ನೆರೆ ಸಂತ್ರಸ್ತರಿಗೆ ₹ 25 ಲಕ್ಷ ನೆರವು : ಶಾಮನೂರು ಶಿವಶಂಕರಪ್ಪ

7
ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ಸಂತ್ರಸ್ತರಿಗೆ ₹ 1 ಕೋಟಿ ನೆರವು

ನೆರೆ ಸಂತ್ರಸ್ತರಿಗೆ ₹ 25 ಲಕ್ಷ ನೆರವು : ಶಾಮನೂರು ಶಿವಶಂಕರಪ್ಪ

Published:
Updated:
Deccan Herald

ದಾವಣಗೆರೆ: ಕೇರಳ ರಾಜ್ಯದ ಹಾಗೂ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವಾಗಲು ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ₹ 1 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಗೌರವ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ನಡೆದ ಒಕ್ಕೂಟದ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

‘ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾವು– ನೋವುಗಳಾಗಿವೆ. ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸಾಕಷ್ಟು ಜನ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ನೆರವಾಗಲು ಒಕ್ಕೂಟದಿಂದಲೂ ತಲಾ ₹ 50 ಲಕ್ಷವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೀಡಲು ತೀರ್ಮಾನಿಸಿದ್ದೇವೆ. ಈ ಹಿಂದೆ ಭೂಕಂಪ, ಕಾರ್ಗಿಲ್‌ ಯುದ್ಧ ಹಾಗೂ ಪ್ರಕೃತಿ ವಿಕೋಪಗಳು ನಡೆದಾಗಲೂ ಒಕ್ಕೂಟದಿಂದ ನೆರವು ನೀಡಲಾಗಿತ್ತು’ ಎಂದು ತಿಳಿಸಿದರು.

₹ 25 ಲಕ್ಷ ನೆರವು:

ಸಂತ್ರಸ್ತರಿಗೆ ನೆರವಾಗಲು ವೈಯಕ್ತಿಕವಾಗಿ ₹ 25 ಲಕ್ಷವನ್ನು ನೀಡುವುದಾಗಿಯೂ ಶಾಮನೂರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಒಕ್ಕೂಟದ ಸದಸ್ಯ ಬ್ಯಾಂಕ್‍ಗಳಾದ ಬಾಪೂಜಿ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪ್‍ರೇಟಿವ್ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪ್‍ರೇಟಿವ್ ಬ್ಯಾಂಕ್, ಶಿವ ಕೋ- ಆಪ್‍ರೇಟಿವ್ ಬ್ಯಾಂಕ್, ಕನ್ನಿಕಾ ಪರಮೇಶ್ವರಿ ಕೋ- ಆಪ್‍ರೇಟಿವ್ ಬ್ಯಾಂಕ್, ಕನಕ ಕೋ- ಆಪ್‍ರೇಟಿವ್ ಬ್ಯಾಂಕ್, ಸಿಟಿ ಕೋ- ಆಪ್‍ರೇಟಿವ್ ಬ್ಯಾಂಕ್, ಅಂಬಾಭವಾನಿ ಕೋ- ಆಪ್‍ರೇಟಿವ್ ಬ್ಯಾಂಕ್, ಮುರುಘರಾಜೇಂದ್ರ ಕೋ- ಆಪ್‍ರೇಟಿವ್ ಬ್ಯಾಂಕ್, ಮಿಲ್ಲತ್ ಕೋ- ಆಪ್‍ರೇಟಿವ್ ಬ್ಯಾಂಕ್‌ಗಳು ತಮ್ಮ ಲಾಭಾಂಶದಿಂದ ಸಂಗ್ರಹಿಸಿ ಒಟ್ಟು ₹ 1 ಕೋಟಿ ಸಂತ್ರಸ್ತರಿಗೆ ಕೊಡಲು ತೀರ್ಮಾನಿಸಲಾಗಿದೆ.

ಮುರುಗೇಶ್‌ ನೇಮಕ: ಎನ್‍.ಎಂ.ಜೆ.ಬಿ ಆರಾಧ್ಯ ನಿಧನದಿಂದ ತೆರವಾಗಿದ್ದ ಒಕ್ಕೂಟದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎನ್‌.ಎಂ.ಜೆ.ಬಿ ಮುರುಗೇಶ್‌ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಯಿತು.

ಸಭೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಸಿ. ಉಮಾಪತಿ, ನೂತನ ಗೌರವ ಕಾರ್ಯದರ್ಶಿ ಎನ್‍.ಎಂ.ಜೆ.ಬಿ. ಮುರುಗೇಶ್, ಸದಸ್ಯರಾದ ಎಸ್.ಎಸ್. ಮಲ್ಲಿಕಾರ್ಜುನ, ಕೋಗುಂಡಿ ಬಕ್ಕೇಶಪ್ಪ, ಕಿರುವಾಡಿ ಸೋಮಶೇಖರ್, ಎನ್.ಜೆ. ಗುರುಸಿದ್ದಯ್ಯ, ಆರ್.ಎಲ್. ಪ್ರಭಾಕರ, ಕುರ್ಕಿ ಕುಬೇರಪ್ಪ, ರಮಣ್ ಲಾಲ್, ಆರ್.ಜಿ. ಶ್ರೀನಿವಾಸ ಮೂರ್ತಿ, ಸಿ. ಚಂದ್ರಶೇಖರ್, ಬಿ.ಎಲ್. ಗೌಡ, ನಿರಂಜನ್ ನಿಶಾನಿಮಠ, ಜ್ಯೋತಿ ಪ್ರಕಾಶ್, ಡಿ.ವಿ. ಆರಾಧ್ಯಮಠ, ಅಶೋಕ್ ರಾಯಬಾಗಿ, ಶಿವಶಂಕರ್, ಮಂಜುನಾಥ್, ಎಂ. ಬಸವರಾಜ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !