ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ ತುಂಗಭದ್ರಾ ಸೇತುವೆಗೆ ನೂರರ ಸಂಭ್ರಮ

365 ಮೀಟರ್ ಉದ್ದ, 4 ಮೀಟರ್ ಅಗಲದ ಸೇತುವೆ; ಆಕರ್ಷಕ 21 ಕರಿಕಲ್ಲಿನ ಕಮಾನುಗಳು
Last Updated 8 ಏಪ್ರಿಲ್ 2022, 6:25 IST
ಅಕ್ಷರ ಗಾತ್ರ

ಹೊನ್ನಾಳಿ: ನಗರದಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗೆ ನೂರರ ಸಂಭ್ರಮ.

ತುಂಗಭದ್ರಾ ನದಿಗೆ ₹ 3.28 ಲಕ್ಷ ವೆಚ್ಚದಲ್ಲಿ 1922ರಲ್ಲಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಯು 365 ಮೀಟರ್ ಉದ್ದ, 4 ಮೀಟರ್ ಅಗಲವಿದೆ. ಪ್ರತಿ 15 ಮೀಟರ್‌ಗೆ ಒಂದರಂತೆ ಒಟ್ಟು 21 ಕಮಾನು(ಕಣ್ಣು)ಗಳಿವೆ. ಸೇತುವೆ ನಿರ್ಮಾಣಕ್ಕೆ ಕರಿ ಕಲ್ಲುಗಳನ್ನು ಬಳಸಲಾಗಿದೆ. ಒಂದೇ ಒಂದು ಬೊಗಸೆ ಸಿಮೆಂಟ್, ಕೆ.ಜಿ. ಕಬ್ಬಿಣವನ್ನು ಬಳಸದಿರುವುದು ವಿಶೇಷ. ಅವುಗಳಿಗೆ ಬದಲಾಗಿ ಸುಣ್ಣ, ಬೆಲ್ಲ ಮತ್ತು ಮರಳನ್ನು ಗಾಣಕ್ಕೆ ಹಾಕಿ ದೊಡ್ಡ ದೊಡ್ಡ ಎತ್ತುಗಳನ್ನು ಬಳಸಿಕೊಂಡು ಗಾರೆಯನ್ನು ತಯಾರು ಮಾಡಿ ಉಪಯೋಗಿಸಲಾಗಿದೆ.

‘ಸೇತುವೆ ಮೇಲೆ 150ರಿಂದ 200 ಟನ್ ತೂಕದ ಭಾರಿ ವಾಹನಗಳು ಸಂಚರಿಸಿದರೂ ಯಾವುದೇ ತೊಂದರೆಯಾಗಿಲ್ಲ. ಅಷ್ಟು ಗಟ್ಟಿಮುಟ್ಟಾಗಿದೆ. ಆ ಹೊತ್ತಿನ ತಂತ್ರಜ್ಞರು, ಎಂಜಿನಿಯರ್‌ಗಳು ಹಾಗೂ ಕೆಲಸಗಾರರು ಎಷ್ಟರಮಟ್ಟಿಗೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದಕ್ಕೆ ಸೇತುವೆ ಗಟ್ಟಿತನವೇ ಸಾಕ್ಷಿ. ಸೇತುವೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಉದ್ದನೆಯ ಹಾಸುಗಲ್ಲುಗಳು ಅಲ್ಲಲ್ಲಿ ಸರಿದಿತ್ತು. ಅದನ್ನು ಸರಿಪಡಿಸಲಾಗಿದೆ’ ಎನ್ನುತ್ತಾರೆ ಈ ಭಾಗದ ಗೊಲ್ಲರಹಳ್ಳಿ ಪಟೇಲರಾದ ವರದರಾಜಪ್ಪ ಗೌಡ್ರು.

‘ಆಗಿನ ಮೈಸೂರು ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗವನ್ನು ಸಂಪರ್ಕಿಸಲು ಸೇತುವೆ ನಿರ್ಮಾಣ ಅಗತ್ಯವಿತ್ತು. ಅದಕ್ಕೂ ಮುನ್ನ ಈ ಭಾಗಕ್ಕೆ ಮರಳು ದಿಬ್ಬ ಎಂದು ಕರೆಯಲಾಗುತ್ತಿತ್ತು. ದಕ್ಷಿಣ ಭಾಗದ ಕೈಗಾರಿಕೆಗಳಿಗೆ, ವಿದ್ಯುತ್ ಸ್ಥಾವರಗಳಿಗೆ ಈ ಸೇತುವೆ ಮೂಲಕವೇ ಸಾಮಾನುಗಳನ್ನು ಸಾಗಿಸಲಾಗುತ್ತಿತ್ತು. ರಾಜ್ಯದಲ್ಲಿ ಅತಿ ಉದ್ದನೆಯ ಸೇತುವೆ ಆ ಕಾಲದಲ್ಲಿ ಯಾವುದಾದರೂ ನಿರ್ಮಾಣವಾಗಿತ್ತು ಎಂದಾದರೆ ಅದು ಹೊನ್ನಾಳಿಯ ತುಂಗಭದ್ರಾ ಸೇತುವೆ’ ಎನ್ನುತ್ತಾರೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ.

ಸೇತುವೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇದರ ಕೌತುಕದ ವಿಷಯಗಳನ್ನು ಹಂಚಿಕೊಳ್ಳುವ ಮತ್ತು ಅದರ ಘನತೆ ಸಾರುವ ಸಲುವಾಗಿ ಶತಮಾನೋತ್ಸವ ಸಂಭ್ರಮ ಆಚರಿಸಲು ಹೊನ್ನಾಳಿಯ ನಿವೃತ್ತ ಎಂಜಿನಿಯರ್ ಆನಂದ್‍ಕುಮಾರ್ ಅಧ್ಯಕ್ಷತೆಯ ಶತಮಾನೋತ್ಸವ ಸಮಿತಿ ಮುಂದಾಗಿದೆ. ಶಿವಮೊಗ್ಗದ ನುರಿತ ಎಂಜಿನಿಯರ್‌ಗಳ ತಂಡವನ್ನು ಕರೆಯಿಸಿ ಅಧ್ಯಯನ ನಡೆಸಲಾಗುತ್ತಿದೆ. ಸೇತುವೆಯ ನಿರ್ವಹಣೆ ಸರಿಯಾಗಿದ್ದರೆ ಇನ್ನೂ ನೂರು ಕಾಲ ಭದ್ರವಾಗಿರುತ್ತದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ತಾಂತ್ರಿಕ ಸಲಹೆ ಪಡೆದು ಸುಧಾರಣೆಯತ್ತ ಹೆಜ್ಜೆ ಇಡಬೇಕಿದೆ.

ಮರಳುಗಾರಿಕೆಗೆ ತಡೆಯೊಡ್ಡಲು ಆಗ್ರಹ

ಸೇತುವೆಯ ಅಡಿಪಾಯದ ಸುತ್ತಮುತ್ತ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಮರಳುಗಾರಿಕೆ ನಡೆಯುತ್ತಿದೆ. ಆದರೂ ತಾಲ್ಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ರಾಜಧನ ಕಳ್ಳ ಕಾಕರ ಪಾಲಾಗುತ್ತಿದೆ. ನದಿಯ ಒಡಲನ್ನು ಬಸಿದು ಮರಳು ಹೆಕ್ಕಿ ತೆಗೆಯುತ್ತಿರುವುದರಿಂದ ನದಿಯ ಉದ್ದಗಲಕ್ಕೂ ಬೃಹತ್ ಗಾತ್ರದ ಕಂದಕಗಳು ನಿರ್ಮಾಣವಾಗಿವೆ. ಸೇತುವೆ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಕೋಟೆಮಲ್ಲೂರು ಗ್ರಾಮದ ಮನೋಜ್‌ಕುಮಾರ್‌.

ಅರಳಿ ಗಿಡಗಳ ತೆರವಿಗೆ ಮನವಿ

ಸೇತುವೆಯ ಉದ್ದಕ್ಕೂ ಅರಳಿ ಗಿಡಗಳು ಸಾಲಾಗಿ ಬೆಳೆದಿವೆ. ಇದನ್ನು ಲೋಕೋಪಯೋಗಿ ಎಂಜಿನಿಯರ್‌ಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸೇತುವೆ ಎತ್ತರವನ್ನು ಕನಿಷ್ಠ ಒಂದು ಅಡಿ ಎತ್ತರಿಸಬೇಕು. ಮಳೆ ನೀರು ಸರಿದು ಹೋಗಲು ನಿರ್ಮಿಸಿದ್ದ ಹೋಲ್‌ಗಳನ್ನು ಮುಚ್ಚಿರುವುದನ್ನು ಸರಿಪಡಿಸಬೇಕು ಎಂದು ಮನವಿ ಮಾಡುತ್ತಾರೆ ಗೊಲ್ಲರಹಳ್ಳಿ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT