ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯಕ್ಕೂ ಗೊಂದಲಗಳಿಗೂ ಬಿಡಿಸಲಾರದ ನಂಟು. ಈ ಬಾರಿ ವಿವಿ ದಿಢೀರ್ ಎಂದು ಪದವಿ ಪ್ರವೇಶದ ಶುಲ್ಕ ಏರಿಕೆ ಮಾಡುವ ಮೂಲಕ ಸುದ್ದಿಯಲ್ಲಿದೆ!
ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ‘ದಾವಣಗೆರೆ ವಿಶ್ವವಿದ್ಯಾಲಯ ನಿಧಿ’ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದುಪ್ಪಟ್ಟಾಗಿದೆ. ಇದು ಬಡ ವಿದ್ಯಾರ್ಥಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಮೊದಲೇ ಬಿ.ಎ. ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಶುಲ್ಕ ಏರಿಕೆ ಮಾಡಿದರೆ ಹೇಗೆ ಎಂಬುದು ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರ ಪ್ರಶ್ನೆ.
2013– 14ನೇ ಸಾಲಿನಲ್ಲಿ ದಾವಣಗೆರೆ ವಿವಿ ನಿಧಿಗೆ ಬಿ.ಎ.ಗೆ ₨ 700, ಬಿಕಾಂಗೆ 800 ಹಾಗೂ ಬಿಬಿಎಂಗೆ ₨ 1,200 ನಿಗದಿ ಮಾಡಲಾಗಿತ್ತು. ಅಗತ್ಯವಿದ್ದರೆ ಅಭಿವೃದ್ಧಿ ಶುಲ್ಕವನ್ನು ಶೇ 10ರಷ್ಟು ಮಾತ್ರ ಹೆಚ್ಚಿಸಬಹುದು ಎಂಬ ನಿಯಮವಿದೆ. ಆದರೆ, 2014–15ನೇ ಸಾಲಿಗೆ ಅದೇ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಬಿಎ ಕೋರ್ಸ್‌ಗೆ ₨ 1,080, ಬಿಕಾಂ ಹಾಗೂ ಬಿಬಿಎಂಗೆ ₨ 1,565ಕ್ಕೆ ಏರಿಕೆ ಮಾಡಲಾಗಿದೆ. ಈ ಶುಲ್ಕ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸೇರಲಿದೆ.
ಇದರ ಜತೆಗೆ, ಪದವಿ ಆಕಾಂಕ್ಷಿತರು ಆಯಾ ಕಾಲೇಜುಗಳಿಗೆ ಅನುಗುಣವಾಗಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ, ಗ್ರಂಥಾಲಯ ಶುಲ್ಕ,
ವೈದ್ಯಕೀಯ ತಪಾಸಣಾ, ಕ್ರೀಡಾ ಶುಲ್ಕ ಭರಿಸಬೇಕು. ಆದರೆ, ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಭಿವೃದ್ಧಿ ಶುಲ್ಕ ಹೆಚ್ಚಳ ಮಾಡಿರುವುದು ಪದವಿ ಆಕಾಂಕ್ಷಿಗಳಿಗೆ ಹೊರೆಯಾಗಿ ಪರಿಣಮಿಸಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಗೆ ದಾವಣಗೆರೆ–ಚಿತ್ರದುರ್ಗ ಕಾಲೇಜುಗಳು ಒಳಪಡುತ್ತವೆ. ಸರ್ಕಾರಿ, ಅನುದಾನ, ಅನುದಾನರಹಿತ ಕಾಲೇಜುಗಳ ಸಂಖ್ಯೆ ಸುಮಾರು 81ಕ್ಕೂ ಹೆಚ್ಚು. ಪ್ರತಿ ಕೋರ್ಸ್‌ಗೂ 60ರಿಂದ 90ರವರೆಗೆ ಪ್ರವೇಶ ಕಲ್ಪಿಸಬಹುದು. 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರವೇಶ ಪಡೆಯುತ್ತಾರೆ. ಇವರಿಂದ ಪಡೆಯುವ ಹೆಚ್ಚುವರಿ ಶುಲ್ಕವನ್ನು ನೀವೇ ಊಹಿಸಿ ಎಂಬುದು ಹೆಸರು ಹೇಳಬಯಸದ ಪ್ರಾಂಶುಪಾಲರೊಬ್ಬರ ಆರೋಪ.
‘ಮೊದಲೇ ವೃತ್ತಿಪರ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಕಾರ್ಪೊರೇಟ್ ಸಂಸ್ಕೃತಿ ಅಳವಡಿಸಿಕೊಳ್ಳದೇ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈಗೆಟುಕುವ ಕ್ರಮ ಕೈಗೊಳ್ಳಬೇಕು. ಆದರೆ, ಶುಲ್ಕ ಏರಿಕೆ, ಪದೇ ಪದೇ ಶುಲ್ಕ ಪಡೆದುಕೊಳ್ಳುವ ಪದ್ಧತಿ ಸರಿಯಲ್ಲ. ಸರ್ಕಾರ ಶುಲ್ಕ ಕಡಿತ ಮಾಡಿದ್ದರೂ ವಿವಿಗಳ ಅಭಿವೃದ್ಧಿ ಶುಲ್ಕ ಹೆಚ್ಚಾಗಿರುವುದು ದುರಂತ’ ಎಂಬ ಆರೋಪಗಳು ಕೇಳಿಬರುತ್ತಿವೆ.
ಪದೇ ಪದೇ ರಾದ್ಧಾಂತ: ಪದವಿಯ ಪರೀಕ್ಷೆ ತೆಗೆದುಕೊಂಡಾಗ ಪ್ರತಿಬಾರಿಯೂ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ ಎಂದು ಕಟ್ಟಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಅನುತ್ತೀರ್ಣಗೊಂಡರೆ ಅಂಕಪಟ್ಟಿ ಕೊಡುವುದಿಲ್ಲ. ಆತ ಮತ್ತೆ ಪರೀಕ್ಷೆ ತೆಗೆದುಕೊಂಡಾಗ ಅಂಕಪಟ್ಟಿ ಶುಲ್ಕವನ್ನು ಭರಿಸಬೇಕಾಗಿದೆ. ಉತ್ತೀರ್ಣನಾದರೆ ಮಾತ್ರ ಅಂಕಪಟ್ಟಿ ನೀಡುತ್ತಾರೆ. ಪದೇ ಪದೇ ಅಂಕಪಟ್ಟಿ ಶುಲ್ಕ ಭರಿಸಬೇಕಾಗಿರುವುದು ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಪದವಿಪ್ರಮಾಣ ಪತ್ರಕ್ಕೂ (ಕಾನ್ವಕೇಷನ್) ಇದೇ ಪದ್ಧತಿಯಿದ್ದು, ಅದನ್ನು ಬದಲಾವಣೆ ಮಾಡಬೇಕು. ಒಮ್ಮೆ ಶುಲ್ಕ ಕಟ್ಟಿಸಿಕೊಂಡ ಮೇಲೆ ಅಂಕಪಟ್ಟಿ ಶುಲ್ಕ, ಪದವಿಪ್ರಮಾಣ ಪತ್ರ ನೀಡಬೇಕು ಎಂಬುದು ಪದವೀಧರರ ಆಗ್ರಹ.
ಪ್ರತಿಕ್ರಿಯೆಗೆ ಸಿಗದ ಕುಲಪತಿ!
ವಿವಿ ನಿಧಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಮೊಬೈಲ್ ರಿಸೀವ್ ಮಾಡಲಿಲ್ಲ.
ವಾಪಸ್ ಪಡೆಯಲು ಮನವಿ
ದಾವಣಗೆರೆ– ಚಿತ್ರದುರ್ಗದ ಎಲ್ಲ ಪದವಿ ಕಾಲೇಜುಗಳ ಪ್ರಾಂಶುಪಾಲರು ವಿವಿ ಕುಲಪತಿ ಅವರನ್ನು ಭೇಟಿ ಮಾಡಿ, ಶುಲ್ಕ ಹೆಚ್ಚಳ ವಾಪಸ್ ಪಡೆಯಲು ಮನವಿ ಮಾಡಲು ನಿರ್ಧರಿಸಿದ್ದಾರೆ. ಕಳೆದ ವರ್ಷವೂ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಕಾಲೇಜುಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗಿತ್ತು. ಈ ಬಾರಿ ಸಹ ಯಾರಿಗೂ ತಿಳಿಯದಂತೆ ಶುಲ್ಕ ಹೆಚ್ಚಳ ಮಾಡಿ ಆಯಾ ಕಾಲೇಜುಗಳಿಗೆ ಆದೇಶ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.