ಮಂಗಳವಾರ, ಫೆಬ್ರವರಿ 18, 2020
23 °C
ದೀನ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ

ಉದ್ಯೋಗ ಮೇಳ: 103 ಮಂದಿಗೆ ಸ್ಥಳದಲ್ಲೇ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಉದ್ಯೋಗಮೇಳದಲ್ಲಿ 103 ಮಂದಿಗೆ ಸ್ಥಳದಲ್ಲೇ ಉದ್ಯೋಗಕ್ಕೆ ನೇಮಕಾತಿ ಪತ್ರ ನೀಡಲಾಯಿತು.

‘72 ಪುರುಷರು ಹಾಗೂ 31 ಮಹಿಳೆಯರಿಗೆ ಉದ್ಯೋಗ ನೀಡಿದ್ದು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೇಳಗಾವಿ, ಹಾಸನ ಹಾಗೂ ದಾವಣಗೆರೆ ಸೇರಿ ಹಲವು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. 214 ಪುರುಷರು ಹಾಗೂ 144 ಮಹಿಳೆಯರನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಿದ್ದು, ಅವರಿಗೆ ಸಂದರ್ಶನದ ನಂತರ ಉದ್ಯೋಗ ಸಿಗಲಿದೆ’ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಡಿ. ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್‌.ಎ.ರವೀಂದ್ರನಾಥ್ ‘ಉದ್ಯೋಗ ಮೇಳದಿಂದ ಅರ್ಹ ಆಕಾಂಕ್ಷಿಗಳಿಗೆ ಉದ್ಯೋಗ ಅವಕಾಶಗಳು ಲಭ್ಯವಾಗುವುದರಿಂದ ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರವಲ್ಲದೆ, ಎರಡು ಮೂರು ಬಾರಿ ಉದ್ಯೋಗ ಮೇಳ ಆಯೋಜನೆಗೊಳ್ಳಬೇಕು. ಇದರಿಂದ ಅವಕಾಶಗಳು ಹೆಚ್ಚಾಗುತ್ತವೆ’ ಎಂದರು.

‘ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಹಾಗೂ ವಿದ್ಯಾಭ್ಯಾಸ ಮುಗಿಸಿದ ಮೇಲೆ ಮನೆಯಲ್ಲೇ ಕೂತು ಕಾಲಹರಣ ಮಾಡದೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇಂಥಹ ಉದ್ಯೋಗ ಮೇಳಗಳ ಅವಶ್ಯಕತೆಯಿದೆ. ಎಲ್ಲಾ ಅಭ್ಯರ್ಥಿಗಳು ಬೇರೆ ನಗರಗಳಿಗೆ ಹೋಗಿ ಸಂದರ್ಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ವಿವಿಧ ಕಂಪನಿಗಳು ಹಾಗಾಗಿ ಒಂದೆಡೆ ಸೇರಿ ನಡೆಸುವ ಮೇಳವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಉನ್ನತಿ ಸಾಧಿಸಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗನಗೌಡ್ರು ಮಾತನಾಡಿ, ‘ಯುವಜನತೆ ಸರ್ಕಾರದ ಹುದ್ದೆಗಳನ್ನೇ ನಂಬಿ ಕುಳಿತರೆ ಪ್ರಯೋಜನವಿಲ್ಲ. ಇಂದು ಉದ್ಯೋಗಳು ಲಭ್ಯವಿದ್ದರೂ ಅದನ್ನು ನಿಷ್ಠೆಯಿಂದ ಮಾಡುವ ಮನಸ್ಥಿತಿ ಕಡಿಮೆಯಾಗುತ್ತಿದೆ. ವಿದ್ಯಾಭ್ಯಾಸಕ್ಕೆ ಪೂರಕವಾದ ಉದ್ಯೋಗ ಬೇಕೆನ್ನುವ ಧೋರಣೆಯೂ ಇದಕ್ಕೆ ಕಾರಣವಾಗಿರಬಹುದು. ಅಂಥವರು ಧೀರೂಭಾಯಿ ಅಂಬಾನಿ ಅಂಥವರಿಂದ ಸ್ಫೂರ್ತಿ ಪಡೆಯಬೇಕು. ಶಿಕ್ಷಣ, ಕ್ರೀಡೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯಲು ಪ್ರಯತ್ನಿಸಿ’ ಎಂದು ತಿಳಿಸಿದರು.

ಪ್ರೊ. ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುರುಗೇಶ್, ಮಂಜಣ್ಣ, ಮಾಜಿ ಉಪಾಧ್ಯಕ್ಷ ಮುರುಳಸಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯಿತಿ ಸಿಇಒ ದಾರುಕೇಶ್ ಬಿ.ಎಂ. ಸ್ವಾಗತಿಸಿದರು. ಉದ್ಯೋಗ ಮಾಹಿತಿ ಕೋಶದ ಸಂಚಾಲಕರಾದ ವೆಂಕಟೇಶಬಾಬು ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಎನ್.ಆರ್ ರಾಜಮೋಹನ್ ಕಾರ್ಯಕ್ರಮ ನಿರೂಪಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ದಾವಣಗೆರೆ ಉದ್ಯೋಗ ವಿನಿಮಯ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ದೀನ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು