ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ₹100 ಕೋಟಿ ಪ್ರಸ್ತಾವ: ಬೈರತಿ ಬಸವರಾಜ

ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ
Last Updated 28 ಸೆಪ್ಟೆಂಬರ್ 2021, 3:02 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ₹ 100 ಕೋಟಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸೋಮವಾರ ನೀರ್ಥಡಿ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ನೀರ್ಥಡಿ ರಂಗನಾಥಸ್ವಾಮಿ ದೇವಸ್ಥಾನವು ಪುರಾತನ ಸಾಂಸ್ಕೃತಿಕ ವೈಭವವನ್ನು ಹೊಂದಿದೆ. ಮಹರ್ಷಿಗಳು ತಪಸ್ಸು ಮಾಡುವಾಗ ಬಂದ ನೀರನ್ನು ತಡೆದು ನಿಲ್ಲಿಸಿದ್ದರಿಂದ ನೀರ್ಥಡಿ ಎಂಬ ಹೆಸರು ಬಂದಿದೆ ಎಂಬುದು ಇಲ್ಲಿನ ಐತಿಹ್ಯ. ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಪ್ರವಾಸಿ ತಾಣವನ್ನಾಗಿಸಿ ಮಾಡಲಾಗುವುದು ಎಂದರು.

‘ನೀರ್ಥಡಿಯ ಈ ದೇವಾಲಯವನ್ನು ಐತಿಹಾಸಿಕ ಸ್ಥಳವನ್ನಾಗಿ ಗುರುತಿಸಿ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ನೀರ್ಥಡಿ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನವನ್ನು ಚಿತ್ರದುರ್ಗದ ಪಾಳೆಗಾರರು ನಿರ್ಮಿಸಿದ್ದರು. ಕಾಲ ಕಳೆದಂತೆ ದೇವಸ್ಥಾನದ ಬಹು ಭಾಗಗಳು ಶಿಥಿಲಗೊಂಡಿದೆ. ಪ್ರಾಚ್ಯವಸ್ತು ಇಲಾಖೆಗೆ ತಿಳಿಸಿ ಕಲ್ಲು ಬೀಳುವುದನ್ನು ಸರಿಪಡಿಸಲಾಯಿತು. ಇನ್ನಷ್ಟು ಕೆಲಸಗಳು ಆಗಬೇಕಿದೆ’ ಎಂದು ವಿವರಿಸಿದರು.

ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಬಹಳಷ್ಟು ಜನರು ಮಾಡಿಸಿಕೊಂಡಿಲ್ಲ. ಕೂಡಲೇ ಮಾಡಿಸಿಕೊಳ್ಳಬೇಕು. ಎಲ್ಲರೂ ಕೊರೊನಾ ನಿರೋಧಕ ಲಸಿಕೆ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ್, ತಹಶೀಲ್ದಾರ್ ಬಿ.ಎನ್. ಗಿರೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಫಾಲಾಕ್ಷಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ರೂಪಾ, ಸದಸ್ಯರಾದ ವನಜಾಕ್ಷಮ್ಮ, ಚನ್ನಬಸಮ್ಮ, ಎನ್.ಜಿ. ನಾಗರಾಜ, ಕಮಲಮ್ಮ ಹಾಗೂ ಇಂಟಕ್‌ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸವಿತಾ ಮಲ್ಲೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT