ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆಗೆ 16 ತಂಡ ರಚನೆ

ಸಮರ್ಥವಾಗಿ ವಿಪತ್ತು ನಿರ್ವಹಣೆಗೆ ಶ್ರಮಿಸಲು ಜಿಲ್ಲಾಧಿಕಾರಿ ಸೂಚನೆ
Last Updated 4 ಏಪ್ರಿಲ್ 2020, 14:14 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ವಿಪತ್ತು ನಿರ್ವಹಣಾ ಸಮಿತಿಯು 16 ತಂಡಗಳನ್ನು ರಚಿಸಿದೆ. ಈ ತಂಡಗಳು ಕ್ರಿಯಾಶೀಲವಾಗಿ ವಿಪತ್ತು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಪರ್ಕ ಪತ್ತೆ ಜಾಡು ತಂಡ, ಕ್ವಾರೈಂಟಿನ್ ನಿರ್ವಹಣಾ ತಂಡ, ಅವಶ್ಯಕ ಸಾಮಗ್ರಿ ಪೂರೈಕೆ ತಂಡ, ಬಯೋ ಮೆಡಿಕಲ್ ನಿರ್ವಹಣಾ ಹಾಗೂ ಮೃತದೇಹ ನಿರ್ವಹಣಾ ತಂಡ, ಆಂಬುಲೆನ್ಸ್ ಸಂಚಾರ ನಿರ್ವಹಣೆ ತಂಡ, ತುರ್ತು ಸಂದರ್ಭ ಯೋಜನೆ ನಿರ್ವಹಣೆ ತಂಡ, ಕೃಷಿ ಪರಿಕರ ಪೂರೈಕೆ ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ’ ಎಂದರು.

‘ಕೊರೊನಾ ಪಾಸಿಟಿವ್ ಪ್ರಕರಣಗಳ ಗಂಟಲು ದ್ರವ ಮಾದರಿಯನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಮೂರು ಸೋಂಕಿತರ ವರದಿ ನೆಗೆಟಿವ್ ಎಂದು ಬಂದಿದೆ. ಮತ್ತೊಮ್ಮೆ ಇವರ ಗಂಟಲು ದ್ರವ ಮಾದರಿಯನ್ನು ಎರಡನೇ ಹಂತದಲ್ಲಿ ಕಳುಹಿಸಲಾಗುವುದು. ಎಪಿ ಸೆಂಟರ್ ವಲಯದಲ್ಲಿರುವ ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್ ಮಾಡಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್-19 ನಲ್ಲಿ ಶ್ರಮಿಸುತ್ತಿರುವ ಯಾವುದೇ ಅಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ನಿಮ್ಮಲ್ಲಿರುವ ಮಾಹಿತಿ ನೀಡಿ, ಒಂದು ವೇಳೆ ನಿಮ್ಮಲ್ಲಿ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಕಂಟ್ರೋಲ್‍ನ ರೂಂ ನಂಬರ್ ನೀಡಿ ಅವರಿಗೆ ಸಹಕರಿಸಿ’ ಎಂದರು.

‘ಪಡಿತರ ಆಹಾರ ಧಾನ್ಯ ವಿತರಣೆಗೆ ಒಟಿಪಿ ಕಡ್ಡಾಯವಲ್ಲ. ಪಡಿತರ ಪಡೆಯಲು ಬಂದವರಿಗೆ ಎಲ್ಲರಿಗೂ 2 ತಿಂಗಳ ಪಡಿತರ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸಬೇಕು’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಮಂಟೆ ಸ್ವಾಮಿ ಅವರಿಗೆ ಸೂಚನೆ ನೀಡಿದರು.

ಆಹಾರ ಇಲಾಖೆ ಉಪನಿರ್ದೇಶಕ ಮಂಟೆ ಸ್ವಾಮಿ ಮಾಹಿತಿ ನೀಡಿ, ‘208 ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಂತ್ಯೋದಯ ಕಾರ್ಡ್‌ದಾರರಿಗೆ ಪಡಿತರ ವಿತರಿಸಲಾಗುತ್ತಿದೆ. ಜಿಲ್ಲೆಯ 681 ಅಂಗಡಿಗಳ ಪೈಕಿ, 410 ಅಂಗಡಿಗಳಲ್ಲಿ ಅಕ್ಕಿ ಮಾತ್ರ ಲಭ್ಯವಿದ್ದು, ಭಾನುವಾರ ಶಿವಮೊಗ್ಗದಿಂದ ಗೋದಿ ಬರುತ್ತಿದ್ದು, ಅಕ್ಕಿಯೊಂದಿಗೆ ಗೋದಿಯನ್ನು ವಿತರಿಸಲಾಗುತ್ತದೆ’ ಎಂದರು.

‘ಪಿಎಂ ಕಿಸಾನ್, ಜನಧನ್ ಹಾಗೂ ವಿವಿಧ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರು ಬ್ಯಾಂಕ್‌ಗಳಲ್ಲಿ ಗುಂಪು ಗೂಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು. ಎಟಿಎಂ ಮುಂದೆ ಸರತಿ ಸಾಲು ಇದ್ದರೆ, ಅಲ್ಲಿ ಒಬ್ಬರು ಪೋಲಿಸರನ್ನು ನಿಯೋಜಿಸಬೇಕು. ಬ್ಯಾಂಕ್‍ಗಳು ಸಭೆ ಮಾಡಿ ಈ ಬಗ್ಗೆ ಕ್ರಮ ವಹಿಸಬೇಕು’ ಎಂದರು.

‘ಕೆಲವು ಹೋಲ್‌ಸೆಲ್ ಅಂಗಡಿಗಳಿಂದ ಕಿರಾಣಿ ಅಂಗಡಿಗಳಿಗೆ ಸಾಮಗ್ರಿಗಳು ಸರಬರಾಜಾಗಿಲ್ಲ ಎಂಬ ದೂರುಗಳು ಬರುತ್ತಿದ್ದು, ತಕ್ಷಣ ಅವರಿಗೆ ಸಾಮಗ್ರಿಗಳನ್ನು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು. ಚಿರಡೋಣಿ ಗ್ರಾಮದ ಅಂಗಡಿಯೊಂದರಲ್ಲಿ ₹120 ಇದ್ದ ಶೇಂಗಾ ಬೀಜವನ್ನು ಕೆಜಿಗೆ ₹220 ರಂತೆ ಮಾರುತ್ತಿದ್ದುದು ಗಮನಕ್ಕೆ ಬಂದಾಗ ತಕ್ಷಣ ತೆರಳಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದರು.

ಕ್ವಾರಂಟೈನ್‍ಲ್ಲಿರುವವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಇದಕ್ಕಾಗಿ ಕೆಲ ವಸತಿ ಗೃಹಗಳನ್ನು ಗುರುತಿಸಲಾಗಿದ್ದು, ಅವುಗಳ ಮೇಲುಸ್ತುವಾರಿಗೆ ಸುರೇಶ ರೆಡ್ಡಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ ಎಂದರು.

ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ‘ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, ಪ್ರಸ್ತುತ 70 ಸೋಂಕಿತರಿಗೆ ಚಿಕಿತ್ಸೆಗೊಳಿಪಡುವಷ್ಟು ಎಲ್ಲ ರೀತಿಯ ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲವನ್ನು ಸಿದ್ದವಿಟ್ಟುಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ‘ಐಸೋಲೇಷನ್ ಹಾಗೂ ಹೋಮ್ ಕ್ವಾರಂಟೈನ್ ಅವಧಿ ಮುಗಿದಿರುವವರಿಗೆ ಅವಧಿ ಪೂರೈಸಿರುವ ಬಗ್ಗೆ ದೃಡೀಕರಣ ಪತ್ರವನ್ನು ನೀಡಲಾಗುವುದು. ಕೋವಿಡ್-19 ಕಾರ್ಯದಲ್ಲಿ ಭಾಗವಹಿಸುವ ಆರೋಗ್ಯ ಸಿಬ್ಬಂದಿಗೆ ಐಇಸಿ ತರಬೇತಿ ನೀಡಲಾಗಿದೆ. ಅಲ್ಲದೇ ಅಗತ್ಯವಿರುವ ಔಷಧ ಮಾತ್ರೆಗಳು ಲಭ್ಯವಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಸಿಇಒ ಪದ್ಮ ಬಸವಂತಪ್ಪ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಐಆರ್‍ಎಸ್ ನೋಡಲ್ ಅಧಿಕಾರಿ ಪ್ರಮೋದ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‍ಸಿಟಿ ಎಂ.ಡಿ ರವಿಂದ್ರ ಮಲ್ಲಾಪುರ, ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷೀಕಾಂತ ಬೋಮ್ಮನ್ನರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT