್ನು ನೌಕರರಿಗೆ ಸಂಬಳ ನೀಡಲು ಸರ್ಕಾರದ ಆದೇಶ ಇದ್ದು, ಬಾಕಿ ವೇತನ ನೀಡಲು ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಮಂಗಳವಾರವೇ ಸುತ್ತೋಲೆ ಹೊರಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಗ್ರಾಮ ಪಂಚಾಯಿತಿ ನೌಕರರು ಅಂದಿನ ಕರ ಅಂದೇ ವಸೂಲಿ ಮಾಡಿದರೆ ಪ್ರತಿ ತಿಂಗಳ 5ನೇ ತಾರೀಕಿನ ಬದಲು ಒಂದನೇ ತಾರೀಕಿಗೆ ಸಂಬಳ ಬರುವಂತೆ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ನಮಗೆ ಅರ್ಥವಾಗುತ್ತವೆ. ಆರೋಗ್ಯ ಕಾರ್ಡ್‌, ವಿಮೆ ಸೇರಿ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳು ಪಂಚಾಯಿತಿ ನೌಕರರಿಗೂ ಸಿಗಬೇಕು. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಕೊಟ್ಟರೆ ಬಗೆಹರಿಸುತ್ತೇನೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ನೌಕರರಿಗೆ ಒಳ್ಳೆಯ ಅವಕಾಶಗಳಿವೆ. ಬಿಲ್‌ ಕಲೆಕ್ಟರ್, ಪಿಡಿಒ, ಕಾರ್ಯದರ್ಶಿ ಹಾಗೂ ಡಿಎಸ್‌ ಆಗಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಮಟ್ಟಕ್ಕೆ ಏರಬಹುದು. ನಿಮ್ಮ ಬೇಡಿಕೆಗಳ ಪಟ್ಟಿಯನ್ನು ನೀಡಿದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗವರು ಒಟ್ಟಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ದು ನ್ಯಾಯ ಒದಗಿಸಲು ಪ್ರಯತ್ನಿಸುತ್ತೇವೆ’ ಎಂದರು.

‘ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ಮೇಲೆ ಹಕ್ಕುಚ್ಯುತಿ ಮಂಡಿಸಲಾಗುವುದು. ಅಲ್ಲದೇ ದೂರು ದಾಖಲಿಸುತ್ತೇವೆ. ತಾಲ್ಲೂಕು ಪಂಚಾಯಿತಿ ನೌಕರರನ್ನು ಬಿಟ್ಟುಕೊಡುವುದಿಲ್ಲ. ನಿಮಗೆ ಹಲ್ಲೆಗಳಾದರೆ ಅಧಿಕಾರಿಗಳ ಗಮನಕ್ಕೆ ತನ್ನಿ. ಸಮಸ್ಯೆಯನ್ನು ಈಡೇರಿಸಲು ಕಟಿಬದ್ಧರಾಗಿದ್ದೇವೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ‘ಕೆಜಿ ಈರುಳ್ಳಿ ಬೆಲೆ ₹ 200 ಆಗಿದ್ದು, ತರಕಾರಿ ಬೆಲೆಗಳು ದುಬಾರಿಯಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಎರಡು ತಿಂಗಳಿನಿಂದ ಸಂಬಳ ನೀಡದೇ ಇದ್ದರೆ ಜೀವನ ನಡೆಸುವುದು ಕಷ್ಟ. ಗ್ರಾಮ ಪಂಚಾಯಿತಿ ಪಿಡಿಒಗಳು ನೌಕರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನೌಕರರ ಸಮಸ್ಯೆ ಬಗೆಹರಿಸಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಉಮೇಶ್ ಮಾತನಾಡಿ, ‘ಗ್ರಾಮ ಪಂಚಾಯಿತಿ ನೌಕರರಿಗೆ 10 ತಿಂಗಳಿನಿಂದ ಬಾಕಿ ವೇತನ ನೀಡಿಲ್ಲ. ಹಲವು ಬಾರಿ ಹೋರಾಟ ಮಾಡಿದರೂ ವೇತನ ಜಾರಿಯಾಗಿಲ್ಲ. ಹನಗೋಡು ಗ್ರಾಮ ಪಂಚಾಯಿತಿಯಲ್ಲಿ ವಸೂಲಾತಿ ಪ್ರಮಾಣ ಜಾಸ್ತಿ ಇದ್ದರೂ ವೇತನ ನೀಡುತ್ತಿಲ್ಲ. ಬೆಳಗೂರು ಹಾಗೂ ಕಂದಗಲ್ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿದ್ದು, ಜನಪ್ರತಿನಿಧಿಗಳ ವಿರುದ್ಧ ದೂರು ಕೊಟ್ಟರೆ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಕೆ.ಎಲ್‌. ಭಟ್‌, ಪ್ರಧಾನ ಕಾರ್ಯದರ್ಶಿ ಆರ್. ಶ್ರೀನಿವಾಸಾಚಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ಹನುಮಂತಪ್ಪ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT