ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಶ್ರೀ ಧರಣಿಗೆ 130 ದಿನ: ಉಗ್ರ ಹೋರಾಟಕ್ಕೆ ನಿರ್ಧಾರ

ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಹೋರಾಟ ಕ್ರಿಯಾಸಮಿತಿ ಸಭೆ
Last Updated 23 ಜೂನ್ 2022, 2:19 IST
ಅಕ್ಷರ ಗಾತ್ರ

ಹರಿಹರ: ನಿವೃತ್ತ ನ್ಯಾ. ನಾಗಮೋಹನದಾಸ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ 130 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ ಹೇಳಿದರು.

ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಮಠದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೋರಾಟ ಕ್ರಿಯಾಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸಂವಿಧಾನದ ಆಶಯದಂತೆ ಪರಿಶಿಷ್ಟಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ನಾಗಮೋಹನದಾಸ್ ಆಯೋಗ ವರದಿ ನೀಡಿದೆ. ವರದಿ ಜಾರಿಗಾಗಿ ಸ್ವಾಮೀಜಿ ನೇತೃತ್ವದಲ್ಲಿ ಹಲವು ರೀತಿಯ ಹೋರಾಟವನ್ನು ಹಂತ, ಹಂತವಾಗಿ ನಡೆಸಲಾಗಿದೆ.130 ದಿನಗಳಿಂದ ಸ್ವಾಮೀಜಿ ಧರಣಿಯನ್ನೂ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸೇರಿ ಸಚಿವರು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಖಂಡಿಸಿ ಉಗ್ರ ಹೋರಾಟ ಮಾಡುವ ಮೂಲಕ ನ್ಯಾಯ ಪಡೆಯುವುದೊಂದೇ ದಾರಿ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಭರವಸೆ ನೀಡುತ್ತಲೇ ಕಾಲ ತಳ್ಳುತ್ತಿದ್ದಾರೆ. ಈ ಕುರಿತು ವಿವಿಧ ಆಯೋಗ, ಸಮಿತಿಗಳು ವರದಿಯನ್ನೂ ನೀಡಿವೆ. ಆದರೂ ಕೂಡ ಸ್ಪಂದಿಸದಿರುವುದು ಸಾಮಾಜಿಕ ನ್ಯಾಯವನ್ನು ನಿರಾಕರಿಸಿದಂತಾಗಿದೆ. ಸಮಾಜದಹೋರಾಟಕ್ಕೆ ಸಂಘಟನೆಯಿಂದ ಬೆಂಬಲ ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.

ನಾಯಕ ಸಮಾಜದ ಗ್ರಾಮಾಂತರ ಘಟಕ ಅಧ್ಯಕ್ಷ ಜಿಗಳಿ ರಂಗಪ್ಪ, ನಗರ ಘಟಕ ಅಧ್ಯಕ್ಷ ಕೆ.ಬಿ.ಮಂಜುನಾಥ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಗರಸಭೆ ಸದಸ್ಯ ದಿನೇಶ್ ಬಾಬು, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ, ಮುಖಂಡರಾದ ಜಿಗಳಿ ಪ್ರಕಾಶ್, ಎಚ್.ಟಿ.ರಂಗನಾಥ್, ಉಕ್ಕಡಗಾತ್ರಿಯ ಪ್ರಕಾಶ್, ಮಕರಿ ಪಾಲಾಕ್ಷಪ್ಪ, ರಾಜು ಗಂಗಾಧರ್, ರಮೇಸ್, ಭರತ್, ಕೊಕ್ಕನೂರಿನ ಡಿ.ಸೋಮಶೇಖರ್, ಎಚ್.ನಾಗರಾಜ್, ಗದಿಗೆಪ್ಪ, ಭೀಮಣ್ಣ ರಾಜನಹಳ್ಳಿ, ವಾಸನದ ಮಹಾಂತೇಶ್, ರಾಮತೀರ್ಥ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT